ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಕೆಲವು ಶಾಸಕರ ವಿರೋಧದ ನಡುವೆಯೂ, ನೂರಕ್ಕೆ ನೂರರಷ್ಟು ಮಂತ್ರಿ ಮಾಡುತ್ತೇವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಬಹುತೇಕ ನಿಶ್ಚಯವಾಗಿದೆ. ಇದಕ್ಕೆ ಬಿಜೆಪಿಯೊಳಗೆ ಕೆಲವು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಸಿಎಂ ಅವರೇ ನೂರಕ್ಕೆ ನೂರರಷ್ಟು ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ನಿಮ್ಮ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಯೋಗೇಶ್ವರ್ ಸಂಪುಟಕ್ಕೆ ಬರುವುದು ಖಚಿತವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಯೋಗೇಶ್ವರ್ ವಿಧಾನಪರಿಷತ್‍ಗೆ ನಾಮಕರಣಗೊಂಡಿದ್ದರು.
ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ, ಗೆದ್ದವರು ಎಲ್ಲಿಗೆ ಹೋಗಬೇಕು ಎಂಬುದು ಕೆಲವು ಶಾಸಕರ ವಾದವಾಗಿತ್ತು. ಲಕ್ಷ್ಮಣಸವದಿಯನ್ನು ಡಿಸಿಎಂ ಮಾಡಲಾಗಿದ್ದು, ಮತ್ತೆ ಸೋತವರಿಗೆ ಮಣೆ ಹಾಕುವುದು ಬೇಡ ಎಂದು ಸಚಿವ ಸ್ಥಾನದ ಮೇಲೆ ಆಕಾಂಕ್ಷಿಗಳು ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿತರರ ಮೇಲೆ ಒತ್ತಡ ಹಾಕಿದ್ದರು.
ಯೋಗೇಶ್ವರ್ ಅವರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಲು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಇದು ಸಹಜವಾಗಿ ಮಿತ್ರಮಂಡಳಿಯಲ್ಲೇ ಒಡಕು ಸೃಷ್ಟಿಸಿತ್ತು. ಒಂದು ಗುಂಪು ವಿರೋಧ ವ್ಯಕ್ತಪಡಿಸಿದರೆ, ಕೆಲವರು ಪರವಾಗಿದ್ದರು. ಇದಕ್ಕೆಲ್ಲಾ ಪೂರ್ಣ ವಿರಾಮ ಹಾಕಿರುವ ಸಿಎಂ ಯಡಿಯೂರಪ್ಪ, ಯೋಗಿಶ್ವರ್ ಗೆ ಸಂಪುಟದಲ್ಲಿ ಸ್ಥಾನ ಗಟ್ಟಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.



