ದಾವಣಗೆರೆ: ಶೇ.30 ರಷ್ಟು ಭತ್ತ ಬೆಳೆ ಕಾಳು ಕಟ್ಟುವ ಹಂತದಲ್ಲಿದ್ದು, ಈ ತಿಂಗಳ ಅಂತ್ಯದವರೆಗೆ ಭದ್ರಾ ನಾಲೆಗೆ ನೀರು ಹರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ. ವಿ. ಅವರಿಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1.4 ಲಕ್ಷ ಎಕರೆಯಲ್ಲಿ ಭತ್ತ ಬೆಳೆದಿದ್ದಾರೆ. ಈಗಾಗಲೇ ಶೇಕಡ 20ರಷ್ಟು ಕೊಯ್ಲಿಗೆ ಬಂದಿದ್ದು, ಕಟಾವು ಕಾರ್ಯ ಪ್ರಾರಂಭವಾಗಿದೆ. ಇನ್ನುಳಿದ ಶೇಕಡ 50ರಷ್ಟು ಭತ್ತದ ಬೆಳೆ ಇನ್ನು ಎಂಟೇತ್ತು ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಆದರೆ ಇನ್ನುಳಿದ ಶೇಕಡ 30 ರಷ್ಟು ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದೆ. ಈ ಬೆಳೆ ನಿತ್ಯ ನೀರು ಬೇಡುತ್ತದೆ. ಇಲ್ಲವಾದರೆ ಕಾಳು ಸಂಪೂರ್ಣ ಕಟ್ಟುವುದಿಲ್ಲ. ರೈತರಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ಹೀಗಾಗಿ ಈ ತಿಂಗಳ ಅಂತ್ಯದವರೆಗೆ ಭದ್ರಾ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ , ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ಕೊಳೇನಹಳ್ಳಿ ಬಿ ಎಂ ಸತೀಶ್ , ಮಾಜಿ ಎ. ಪಿ.ಎಂ.ಸಿ ಮಾಜಿ ಅಧ್ಯಕ್ಷ ಆಲೂರು ನಿಂಗರಾಜ್ ರವರು, ಜಿಲ್ಲಾ ರೈತ ಮೋರ್ಚಾ ಖಜಾಂಜಿ ಅಣಜಿ ಗುಡ್ಡೇಶ್ , ರೈತ ಮುಖಂಡ ಕಕ್ಕರಗೊಳ್ಳ ಕಲ್ಲಿಂಗಪ್ಪ, ಕೆ ಎಸ್ ಮೋಹನ್ ಮತ್ತಿತರರು ಇದ್ದರು.



