ಡಿವಿಜಿ ಸುದ್ದಿ, ಮೈಸೂರು: ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಬೇಕು ಎನ್ನುವ ಮಹಿಳೆಯರನ್ನೇ ಬಂಡವಾಳ ಮಾಡಿಕೊಂಡು ಕಿರಾತಕನೊಬ್ಬ ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ವಂಚನೆ ಮಾಡಿ ಪರಾರಿಯಾಗಿದ್ದಾನೆ.
ಗಿರೀಶ್ ಅಲಿಯಾಸ್ ಸಿನಿಮಾ ಗಿರೀಶ್ ವಂಚನೆ ಮಾಡಿದ ವ್ಯಕ್ತಿಯಾಗಿದ್ದು, ಈತ ಮೈಸೂರಿನ ಗುರುಕಾರ್ ರೇವಣ್ಣ ರಸ್ತೆಯ ನಿವಾಸಿಯಾಗಿದ್ದಾನೆ. ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಏಸ್ಕೆಪ್ ಆಗಿದ್ದಾನೆ.
ಮಹಿಳೆಯರಿಂದ ಹಣ ಪಡೆಯುವುದನ್ನು ತಾನೇ ಸ್ವತಃ ವಿಡಿಯೋ ಮಾಡುವ ಮೂಲಕ ಮಹಿಳೆಯನ್ನು ನಂಬಿಸುತ್ತಿದ್ದನು. ವಂಚನೆ ಮಾತ್ರವಲ್ಲದೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದಾನೆ.
ಮೊದಲು ಸಿನಿಮಾ, ಧಾರಾವಾಹಿಗಾಗಿ ಕಲಾವಿದರು ಬೇಕು ಎಂದು ಜಾಹೀರಾತು ನೀಡುತ್ತಿದ್ದನು. ಈ ಜಾಹೀರಾತು ನೋಡಿ ಈತನನ್ನು ಭೇಟಿ ಮಾಡಿದವರಿಗೆ ತಾನೇ ಕಥೆ ಹೇಳಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದನು. ತಾನು ಪೊಲೀಸ್ ಎಂದು ಕೂಡ ಕೆಲವು ಕಡೆ ಸುಳ್ಳು ಹೇಳಿದ್ದಾನೆ. ಹೀಗೆ ಸುಳ್ಳು ಹೇಳಿ ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮೋಸ ಮಾಡಿದ್ದಾನೆ.
ವಂಚನೆಗೆ ಒಳಗಾದ ಮಹಿಳೆಯರು ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಗಿರೀಶ್ ತಲೆ ಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಗಿರೀಶ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



