ಚಿತ್ರದುರ್ಗ: ತುಮಕೂರು ದಾವಣಗೆರೆ ರೈಲ್ವೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ತುಮಕೂರು, ಚಿತ್ರದುರ್ಗ ಮೂಲಕ ದಾವಣಗೆರೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಗೊಂಡು ಯೋಜನೆಗೆ ಬೇಕಾದ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ಪಿಐಬಿ ಯಲ್ಲಿ ಅನುಮೋದನೆ ದೊರೆತಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯಲು ಕೇಂದ್ರ ಜಲಶಕ್ತಿ ಸಚಿವರನ್ನು ಕೋರಲಾಗಿದೆ. ಯೋಜನೆಗೆ ಅನುಮೋದನೆ ದೊರೆತ ಕೂಡಲೇ ಕಾಮಗಾರಿಗೆ ಪ್ರಾರಂಭಿಸಲು ಹಣಕಾಸಿನ ನೆರವು ದೊರೆಯಲಿದೆ. ಇದು ರಾಜ್ಯದಲ್ಲಿಯೇ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆ ಆಗಲಿದೆ ಎಂದರು.
ಸಚಿವಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ನವದೆಹಲಿಗೆ ಸದ್ಯದಲ್ಲಿಯೇ ಭೇಟಿ ನೀಡಲಿದ್ದೇನೆ. ಚಿತ್ರದುರ್ಗಕ್ಕೆ ಯಾವುದೇ ಮಲತಾಯಿ ಧೋರಣೆ ತೋರಿಲ್ಲ. ರಾಜಕೀಯ ಸನ್ನಿವೇಶದಿಂದ ಚಿತ್ರದುರ್ಗಕ್ಕೆ ಪ್ರಾತಿನಿಧ್ಯ ಕೊಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪ್ರಾತಿನಿಧ್ಯತೆ ನೀಡಲು ಪ್ರಯತ್ನಿಸಲಾಗುವುದು ಎಂದರು.



