ಡಿವಿಜಿ ಸುದ್ದಿ, ಬೆಂಗಳೂರು: ಆರ್.ಆರ್. ನಗರದ ಪಕ್ಷದ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಕ್ಕೆ ಕಿಡಿಕಾರಿದ ಕೆಪಿಸಿಸಿ ಅಧ್ಯಕ್ಷ ಡಿ .ಕೆ. ಶಿವಕುಮಾರ್, ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವನಗರ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ಅಭ್ಯರ್ಥಿ ಹೆಣ್ಣು ಮಗಳ ಮೇಲೆ ಹಾಗೂ ಸಿದ್ದರಾಮಯ್ಯ ಎಸ್ಕಾರ್ಟ್ ಡ್ರೈವರ್ ಮೇಲೆ ಎಫ್‍ಐಆರ್ ಆಗಿದೆ. ಈ ಎಫ್ಐಆರ್‌ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್‍ಗೂ ಹೋಗಲ್ಲ. ಇದಕ್ಕೆ ನಾವು ಹೆದರೋ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರದ ಈ ನಡೆ ಖಂಡನೀಯ. ಬಿಜೆಪಿ ಅಧಿಕಾರದ ದುರ್ಬಳಕೆ ಯಾಗುದತ್ತಿದ್ದು,ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕಿಡಿಕಾರಿದರು.
ನಾಮಪತ್ರ ಹಾಕಲು ಬಂದ ಅಭ್ಯರ್ಥಿ ಮೇಲೆ ಕೇಸು ಹಾಕುವಂತ ಸಣ್ಣ ಹಾಗೂ ನೀಚತನದ ರಾಜಕಾರಣ ಇನ್ನೊಂದಿಲ್ಲ. ಇದಕ್ಕೆ ಪೊಲೀಸರು ಹಾಗೂ ಸರ್ಕಾರವೇ ನೇರ ಕಾರಣ. ನೂರು ಮೀಟರ್ ಒಳಗೆ ಶಾಸಕರು ಸಚಿವರು ಇದ್ದರಲ್ಲ ಅವರ ಮೇಲೆ ಯಾಕೆ ಕೇಸು ಹಾಕಿಲ್ಲ?. ಬಿಜೆಪಿಯವರು ಜನತಾ ದಳದವರು ಯಾರು ಬರಲಿಲ್ವ? ಅವರ ಮೇಲೆ ಯಾಕೆ ಎಫ್‍ಐಆರ್ ಹಾಕಲಿಲ್ಲ?. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಹೆಣ್ಣು ಮಗಳ ಮೇಲಿನ ಶೋಷಣೆಯನ್ನು ಎದುರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಸಮಯ ನಿಗದಿಪಡಿಸಿಕೊಂಡೇ ನಾಮಪತ್ರ ಸಲ್ಲಿಸಿದ್ದೇವೆ. ಇಂಥ ಕ್ರಮದ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು. ಎಫ್‌ಐಆರ್ ದಾಖಲಿಸಿದ ಇನ್‌ಸ್ಪೆಕ್ಟರ್‌ನ್ನು ಅಮಾನತು ಮಾಡಬೇಕು. ಇದಕ್ಕೆಲ್ಲಾ ಕಾಂಗ್ರೆಸ್ ಜಗ್ಗುವುದಿಲ್ಲ. ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಿ 0ಎಂದು ಸವಾಲು ಹಾಕಿದರು.