ವಿಜಯಪುರ: ನವೆಂಬರ್ 25ರ ನಂತರ ಮಾತನಾಡುತ್ತೇನೆ ಎಂದಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದು, ಪರೋಕ್ಷವಾಗಿ ತಮ್ಮದೇ ಪಕ್ಷದ ಕುಟುಂಬ ರಾಜಕಾರಣದ ಕಿಡಿಕಾರಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಯತ್ನಾಳ್, ಎಲ್ಲವನ್ನೂ ಹೈಕಮಾಂಡ್ ವೀಕ್ಷಿಸುತ್ತಿದೆ. ವಂಶ ಪಾರಂಪರ್ಯ ರಾಜಕಾರಣಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲಎಂದು ಹೇಳಿದ್ದಾರೆ. ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ನಮ್ಮ ದೇಶದ ವಂಶಾಡಳಿತ ರಾಜಕೀಯ ವ್ಯವಸ್ಥೆ ಬಗ್ಗೆ ಹಾಗೂ ವಂಶಾಡಳಿತ ಭ್ರಷ್ಟಾಚಾರವನ್ನು ಬೇರು ಸಮೇತವಾಗಿ ಕಿತ್ತೊಗೆಯುವ ಘೋಷಣೆ ಮಾಡಿದ್ದು ರಾಷ್ಟ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ರಾಷ್ಟ್ರವನ್ನು ಎರಡು ಬಾರಿ ಉದ್ದೇಶಿಸಿ ಮಾತನಾಡಿದ ಅವರು ವಂಶಾಡಳಿತ ಕುಟುಂಬಗಳ ನಡೆಸಿರುವ ವ್ಯಾಪಕ ಭ್ರಷ್ಟಾಚಾರ ದುರಹಂಕಾರ, ಇಡೀ ಕುಟುಂಬ ಅಧಿಕಾರದ ಐಷಾರಾಮಿ ನಿಜಕ್ಕೂ ಹೇಸಿಗೆ ತರುವಂತಹದ್ದು ಎಂದಿದ್ದಾರೆ.
ಪಕ್ಷಕ್ಕಾಗಿ ಪೂರ್ತಿ ಜೀವನ ಹಗಲು ರಾತ್ರಿ ಮನೆ ಮಠ ಬಿಟ್ಟು ದುಡಿದ ಕಾರ್ಯಕರ್ತರು ಯಾವುದೇ ಅಧಿಕಾರ ಅನುಭವಿಸದೆ, ತಮ್ಮ ಜೀವನದ ಅಂತ್ಯದಲ್ಲಿ ಆರೋಗ್ಯ, ಆರ್ಥಿಕ ಮತ್ತು ವ್ಯಕ್ತಿಗತ ಹಾಳು ಮಾಡಿಕೊಂಡಿರುವ ಕಾರ್ಯಕರ್ತರಿಗೆ ಹೊಸ ಆಶಾಕಿರಣ ಮೂಡಿಸಿದೆ ಎಂದು ಯತ್ನಾಳ್ ಫೇಸ್ ಬುಕ್ ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಬಹಿರಂಗವಾಗಿ ಟೀಕಿಸಿದ್ದ ಯತ್ನಾಳ್, ಇನ್ನು ನವೆಂಬರ್ 25 ವರಗೆ ಸುಮ್ಮನಿರುತ್ತೇನೆ ಎಂದು ಹೇಳಿದ್ದರು. ಸಚಿವ ವಿ.ಸೋಮಣ್ಣ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದರು.



