-ಶ್ರೀ ತರಳಬಾಳು ಜಗದ್ಗುರು, ಡಾ|| ಶಿವಮೂರ್ತಿ ಶಿವಾಚಾರ್ಯ, ಮಹಾಸ್ವಾಮಿಗಳವರು, ಸಿರಿಗೆರೆ
ಹೊಸ ವರ್ಷ 2021 ಈ ದಿನ ಮಧ್ಯ ರಾತ್ರಿ 12 ಗಂಟೆಗೆ ಒಳಗೆ ಬರಲು ಹೊಸ್ತಿಲ ಬಳಿ ಕಾದು ನಿಂತಿದೆ. ಹೊಸ ವರುಷ ಬಂದಿತೆಂದರೆ ಹೊಸ ಹರುಷ. ಅದರಲ್ಲೂ ಯುವಜನತೆ ಸ್ವಾಗತಿಸಿ ಸಂಭ್ರಮಿಸಲು ತುದಿಗಾಲಲ್ಲಿ ನಿಲ್ಲುವ ಸುಸಂದರ್ಭವಿದು. ಆದರೆ ಅಂತಹ ಸಂಭ್ರಮಕ್ಕೆ ಈ ಸಲ ಗ್ರಹಣ ಹಿಡಿದಿದೆ. ಅದಕ್ಕೆ ಕಾರಣವೆಂದರೆ ಹೊರ ನಡೆಯಬೇಕಾದ 2020ನೇ ವರ್ಷದಲ್ಲಿ ಜರುಗಿದ ಕರುಳರಿಯುವ ವಿದ್ಯಮಾನಗಳು. ಮಾನವ ಇತಿಹಾಸ ಕಂಡ ಅತ್ಯಂತ ಕರಾಳ ವರ್ಷವೇ 2020. ಈ ವರ್ಷದ ಕತ್ತಲೆ ಕೊನೆಗೊಂಡು ಹೊಸ ವರ್ಷದ ಹೊಸಬೆಳಕು ಮೂಡಲಿದೆ ಎಂಬ ಆಶಾಭಾವನೆ ಜನರಿಗೆ ಇತ್ತು. ಆದರೆ ಈಗ ಬ್ರಿಟನ್ ನಿಂದ ಕೊರೊನಾದ ಇನ್ನೊಂದು ಕರಾಳ ಅವತಾರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವ ಜನರ ಉತ್ಸಾಹಕ್ಕೆ ಕೊಡಲಿ ಪೆಟ್ಟು ಕೊಟ್ಟದೆ.

25 ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಟನ್‌ನಿಂದ ಬರುವ ವಿಮಾನಗಳಿಗೆ ತಮ್ಮ ದೇಶದೊಳಗೆ ಬರದಂತೆ ನಿಷೇಧ ಹೇರಿವೆ. ತಮ್ಮ ದೇಶದಿಂದ ಅಲ್ಲಿಗೆ ಹೋಗುವ ವಿಮಾನಗಳನ್ನೂ ರದ್ದುಗೊಳಿಸಿವೆ. ಅವುಗಳಲ್ಲಿ ಭಾರತವೂ ಸಹ ಒಂದು. ನಿಷೇಧ ಹೇರುವುದಕ್ಕೆ ಮೊದಲು ಆ ದೇಶದಿಂದ ಇಲ್ಲಿಗೆ ಬಂದವರಲ್ಲಿ ಸೋಂಕಿಗೆ ಒಳಗಾದವರಿದ್ದಾರೆ ಎಂಬ ಆಶಂಕೆಯಿಂದ ಹೊಸ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ನಮ್ಮ ದೇಶಕ್ಕೆ ಕೊರೊನಾ ಕಾಲಿಟ್ಟದ್ದೇ ವಿದೇಶಗಳಿಂದ ಬಂದವರಿಂದ. ಪಾಶ್ಚಾತ್ಯ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯನ್ನು ಹಾಳುಮಾಡಿದಂತೆ ವಿದೇಶದಿಂದ ಬಂದ ಈ ಕೊರೊನಾ ಸೋಂಕು ನಮ್ಮ ದೇಶದ ಜನರ ದೈಹಿಕ ಆರೋಗ್ಯವನ್ನು ಹಾಳು ಮಾಡಿತು. ಈಗ ಅದು ತಹಬಂದಿಗೆ ಬಂದಿತು ಎನ್ನುವಷ್ಟರಲ್ಲೇ, ಇನ್ನೇನು ವ್ಯಾಕ್ಸಿನ್ ಬಂದೇ ಬಿಟ್ಟಿತು, ಇನ್ನು ಭಯವಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಕೊರೊನಾ ಮಾರಿಯ ಹೊಸ ಅವತಾರ ದೇಶಕ್ಕೆ ಕಾಲಿಟ್ಟದೆ. ಎಂಬ ಸುದ್ದಿ ಜನರ ನಿದ್ದೆಗೆಡಿಸಿದೆ. ನೂರು. ವರ್ಷಗಳ ಹಿಂದೆ ಇಂಥಹುದೇ ದಾರುಣ ಪರಿಸ್ಥಿತಿ ಜಗತ್ತಿಗೆ ಒದಗಿತ್ತು. ವಿಜ್ಞಾನ ಇಷ್ಟೊಂದು ಮುಂದುವರಿಯದಿದ್ದ ಆ ಕಾಲದಲ್ಲಿ ಆಗಿನ ಹಿರಿಯ ತಲೆಮಾರಿನ ಜನರು.ಎಂತಹ ನೋವು, ಸಂಕಟ ಉಂಡಿರಬಹುದು.ಎಂದು ಊಹಿಸಿಕೊಂಡರೆ ಹೃದಯ ಹಿಂಡಿದಂತಾಗುತ್ತದೆ.

ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳುವುದು ವ್ಯಾವಹಾರಿಕ ರೂಢಿಯಾಗಿದೆ. ಆದರೆ ಕಾಲವು ನಿರಂತರವಾಗಿ ಹರಿಯುವ ಪ್ರವಾಹ ಇದ್ದ ಹಾಗೆ. ಅದಕ್ಕೆ ಆದಿಯೂ ಇಲ್ಲ; ಅಂತ್ಯವೂ ಇಲ್ಲ. ಭೂಮಿಯ ಚಲನೆಯಿಂದ ದಿನ, ಮಾಸ, ವರ್ಷ, ಶತಮಾನ ಎಂದು ಕಾಲಮಾನ ನಿಗದಿಯಾಗುತ್ತದೆ.ಋತುಮಾನಗಳು ಉಂಟಾಗುತ್ತವೆ. ಆದರೆ ಕಾಲಕ್ಕೆ ಅಂತಹ ವಿಭಾಗ ಎಂಬುದಿಲ್ಲ. ಅದು ಅಖಂಡ, ಅನಾದಿ ಮತ್ತು ಅನಂತ! ನದಿಯ ಮೂಲಸ್ರೋತ ನಿಂತಿತು ಎಂದರೆ, ಸರಿಯಾಗಿ ಮಳೆಯಾಗಲಿಲ್ಲವೆಂದರೆ ನದಿಯು ಬತ್ತಿ ಹೋಗುತ್ತದೆ. ಅದು ಎಲ್ಲ ಕಾಲದಲ್ಲೂ ಜನರ ಅನುಭವಕ್ಕೆ ಬಂದಿರುವ ವಿಚಾರ. ಬರಗಾಲ, ಸುಭಿಕ್ಷ ಇವೆಲ್ಲಾ ಅನುಭವ ವೇದ್ಯವೇ ಸರಿ. ಆದರೆ ಭೂಮಿಯ ಚಲನೆಯು ನದಿಯು ಬತ್ತಿದಂತೆ ನಿಂತುಹೋಗುವ ಸ್ಥಿತಿ ಉಂಟಾಗಿಲ್ಲ, ಉಂಟಾಗುವುದೂ ಇಲ್ಲ. ಹಾಗಾಗಬೇಕಾದರೆ ಸೌರವ್ಯೂಹಕ್ಕೇ ಆಪತ್ತು ಬರಬೇಕು. ಸೂರ್ಯನ ಆಯಸ್ಸು ಮುಗಿದುಹೋಗಬೇಕು!

ಪ್ರಕೃತಿಯಲ್ಲಿ ಕಂಡುಬರುವ ಯತುಮಾನಗಳಂತೆ ಮನುಷ್ಯನ ಮನಸ್ಸಿನಲ್ಲೂ ಒಂದು ಋತುಚಕ್ರವಿದೆ. ಅವನೂ ಪ್ರಕೃತಿಯ ಒಂದು ಭಾಗವಾಗಿರುವುದರಿಂದ,ಪಂಚಭೂತಗಳಿಂದ ಮಾನವ ಶರೀರ ಸೃಷ್ಟಿಯಾಗಿರುವುದರಿಂದ ಪ್ರಕೃತಿಯಲ್ಲಿ ಹೇಗೆ ಏರುಪೇರುಗಳಾಗುತ್ತವೆಯೋ, ವಿಭಿನ್ನ ಖುತುಮಾನಗಳು ಸಂಭವಿಸುತ್ತವೆಯೋ ಹಾಗೆಯೇ ಮನುಷ್ಕನ ಶರೀರದ ಅಂಗಾಂಗಗಳಲ್ಲಿ ಮಾರ್ಪಾಡುಗಳು ಮತ್ತು ಮಾನಸಿಕ ಸಂವೇದನೆಗಳೂ ಏರುಪೇರಾಗುತ್ತವೆ. ಹವಾಮಾನ ವೈಪರೀತ್ಯದಿಂದ ಗುಡುಗು, ಮಿಂಚು, ಸಿಡಿಲು ಸುನಾಮಿಗಳು ಉಂಟಾಗುವಂತೆ ಮನುಷ್ಯ ಜೀವನದ ಗತಿಯಲ್ಲಿ ಮಾನಸಿಕ ಒತ್ತಡಗಳು, ತುಮುಲಗಳು, ಭಾವನೆಗಳ ಸುನಾಮಿಗಳು ಉದ್ಭವಿಸುತ್ತವೆ. ಬಿರುಗಾಳಿಗೆ ಗಿಡಮರಗಳು ಉರುಳಿ ಬಿದ್ದಂತೆ ಮನುಷರಲ್ಲಿಯೂ ಸಾವು ನೋವುಗಳು ಸಂಭವಿಸುತ್ತವೆ. ಕಳೆದ ಬಾರಿ ಬರೆದ ಅಂಕಣಕ್ಕೆ ಓದುಗರಿಂದ ಅನೇಕ ಮನ ಮಿಡಿಯುವ ಪ್ರತಿಕ್ರಿಯೆಗಳು ಬಂದಿವೆ.
ನಮ್ಮ ಅಂಕಣವನ್ನು ನಿರಂತರವಾಗಿ ಓದುತ್ತಾ ಬಂದಿರುವ ಧಾರವಾಡದ ಶ್ರೀಮತಿ ಪ್ರೀತಿ ಎಸ್ ಗೊಬ್ಬಾಣಿಗೆ ಆ ದಿನ ಬೆಳಗ್ಗೆ ಓದಲು ಆಗಲಿಲ್ಲ. ಕಾರಣ ಹಿಂದಿನ ರಾತ್ರಿ ಅವರ ಸೋದರ ಮಾವನ ಸಾವಿನ ಸುದ್ದಿ ಅನಿರೀಕ್ಷಿತವಾಗಿ ಬರಸಿಡಿಲಿನಂತೆ ಬಂದೆರಗಿತ್ತು. ಅವರ ತಾಯಿ ಸುದ್ದಿ ಕೇಳಿ ಆಫಾತದಿಂದ ತತ್ತರಿಸಿಹೋಗಿದ್ದರು. ನಂತರ ಸಾವರಿಸಿಕೊಂಡು ಓದಿದಾಗ “ಪವಾಡವೋ, ಕಾಕತಾಳೀಯವೋ, ನಮ್ಮ ನಂಬಿಕೆಯೋ ಗೊತ್ತಿಲ್ಲ ಶ್ರೀಗುರುಗಳವರು ನಮ್ಮ ದುಃಖಕ್ಕೆ ಸಾಂತ್ವಾನ ನೀಡಲೆಂದೇ ಬರೆದಿದ್ದಾರೆಂದು. ಭಾಸವಾಯಿತು. ‘ಇನ್ನೇನು ಗತಿಯೆಂದು ಬೆದರದಿರು, ನಿನ್ನ ಕೈಯೊಳಗಿಹುದೇ ವಿಧಿಯ ಲೆಕ್ಕಣಿಕೆ’ ಎನ್ನುವ ಡಿ.ವಿ.ಜಿ ಯವರ ಪದ್ಯ ನೆನಪಾಯಿತು” ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ರೀತಿ ಸಿರಿಗೆರೆಯಲ್ಲಿಯೇ ಹುಟ್ಟಿ ಬೆಳೆದ ಇನ್ನೋರ್ವ ಯುವ ಮಹಿಳೆ ಶ್ರೀಮತಿ ಜಿ.ಟಿ. ವಿದ್ಯಾ “ಕಳೆದ ಮೂರು ವಾರಗಳ ಬಿಸಿಲು ಬೆಳದಿಂಗಳು ಅಂಕಣ ಬರಹ ಜೀವನದಲ್ಲಿ ತುಂಬಾ ನೊಂದಿರುವ ನನಗೆ ಸಮಾಧಾನ ಹೇಳಲೆಂದೇ ಬರೆದ ಬರಹಗಳಂತೆ ಭಾಸವಾಗುತ್ತಿವೆ, ವಿಧಿಯು ನನ್ನ ಜೀವನದಲ್ಲಿ ಅಂತಹ ಕ್ರೌರ್ಯವನ್ನು ತೋರಿಸಿಬಿಟ್ಟದೆ” ಎಂದು ಗದ್ಗದಿತರಾಗಿ ಮಿಂಚೋಲೆಯನ್ನು ಬರೆದಿದ್ದಾರೆ. ನಮ್ಮ ಮಠದ ಶಾಲೆಯೊಂದರಲ್ಲಿ ಅಧ್ಯಾಪಕರಾಗಿದ್ದ ಇವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡರು. ತಾಯಿ ತುಂಬಾ ಕಷ್ಟಗಳ ನಡುವೆ ಬೆಳೆಸಿ ಓದಿಸಿ ಮದುವೆ ಮಾಡಿದರು. ಕೆಲವು ವರ್ಷಗಳ ಹಿಂದೆ ಪತಿಯು ಮೋಟಾರು ಬೈಕಿನಲ್ಲಿ ಊರಿಗೆ ಬರುವಾಗ ಅಪಘಾತವಾಗಿ ತಲೆಗೆ ಬಲವಾದ ಪೆಟ್ಟು ಬಿದ್ದು ಓಡಾಡುವಂತಿಲ್ಲ, ಮಾತನಾಡಲೂ ಸಾಧ್ಯವಾಗುತ್ತಿಲ್ಲ. ಪಿ.ಯು.ಸಿ. ಓದುತ್ತಿದ್ದ ಹಿರಿಯ ಮಗ ಕೊರೊನಾ ಕಾರಣದಿಂದ ಊರಿಗೆ ಬಂದವನು ಮನೆಯಲ್ಲಿಯೇ ಇದ್ದ. ಪಕ್ಕದ ಮನೆಯ ಸ್ನೇಹಿತನ ಜೊತೆ ಇಲ್ಲೇ ಸ್ವಲ್ಪ ದೂರ ಹೋಗಿಬರುತ್ತೇನೆಂದು ಕಾರಿನಲ್ಲಿ ಹೋದವನು ಮರಳಿ ಮನೆಗೆ ಬರಲೇ ಇಲ್ಲ.ಕಾರು ಅಪಘಾತದಲ್ಲಿ ಸ್ಥಳದಲ್ಲಿಯೇ ಅಸುನೀಗಿದ. ಇನ್ನಿಬ್ಬರು ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾದಂತೆ ವಿಧಿಯು ತನ್ನ ಮಗನನ್ನೂ ಗಾಯಗೊಳಿಸಿ ಬದುಕಿಸಿಕೊಡಬಹುದಾಗಿತ್ತಲ್ಲಾ! “ಬುದ್ಧಿ, ತಾವೇ ಹೇಳಿ ದೇವರೇಕೆ ನನ್ನ ಜೀವನದಲ್ಲಿ ಇಷ್ಟೊಂದು ಕ್ರೌರ್ಯವನ್ನು ತೋರಿಸುತ್ತಿದ್ದಾನೆ, ನಾನು ಮಾಡಿರುವ ತಪ್ಪಾದರೂ ಏನು? ಮುಂದಿನ ಜೀವನದ ಬಗ್ಗೆ ಭರವಸೆಯೇ ಇಲ್ಲದಂತಾಗಿದೆ. ಮುಂದೇನು ಕಾದಿದೆಯೋ ಎಂಬ ಆತಂಕ ನಿರ್ಮಾಣವಾಗಿದೆ” ಎಂದು ಭಾರವಾದ ಮನಸ್ಸಿನಿಂದ ಬರೆದಿದ್ದಾಳೆ. ಸಮಾಧಾನಪಡಿಸಲೆಂದು ದೂರವಾಣಿ ಕರೆ ಮಾಡಿದಾಗ ದುಃಖ ಉಮ್ಮಳಿಸಿ ‘ತಮ್ಮ ಪಾದಗಳನ್ನು ಗಟ್ಟಯಾಗಿ ಹಿಡಿದು ಕಣ್ಣೀರಿನಿಂದ ತೊಳೆಯಬೇಕೆನಿಸಿದೆ’ ಎಂದು ಭಾವುಕಳಾಗಿ ನುಡಿದಳು.
ಬೇಸಗೆಯ ಉರಿಬಿಸಿಲನ್ನು ಮಳೆಗಾಲ ತಂಪಾಗಿಸುತ್ತದೆ. ಚಳಿಗಾಲದ ಮೈಕೊರೆಯುವ ಚಳಿಯು ಬೇಸಗೆಗೆ ಹಂಬಲಿಸುವಂತೆ ಮಾಡುತ್ತದೆ. ಹಾಗೆಯೇ ಧೃತಿಗೆಡದೆ ನಡೆದರೆ ಬದುಕಿನಲ್ಲಿ ಬಂದೆರಗಿದ ತಾಪವು ತಣ್ಣಗಾಗುತ್ತದೆ. ಬದುಕಿನಲ್ಲಿ ಬಿಸಿಲೂ ಇದೆ, ಬೆಳದಿಂಗಳೂ ಇದೆ. ಹೊಸ ವರ್ಷದ ಆಚರಣೆ, ಹಬ್ಬ ಹರಿದಿನಗಳ ಸಡಗರ ಸಂಭ್ರಮಗಳು ಮನುಷ್ಯನ ಮನಸ್ಸನ್ನು ಆಹ್ಹಾದಗೊಳಿಸಲು ಇರುವ ಸಂದರ್ಭಗಳು. ಇವು ಹಣ್ಣೆಲೆ ಉದುರಿದರೂ ಮರದ ರೆಂಬೆಯಲ್ಲಿ ಚಿಗುರೆಲೆ ಮೂಡಿಸಿದಂತೆ. ಈ ಸಂದರ್ಭಗಳು ಕಷ್ಟಕೋಟಲೆಗಳಿಗೆ ಬೇಸತ್ತು ಒಣಗಿ ಹೋದ ಮನುಷ್ಯನ ಮನಸ್ಸಿಗೆ ಮುಲಾಮು ಸವರುತ್ತವೆ. ಮುದುಡಿದ ಮನಸ್ಸನ್ನು ಅರಳಿಸುತ್ತದೆ; ಬದುಕಿನಲ್ಲಿ ಹೊಸ ತಂಗಾಳಿ ಸುಳಿಯುತ್ತದೆ. ಭರವಸೆ ಕಳೆದುಕೊಂಡ ಬದುಕಿನಲ್ಲಿ ಹೊಸ ಆಶಾಭಾವನೆಯ ಅರುಣೋದಯವಾಗುತ್ತದೆ! ಏನೇ ವಿಪತ್ತುಗಳು ಬಂದರೂ ಅದನ್ನು ದೇವರಪ್ರಸಾದವೆಂಬಂತೆ ಸ್ವೀಕರಿಸುವವನು ಸುಖಿಸಬಲ್ಲ. ಸುಖ ಬಂದರೆ ಹಿಗ್ಗಲಾರ,ಕಷ್ಟ ಬಂದರೆ ಕುಗ್ಗಲಾರ; ನೆರಳಲ್ಲಿ ನಿಂದರೆ ನೆರಳ ಲಿಂಗಾರ್ಪಿತವ ಮಾಡಿ, ಬಿಸಿಲಲ್ಲಿ ನಿಂದರೆ ಬಿಸಿಲ ಲಿಂಗಾರ್ಪಿತವ ಮಾಡಿ, ಲಿಂಗಭೋಗೋಪಭೋಗಿಯಾಗಬಲ್ಲವನೇ ಸುಖಿ! ಅಂತಹವನ ಬದುಕು ಬೆಳದಿಂಗಳಿನಿಂದ ಅರಳುವುದೂ ಇಲ್ಲ ಬಿಸಿಲಿನಿಂದ ಬಳಲುವುದೂ ಇಲ್ಲ! ಆತನೇ ಗೀತೆಯಲ್ಲಿ ಬಣ್ಣಿಸಿದ ಸ್ಥಿತಪ್ರಜ್ಞ!

ನಲವತ್ತು ವರ್ಷಗಳ ಹಿಂದೆ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗಾ ಇಟಲಿಯ ರೋಂ ನಗರದಲ್ಲಿರುವ ಸೇಂಟ್ ಪೀಟರ್ ಚರ್ಚಿನ ಮೇಲು ಚಾವಣೆಯಿಂದ ಕ್ರಿಸ್‌ಮಸ್ ಆಚರಣೆಯನ್ನು ಪ್ರತ್ಯಕ್ಷವಾಗಿ ನೋಡುವ ಸುವರ್ಣಾವಕಾಶ ನಮಗೆ ದೊರೆತಿತ್ತು.ಮುಂಭಾಗದಲ್ಲಿರುವ ಸೈಂಟ್ ಪೀಟರ್ಸ್ ಚೌಕದ ತುಂಬಾ ಲಕ್ಷಾಂತರ ಕೈಸ್ತ ಧರ್ಮೀಯರು ಜಮಾಯಿಸಿದ್ದರು.

ನಮಗೆ ನೆನಪಿರುವಂತೆ ಆಗಿನ ಎರಡನೆಯ ಪೋಪ್ ಜಾನ್ ಪಾಲ್ ಬಹಿರಂಗ ಪ್ರಾರ್ಥನೆಯನ್ನು ನಡೆಸಿಕೊಟ್ಟದ್ದರು. ಅಲ್ಲಿ ಸೇರಿದ್ದ ಲಕ್ಷಾಂತರ ಶ್ರದ್ಧಾಳುಗಳೆಲ್ಲರೂ ಏಕಕಂಠದಿಂದ ಸುಶ್ರಾವ್ಯವಾಗಿ ಹಾಡಿದ ಸಮೂಹ ಗಾಯನ ಆಗಸದಲ್ಲಿ ಗೂಂಜಿಡುತ್ತಿದ್ದುದು ಈಗಲೂ ನಮ್ಮ ಸರಣೆಯಲ್ಲಿ ಅಚ್ಚಹಸಿರಾಗಿ ಉಳಿದಿದೆ! ಪ್ರತಿ ವರ್ಷ ನಡೆಯುತ್ತಾ ಬಂದ ಈ ಕ್ರಿಸ್‌ಮಸ್ ಹಬ್ಬದ ಸಡಗರ ಈ ವರ್ಷ ಕೊರೊನಾ ಕಾರಣದಿಂದ ಸಾಧವಾಗಿಲ್ಲ.

2020 ನಮ್ಮ ತಲೆಮಾರಿನ ಅತಿ ಕಾರ್ಗತ್ತಲ ಕಾಲ.ಕೊರೊನಾ ಹೆಮಾಧಿಯ ವಜ್ರಾಥಾತಕ್ಕೆ ಸಿಲುಕಿ ವಿಶ್ವದಾದ್ಕಂತ ಲಕ್ಷಾಂತರ ಪರಿವಾರಗಳು ತಮ್ಮ ಕುಟುಂಬದ ಸದಸ್ಯರನ್ನು, ಬಂಧುಬಾಂಧವರನ್ನು, ಆಪ್ತೇಷ್ಟರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಈ ದಾರುಣವಾದ ಕಗ್ಗತ್ತಲೆ ದೇವರ ಕೃಪೆಯಿಂದ ಈ ವರ್ಷದೊಂದಿಗೇ ಕೊನೆಗೊಳ್ಳಲಿ ! ಹೊಸವರ್ಷವು ಹೊಸ ಬೆಳಕು, ಹೊಸ ಸುಖ ಸಂತೋಷಗಳನ್ನು ತರುವಂತಾಗಲಿ! ಇಡೀ ಪ್ರಪಂಚವು ಬೇಗನೆ ಸಹಜ ಬದುಕಿಗೆ ಮರಳುವಂತಾಗಲಿ! ಎಂಬುದೇ ನಮ್ಮ ಹಾರೈಕೆ!
ನಮ್ಮ ಅಂಕಣದ ನಿಯಮಿತ ಓದುಗರಾದ ಬೆಂಗಳೂರಿನ ಎಸ್. ಕೃಷ್ಣಮೂರ್ತಿಯವರು ಈ ದಿನ ಮಧ್ಯ ರಾತ್ರಿಗೆ ನಿರ್ಗಮಿಸುತ್ತಿರುವ 2020 ನೇ ವರ್ಷವನ್ನು ಕುರಿತು ಬರೆದ ಪರಿಷ್ಕೃತ ಪದ್ಮ ಮನೋಜ್ನನವಾಗಿದೆ:
ತೊಲಗಾಚೆ ದೂರ 2020
ಮುಚ್ಚಿದ ಕಂಗಳ ವಿದಾಯ ನಿನಗೆ, ಮತ್ತೆ ನೀ ಕಾಣದಿರು, ಕಾಡದಿರು ತೊಲಗಾಚೆ ದೂರ 2020
ದುಡಿವ ಕೈಗಳ ಕನಸಿನ ಕೆಲಸ ಕಸಿದೆ,
ದಿನದುಡಿಮೆಯವರ ಹೊಟ್ಟೆಗೆ ಹೊಡೆದೆ,
ಬದುಕನು ಭರಿಸಲಾಗದ ಬವಣೆಯಾಗಿಸಿದೆ
ಮಿನುಗುವ ಕಂಗಳಲಿ ಕಂಬನಿಯ ತುಂಬಿದೆ,
ತೊಲಗಾಚೆ ಛೀ ಪಾಪಿ 2020!
ಹಿರಿಯ ಜೀವಗಳು ಬೆಂದು ಬಸವಳಿದು
ನೋಡು ನೋಡುತಲೇ ಅಂತರ್ಧಾನರಾದರು.
ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,
ತೊಲಗಾಚೆ ಛೀ ಪಾಪಿ 2020!
ನೆನ್ನೆ ಮೊನ್ನೆ ಕಂಡ ಗೆಳೆಯರು, ಮನಬಿಚ್ಚಿ ಬೆರತು ನಕ್ಕವರು, ತಿರುಗಿ ನೋಡುವಷ್ಟರಲಿ ಮರೆಯಾದರು, ನಿನ್ನ ಕ್ರೂರ ನೋಟಕೆ ಬಲಿಯಾದರು, ತೊಲಗಾಚೆ ಛೀ ಪಾಪಿ 2020!
ಕಂದಮಗಳ ಕಲಿವ ಶಾಲೆಯ ಮುಚ್ಚಿಸಿದೆ,
ಹೊರಗೆ ಕಾಲಿಡುವ ಧೈರ್ಯವ ಕಸಿದೆ,
ಗೆಳೆಯರೊಡನೆ ಬೆರೆಯದಂತೆ ಬಂದಿಯಾಗಿಸಿದೆ,
ಮೃದು ಮನಗಳ ಮೇಲೆ ಮಾಯದ ಬರೆಯೆಳೆದೆ,
ಮತ್ತೆ ನೀನಿತ್ತ ಸುಳಿಯದಿರು, ತೊಲಗಾಚೆ ಛೀ ಪಾಪಿ 2020!