ಡಿವಿಜಿ ಸುದ್ದಿ, ಬೆಂಗಳೂರು: ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ನಗರ ಪ್ರದೇಶದಲ್ಲಿ 1000 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ದಂಡ ವಿಧಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಾಳೆ ಸರ್ಕಾರದಿಂದ ಗುರುವಾರ ಅಧಿಕೃತ ಆದೇಶ ಹೊರ ಬೀಳಲಿದೆ. ಮಾಸ್ಕ್ ಧರಿಸದೆ ಓಡಾಡುವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ 200 ದಂಡವನ್ನು ಹೆಚ್ಚಿಸಲಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಗುರಿ ನಿಗದಿ ಮಾಡಿ, ದಂಡ ವಸೂಲು ಮಾಡಲಾಗುವುದು ಎಂದರು.

ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಮಾವೇಶ, ಮದುವೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗರಿಷ್ಠ 50 ಜನರು ಸೇರಲು ಮಾತ್ರ ಅವಕಾಶವಿರಲಿದೆ. ಹೆಚ್ಚು ಜನ ಸೇರಿದರೆ ಆಯೋಜಕರು ಅಥವಾ ಆ ಸಂಸ್ಥೆ ಮಾಲೀಕರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು.
ಮಾರುಕಟ್ಟೆ, ಮಾಲ್, ಇತರೆ ಸಾರ್ವಜನಿಕ ಸ್ಥಳದಲ್ಲಿ 5ಕ್ಕೂ ಹೆಚ್ಚು ಜನ ಗುಂಪುಗೂಡುವಂತಿಲ್ಲ. ಕನಿಷ್ಠ 6 ಅಡಿ ಅಂತರವಿರಬೇಕು. ಇಲ್ಲವಾದರೆ ಆ ಸಂಸ್ಥೆ ಮಾಲೀಕರಿಗೆ ದಂಡ ವಿಧಿಸಲಾಗುವುದು. ಕೊರೊನಾ ಜಾಗೃತಿ ಸಂಬಂಧ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆ ರಚಿಸಲಾಗಿದೆ.
ರಾಜಕಾರಣಿಗಳು, ಕ್ರೀಡೆ, ಸಿನಿ ತಾರೆಯರು, ಧಾರ್ಮಿಕ ಗುರುಗಳ ಮೂಲಕ ಮಾಸ್ಕ್ ಬಗ್ಗೆ ಕೋರೋನ ನಿಯಂತ್ರಣ ಮಾಡುವ ಸಣ್ಣ ತುಣುಕುಗಳನ್ನು ವಿಡಿಯೋ ಮೂಲಕ ತಲುಪಿಸಲು ಕ್ರಮ. ಜೊತೆಗೆ ಸ್ವಯಂ ಸೇವಾ ಸಂಘಟಕರು, ಲಯನ್ಸ್ ಕ್ಲಬ್ ರೋಟರಿಕ್ಲಬ್, ವೆಲ್‌ಫೇರ್ ಅಸೋಸಿಯೇಷನ್ ಎಲ್ಲರೂ ಸರಕಾರದೊಂದಿಗೆ ಕೈ ಜೋಡಿಸಿದರೆ ನಿರ್ವಹಣೆಗೆ ಹೆಚ್ಚು ಪ್ರಬಲವಾಗಿ ಮಾಡಬಹುದು’ ಎಂದರು.



