ದಾವಣಗೆರೆ: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ರಾಜ್ಯದ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯದಂತೆ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಉಲ್ಭಣಗೊಳ್ಳುವ ಎಲ್ಲಾ ಸಾಧ್ಯತೆಗಳಿರುವುದರಿಂದ, ವಿದೇಶ, ಅಂತರ ರಾಜ್ಯ ಹಾಗೂ ರಾಜ್ಯದ ಗಡಿ ಭಾಗಗಳ ಜಿಲ್ಲೆಗಳಿಂದ ದಾವಣಗೆರೆ ಜಿಲ್ಲೆಗೆ ಬರುವ ವ್ಯಕ್ತಿಗಳು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.
ಕೋವಿಡ್‍ನ ಎರಡನೆ ಅಲೆ ಉಲ್ಬಣವನ್ನು ಜಿಲ್ಲೆಯಲ್ಲಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವಿದೇಶ, ಅಂತರ ರಾಜ್ಯ ಹಾಗೂ ರಾಜ್ಯದ ಗಡಿ ಭಾಗಗಳ ಜಿಲ್ಲೆಗಳಾದ ಬೆಂಗಳೂರು, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ, ಕಾರವಾರ, ಮೈಸೂರು, ಬೀದರ್, ಕಲಬುರ್ಗಿ, ಕೊಡಗು ಜಿಲ್ಲೆಗಳಿಂದ ದಾವಣಗೆರೆ ಜಿಲ್ಲೆಗೆ ಬರುವ ವ್ಯಕ್ತಿಗಳು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಪರೀಕ್ಷೆಯನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ನಗರ ಆರೋಗ್ಯಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಮಾಡಲಾಗುವುದು.
ಜಿಲ್ಲೆಯ ನಗರ ಮತ್ತು ಗ್ರಾಮಗಳ ನಿವಾಸಿಗಳು ತಮಗೆ ಸಂಬಂಧಿಸಿದ ಮನೆಯ ಹತ್ತಿರ, ವಾರ್ಡ್, ಬಡವಾಣೆ ಹಾಗೂ ಗ್ರಾಮಗಳಲ್ಲಿ ಅಂತರ ದೇಶ, ಅಂತರ ರಾಜ್ಯ ಹಾಗೂ ರಾಜ್ಯದ ಗಡಿ ಭಾಗಗಳ ಜಿಲ್ಲೆಗಳಾದ ಬೆಂಗಳೂರು, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ, ಕಾರವಾರ, ಮೈಸೂರು, ಬೀದರ್, ಕಲಬುರ್ಗಿ, ಕೊಡಗು ಜಿಲ್ಲೆಗಳಿಂದ ಈ ಜಿಲ್ಲೆಗೆ ಆಗಮಿಸಿದ್ದಲ್ಲಿ ಕೂಡಲೇ ಅಂತಹವರ ಮಾಹಿತಿಯನ್ನು ಕೋವಿಡ್-19 ವಾರ್ ರೊಂ ಸಂಖ್ಯೆ.8951539500, ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.
ಕೋವಿಡ್-19 ಲಸಿಕೆಯನ್ನು 45 ರಿಂದ 60 ವರ್ಷದೊಳಗಿನ ನಾಗರೀಕರು, ರಕ್ತದೊತ್ತಡ ಮತ್ತು ಮಧುಮೇಹ ಸಹಿತ ಇನ್ನು ಯಾವುದೇ ಗಂಭೀರ ಕಾಯಿಲೆ ಲಕ್ಷಣಗಳು ಇದ್ದವರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ತಮ್ಮ ಆಧಾರ ಕಾರ್ಡ್‍ನೊಂದಿಗೆ ಕೋವಿಡ್-19 ಲಸಿಕೆಯನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ನಗರ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ತಪ್ಪದೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಳೆದ ಮಾರ್ಚ್ 12 ರಂದು ಹೊರಡಿಸಿರುವ ಸುತ್ತೋಲೆ ಅನ್ವಯ ವಿವಿಧ ಸಮಾರಂಭಗಳು ಹಾಗೂ ಆಚರಣೆಗಳ ಸಂದರ್ಭದÀಲ್ಲಿ ಹೆಚ್ಚು ಸಾರ್ವಜನಿಕರು ಗುಂಪು ಸೇರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಅಪಾಯವು ಹೆಚ್ಚಿರುತ್ತದೆ. ಹೀಗಾಗಿ ವಿವಿಧ ಸಂದರ್ಭಗಳಲ್ಲಿ ಈ ಕೆಳಗೆ ಸೂಚಿಸಿದ ಸಂಖ್ಯೆಯನ್ನು ಮೀರದಂತೆ ಮಾತ್ರವೇ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಸೂಚನೆಯಂತೆ ಮದುವೆ ಸಮಾರಂಭಕ್ಕೆ ಸಂಬಂಧಿಸಿದಂತೆ ತೆರೆದ ಪ್ರದೇಶದಲ್ಲಿ ಗರಿಷ್ಟ 500, ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಠ 200 ಮೀರದಂತೆ ಜನ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಜನ್ಮದಿನ ಹಾಗೂ ಇತರೆ ಆಚರಣೆಗಳಲ್ಲಿ ತೆರೆದ ಪ್ರದೇಶದಲ್ಲಿ ಗರಿಷ್ಟ 100 ಜನ, ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಠ 50 ಜನ. ನಿಧನ, ಶವಸಂಸ್ಕಾರ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ ಗರಿಷ್ಠ 100 ಜನ, ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಟ 50 ಜನ ಮೀರುವಂತಿಲ್ಲ. ಅಂತ್ಯಕ್ರಿಯೆ ಸಂದರ್ಭದಲ್ಲಿ ಭಾಗವಹಿಸುವಿಕೆ 50 ಜನ ಮೀರುವಂತಿಲ್ಲ. ಇತರೆ ಸಮಾರಂಭಗಳಲ್ಲಿ 100 ಜನ ಮೀರುವಂತಿಲ್ಲ. ಧಾರ್ಮಿಕ ಆಚರಣೆಗಳು, ಹಾಗೂ ರಾಜಕೀಯ ಆಚರಣೆಗಳು, ಸಮಾರಂಭಗಳಲ್ಲಿ ತೆರದ ಪ್ರದೇಶದಲ್ಲಿ 500 ಜನ ಮೀರುವಂತಿಲ್ಲ.
ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳಾದ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು ಇದನ್ನು ಉಲ್ಲಂಘಿಸಿದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು. ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಅಂತಹವರ ಮೇಲೆ ಎಫ್.ಐ.ಆರ್ ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.