ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ;
ದೇವ ದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ.
ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದ ಸತ್ಯ ಸಂಕಲ್ಪಕ್ಕೆ ಭರಮಸಾಗರದ ಐತಿಹಾಸಿಕ ಕೆರೆಗೆ ಗಂಗಾವತರಣವಾಗಿರುವುದು ದಿವ್ಯಸಾಕ್ಷಿಯಾಗಿದೆ.

ಬೇಂದ್ರೆಯವರ ಕವಿತೆಯ ಸಾಲಿನಂತೆ ನೂರಾರು ಸಂಕಷ್ಟಗಳ ಒಳ ಸುಳಿಯನ್ನು ಪರಿಹರಿಸಿದ ಜಲಋಷಿಯ ಆಣತಿಯಂತೆ ತುಂಗಭದ್ರೆಯರು ನುಸುಳಿಕೊಂಡು ಕೆರೆಯಂಗಳದಿ ಅವಿರ್ಭವಿಸಿದ್ದಾರೆ. ಶಿಷ್ಯ ವತ್ಸಲರಾದ ಶ್ರೀಜಗದ್ಗುರುಗಳವರ ಆಶಯದ ಜಲಕಲ್ಯಾಣವೇ ಜನಕಲ್ಯಾಣದ ಸಾಕ್ಷಾತ್ಕಾರದಿ ಪ್ರೇರಣೆ ಹೊಂದಿ ತನ್ನ ಮುಡಿಯಲ್ಲಿದ್ದ ಗಂಗೆಯನ್ನು ಭೂಮಿಗೆ ಇಳಿಸಿದ ಶಿವನು ಶ್ರೀಗುರುವಿನ ಜಲಕೈಂಕರ್ಯವನ್ನು ಕಾಣಲು ಇಂದ್ರಚಾಪವನ್ನು ಇಳಿಸಿ ಈ ಸಂವಹನದಿ ತನ್ನ ಮೂರನೇ ಕಣ್ಣಿನಿಂದ ಭರಮಸಾಗರ ಕೆರೆ ಮಧ್ಯದ ಕಾರಂಜಿಯ ಬಿಂದುವಿಗೆ ಜೋಡಿಸಿ ಕಣ್ಮನ ತಣಿಸಿಕೊಂಡು ಪೂಜ್ಯರ ಕಾಯಕ ಗಂಭೀರತೆ ಮತ್ತು ಸಮಾಜಮುಖಿ ಸದ್ಭಾವನೆಯನ್ನು ದರ್ಶಿಸಿ, ಗಗನದ ಚಲುವನಯ ಕಾಮನಬಿಲ್ಲು ಭೂಮಿಗೆ ಬಾನಿಗೆ ಸೇತುವೆ ಮಾಡಿ ಅವಿರ್ಭವಿಸಿದ ಗಂಗೆಗೆ ಶುಭಕಾಮನೆಯ ಕೋರಿದ ಕಲ್ಪನೆಯ ಒಸಗೆಯ ತೃಪ್ತಿ ಹೊಂದಿದ ಭಾವವು ಸಪ್ತ ವರ್ಣದ ಚಂದದ ಕಮಾನು ಇಮ್ಮಡಿಸಿ ಸಂಪ್ರೀತವಾಗುವಂತೆ ಬುಧವಾರ ಸಂಜೆಯ ಗೋಧೂಳಿ ಸಮಯದಲ್ಲಿ ಕೆರೆಯಂಗಳದಿ ಕಂಡ ಕಾಮನಬಿಲ್ಲಿನ ದೃಶ್ಯ ಭಾಸವಾಗುತ್ತಿದೆ.



