Connect with us

Dvgsuddi Kannada | online news portal | Kannada news online

ವಿಶ್ವಸಂದೇಶ ನೀಡುವ ಶೃತಿಗೈದ ವೀಣೆ..!

ಪ್ರಮುಖ ಸುದ್ದಿ

ವಿಶ್ವಸಂದೇಶ ನೀಡುವ ಶೃತಿಗೈದ ವೀಣೆ..!

-ಶ್ರೀ ತರಳಬಾಳು ಜಗದ್ಗುರು ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಿರಿಗೆರೆ.

ರಾತ್ರಿ ಸುಮಾರು 9 ಗಂಟೆ ಇರಬಹುದು. ಆಗ ತಾನೇ ಪೂಜೆ ಪ್ರಸಾದ ಮುಗಿಸಿಕೊಂಡು ಬಂದು ಏನನ್ನೋ ಓದುತ್ತಾ ಕುಳಿತಿದ್ದೆವು. ಪಕ್ಕದಲ್ಲಿದ್ದ ನಮ್ಮ ಮೊಬೈಲ್‌ ರಿಂಗಣಿಸಿತು. ಎತ್ತಿಕೊಂಡು ನೋಡಿದಾಗ ಹೆಸರಿಲ್ಲದ ಸಂಖ್ಯೆ ಕಾಣಿಸಿತು. ಸಾಮಾನ್ಯವಾಗಿ ನಮ್ಮ ಮೊಬೈಲ್‌ನಲ್ಲಿ ಹೆಸರು ದಾಖಲಾಗದ ಅಪರಿಚಿತ ಫೋನ್‌ ನಂಬರ್‌ಗಳಿಗೆ ಉತ್ತರಿಸುವುದಿಲ್ಲ. ಹಾಗೆಂದು ಆ ಕರೆಗಳನ್ನು ಉದಾಸೀನ ಮಾಡುವುದೂ ಇಲ್ಲ. ಆಪ್ತ ಸಹಾಯಕರಿಗೆ ಆ ನಂಬರನ್ನು ಮುಂತಳ್ಳಿ ಕರೆ ಮಾಡಿದವರು ಯಾರೆಂದು ತಿಳಿದ ಮೇಲೆಯೇ ಉತ್ತರಿಸುವುದು ನಾವು ರೂಢಿಸಿಕೊಂಡು ಬಂದ ಪದ್ಧತಿ. ಅದೇಕೋ ಏನೋ ಆಗ ಬಂದಿದ್ದ ಅಪರಿಚಿತ ಕರೆಗೆ ಉತ್ತರಿಸಬೇಕೆನ್ನಿಸಿತು. ಕರೆಯನ್ನು ಸ್ವೀಕರಿಸಿ ಹಲೋ ಎಂದಾಗ ಆಚೆ ಬದಿಯಲ್ಲಿದ್ದವರು ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜದ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ನಾರಾಯಣ ಭಟ್ಟರು. ನಮಗೆ ಅಪರಿಚಿತರಾದರೂ ಪೇಜಾವರ ಶ್ರೀಗಳ ಶಿಷ್ಯರೆಂದು ತಿಳಿದು ಆತ್ಮೀಯ ಸಂಭಾಷಣೆ ಆರಂಭವಾಯಿತು.ವರ್ಷದ ಹಿಂದೆ ಪರಂಧಾಮವನೈದಿದ ಶ್ರೀಪಾದಂಗಳವರ ಅಗಲಿಕೆಯಿಂದ ನೊಂದ ನಮ್ಮ ಮನಸ್ಸಿಗೆ ಅವರ ಆತ್ಮೀಯ ಒಡನಾಡಿ ಶಿಷ್ಕರೊಡನೆ ನಡೆದ ಸಂಭಾಷಣೆಯಿಂದ ಸ್ವಲ್ಪಮಟ್ಟಗೆ ಸಮಾಧಾನ ಉಂಟಾಯಿತು. ಪೇಜಾವರ ಶ್ರೀಗಳ ಆಶೀರ್ವಚನ ಸಂಗ್ರಹ ಗ್ರಂಥಕ್ಕೆ ಒಂದು ಮುನ್ನುಡಿಯನ್ನು ಬರೆದುಕೊಡಬೇಕೆಂದು ವಿನಂತಿಸಿಕೊಳುವುದು ಅವರ ಫೋನ್‌ ಕರೆಯ ಉದ್ದೇಶವಾಗಿತ್ತೇ ಹೊರತು ಇನ್ನಾವುದೇ ವ್ಯಾವಹಾರಿಕ ವಿಚಾರ ಇರಲಿಲ್ಲ.

tarabalu sree artical 2

ಯಾವುದೇ ಗ್ರಂಥಕ್ಕೆ ಬರೆಯುವ ಮುನ್ನುಡಿಯು ಆ ಪುಸ್ತಕದ ಆರಂಭದಲ್ಲಿ ಮುದ್ರಿತವಾಗುವುದರಿಂದ ಮುನ್ನುಡಿಯೇ ಹೊರತು ವಾಸ್ತವವಾಗಿ ಅದು ಹಿನ್ನುಡಿ. ಗಂಥಕರ್ತರು ಪುಸಕವನ್ನು ಬರೆದು ಮುಗಿಸಿದ ಮೇಲೆ ಅವರ ಕೃತಿಯನ್ನು ಓದಿ ಬರೆಯುವ ನಲ್ನುಡಿ. ಹೀಗಾಗಿ ಮುನ್ನುಡಿಕಾರರು ಆ ಗ್ರಂಥದ ಮೊದಲ ಓದುಗರು ಎಂದರೆ ತಪ್ಪಲ್ಲ. ಶ್ರೀ ನಾರಾಯಣ ಭಟ್ಟರು ಪೇಜಾವರ ಶ್ರೀಗಳ ಹುಟ್ಟೂರಾದ ರಾಮಕುಂಜದಲ್ಲಿರುವ ಪ್ರಾಥಮಿಕ ಪಾಠಶಾಲೆಯ ಮುಖಶಿಕ್ಷಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು.ಪೇಜಾವರ ಶ್ರೀಗಳು ಬಾಲ್ಯದಲ್ಲಿ ಇದೇ ಶಾಲೆಯಲ್ಲಿ ಓದಿದ್ದ ಕಾರಣ ಆ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಧನ್ಯತಾ ಭಾವ ಅವರದು. ಶ್ರೀಗಳಿಂದ ಕೃಷ್ಣಾನುಗ್ರಹ ಪ್ರಶಸ್ತಿ ಮತ್ತು ಶಿಕ್ಷಣ ಇಲಾಖೆಯಿಂದ ರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಶ್ರೀ ನಾರಾಯಣ ಭಟ್ಟರು ತಮ್ಮ ಬದುಕನ್ನು ರೂಪಿಸಿದ ಶ್ರೀಪಾದಂಗಳವರನ್ನು ತುಂಬಾ ಭಾವುಕರಾಗಿ ಸ್ಮರಿಸುತ್ತಾರೆ. ಪೇಜಾವರ ಶ್ರೀಗಳವರೆಂದೇ ಖ್ಯಾತನಾಮರಾದ ವಿಶ್ವೇಶತೀರ್ಥ ಶ್ರೀಪಾದಂಗಳವರು ತಮ್ಮ ಅನೇಕ ಭಾಷಣಗಳಲ್ಲಿ ನಿರೂಪಿಸುತ್ತಿದ್ದ ಸಣ್ಣ ಸಣ್ಣ ಕಥೆಗಳು ಮತ್ತು ಅವುಗಳನ್ನು ಆಧರಿಸಿ ಹೇಳುತ್ತಿದ್ದ ಉನ್ನತ ವಿಚಾರಗಳನ್ನು ನಾರಾಯಣ ಭಟ್ಟರು ಮೂರು ಸಂಪುಟಗಳಲ್ಲಿ ಸಂಗ್ರಹಿಸುವ ಅಪರೂಪದ ಪ್ರಯತ್ನ ಮಾಡಿದ್ದಾರೆ.ಈ ಗ್ರಂಥಗಳು ಇದೀಗ ಮುದ್ರಣಾಲಯದಿಂದ ಹೊರಬಂದಿವೆ:1.ವಿಶ್ವಸಂದೇಶ (ಪೂರ್ವಕಾಂಡ) 2.ವಿಶ್ವಸಂದೇಶ (ಉತ್ತರಕಾಂಡ) ಮತ್ತು 3.ವಿಶ್ವಕಥಾಕುಂಜ.

tarabalu sree artical 5

ನಮ್ಮಿಂದ ಮುನ್ನುಡಿ ಬರೆಸಿದ ಮೊದಲ ಗ್ರಂಥದ ಆರಂಭದಲ್ಲಿ ಪೂಜ್ಯ ಶ್ರೀಗಳವರು ಭಗವದ್ಗೀತೆಯನ್ನು ಕುರಿತು ಆಡಿರುವ ಮನೋಜ್ಞವಾಗಿ ಮಾತು ಹೀಗಿದೆ: “ಭಗವದ್ಗೀತೆ ಒಂದು ಬೆಂಕಿ ಪೊಟ್ಟಣವಿದ್ದಂತೆ. ಪ್ರತಿಯೊಂದು ಶ್ಲೋಕವೂ ಜ್ಞಾನವೆಂಬ ಅಗ್ನಿಯನ್ನು ಉರಿಸುತ್ತದೆ.” ಶ್ರೀಗಳವರ ಈ ಮಾತನ್ನು ವಿಸ್ತರಿಸಿ ಹೇಳುವುದಾದರೆ ಅವರಾಡಿದ ಮಾತುಗಳ ಸಂಗ್ರಹವಾದ ಈ ಪುಸ್ತಕವೂ ಸಹ ವಿಚಾರಜ್ಯೋತಿಯ ಒಂದು ಬೆಂಕಿಪೊಟ್ಟಣ.ಇದರ ಪ್ರತಿಯೊಂದು ಪುಟವೂ ಒಂದೊಂದು ಕಡ್ಡಿ ಇದ್ದಂತೆ. ಕಡ್ಡಿ ಗೀರುವವರು ಜಾಣರಾಗಿರಬೇಕು. ಸರಿಯಾಗಿ ಕಡ್ಡಿಯನ್ನು ಹಿಡಿದು ಗೀರದಿದ್ದರೆ ಬೆಂಕಿ ಹತ್ತುವುದಿಲ್ಲ. ವ್ಯರ್ಥವಾಗಿ ಹೋಗುತ್ತದೆ.ಆದರೆ ಸಂಗ್ರಾಹಕರಾದ ನಾರಾಯಣ ಭಟ್ಟರು ಇಲ್ಲಿ ಒಂದು ಕಡ್ಡಿಯೂ ಪೋಲಾಗದಂತೆ ಎಚ್ಚರ ವಹಿಸಿ ವಿಚಾರಗಳನ್ನು ಹೊಂದಿಸಿದ್ದಾರೆ.“ನುಡಿದರೆ ಮುತ್ತಿನ ಹಾರದಂತಿರಬೇಕು” ಎನ್ನುವ ಬಸವಣ್ಣನವರ ವಚನದ ಆಶಯದಂತೆ ಪೇಜಾವರ ಶ್ರೀಗಳ ಅಪರೂಹವಾದ ನುಡಿಮುತ್ತುಗಳ ಸುಂದರವಾದ ಹಾರ ಇಲ್ಲಿದೆ. ಬಿಡಿ ಹೂಗಳು ಎಷ್ಟೇ ಸುಂದರವಾಗಿದ್ದರೂ ತಾವಾಗಿಯೇ ಸುಂದರವಾದ ಹಾರ ಆಗುವುದಿಲ್ಲ. ಹೂವಿನ ಸೌಂದರ್ಯವೇ ಬೇರೆ; ಹಾರದ ಸೌಂದರ್ಯವೇ ಬೇರೆ. ಬಿಡಿ ಹೂಗಳದು ವ್ಯಷ್ಟಿ ಸೌಂದರ್ಯವಾದರೆ, ಮಾಲೆಗಾರ ಮಾಡಿದ ಮಾಲೆಯದು ಸಮಷ್ಟಿ ಸೌಂದರ್ಯ.ಬಣ್ಣ ಬಣ್ಣದ ಸುಂದರವಾದ ಬಿಡಿ ಹೂವುಗಳನ್ನು ದಾರದಿಂದ ಪೋಣಿಸಿ ಸುಂದರವಾದ ಆಕರ್ಷಕ ಮಾಲೆಯನ್ನಾಗಿ ಮಾಡುವ ಜಾಣ್ಮೆ ಮಾಲೆಗಾರನದು. ಅಂತಹ ಪರಿಣತ ಮಾಲೆಗಾರನ ಜಾಣ್ಮೆಯ ಕೆಲಸವನ್ನು ನಾರಾಯಣ ಭಟ್ಟರು ಈ ಕೃತಿಯ ಸಂಪಾದನೆಯಲ್ಲಿ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ. ಆದರ್ಶ ಶಿಕ್ಷಕರಾದ ನಾರಾಯಣ ಭಟ್ಟರ ನಿವೃತ್ತಿ ಜೀವನದಲ್ಲಿ ಇಂತಹ ಇನ್ನೂ ಅನೇಕ ಉಪಯುಕ್ತ ಕೃತಿಗಳು ಹೊರಬರಲಿ ಎಂಬುದೇ ನಮ್ಮ ಆಶಯ.

basavanna

ಶ್ರೀಗಳು ನಮ್ಮ ಲಿಂಗ್ರೆಕ್ಕ ಗುರುವರ್ಯರ ಕಾಲದಿಂದಲೂ ನಮ್ಮ ಮಠದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದವರಾಗಿದ್ದರು. 1979 ರಲ್ಲಿ ಮಠದ ಅಧಿಕಾರ ಸ್ವೀಕರಿಸುವಾಗ ಆಗಮಿಸಿ ನಮನ್ನು ಹರಸಿದ್ದರು. ಕಿ.ಪೂ 5 ನೆಯ ಶತಮಾನದ ಪಾಣಿನಿಯ ಸಂಸ್ಕೃತ ವ್ಯಾಕರಣ “ಅಷ್ಟಾದ್ಯಾಯೀ’ ಗ್ರಂಥದಲ್ಲಿರುವ ನಾಲ್ಕು ಸಾವಿರ ಸೂತ್ರಗಳನ್ನು ಆಧರಿಸಿ ನಾವು ಸಿದ್ಧಪಡಿಸಿದ “ಗಣಕಾಷ್ಟಾಧ್ಯಾಯೀ” ಎಂಬ ತಂತ್ರಾಂಶವನ್ನು (software) ಒಮ್ಮೆ ನಮ್ಮ ಪುಟ್ಟ ಗಣಕಯಂತ್ರದಲ್ಲಿ ಅವರಿಗೆ ತೋರಿಸಿದಾಗ “ಶ್ರೀಕೃಷ್ಣ. ಬಾಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದಂತಾಯಿತು”ಎಂದು ಹೃದಯ ತುಂಬಿ ಪ್ರಶಂಸೆ ಮಾಡಿದ್ದರು.ಜ್ಞಾನವೃದ್ಧರೂ, ವಯೋವೃದ್ಧರೂ ಆಗಿದ್ದ ಶ್ರೀಪಾದಂಗಳವರು ನಾವು ಬರೆಯುತ್ತಿರುವ ಈ “ಬಿಸಿಲು ಬೆಳದಿಂಗಳು” ಅಂಕಣವನ್ನು ಇಷ್ಟಪಟ್ಟು ಓದುತ್ತಿದ್ದರು.ಒಮ್ಮೆ ದೂರವಾಣಿಯಲ್ಲಿ ಅವರೊಂದಿಗೆ ಮಾತನಾಡುವಾಗ ಪ್ರಾಸಂಗಿಕವಾಗಿ ಅವರೇ ಹೇಳಿದ ಈ ಮಾತು ನಮಗೆ ಸಂತೋಷದ ಜೊತೆಗೆ ಸಂಕೋಚವನ್ನೂ ಉಂಟುಮಾಡಿತ್ತು. ಅವರು ಕಣ್ಮರೆಯಾಗಿ ಇಲ್ಲಿಗೆ ಒಂದು ವರ್ಷದ ಮೇಲಾಗಿದ್ದರೂ ಅವರು ನಮ್ಮ ನೆನಪಿನಂಗಳದಲ್ಲಿ ಸದಾ ನೆಲೆಸಿದ್ದಾರೆ.

tarabalu sree artical 10
ಚೈತನ್ಮ ಮಹಾಪ್ರಭುಗಳಿಂದ ದೀಕ್ಷೆ ಪಡೆದ ಗೋಪಾಲಭಟ್ಟ ಗೋಸ್ವಾಮಿಯವರು ತಮ್ಮ ಹರಿಭಕ್ತಿವಿಲಾಸದಲ್ಲಿ ಹೇಳುವಂತೆ:

ಯಃ ಶಿವಃ ಸೋಹಮೇವೇಹ ಯೋಹಂ ಸ ಭಗವಾನ್‌ ಶಿವಃ।

ನಾವಯೋರಂತರಂ ಕಿಂಚಿದಾಕಾಶಾನಿಲಯೋರಿವ॥

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ।

ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಸ್ತು ಹೃದಯಂ ಶಿವಃ॥

tarabalu sree artical 8

ಶಿವ ಮತ್ತು ವಿಷ್ಣು ಬೇರೆ ಬೇರೆಯಲ್ಲ. ಶಿವನೇ ವಿಷ್ಣು, ವಿಷ್ಣುವೇ ಶಿವ. ಇಬ್ಬರಲ್ಲಿಯೂ ಆಕಾಶ ಮತ್ತು ಗಾಳಿಯ ಸಮ್ಮಿಲದಂತೆ ಯಾವ ಅಂತರವೂ ಇಲ್ಲ.ಶಿವನ ಹೃದಯ ವಿಷ್ಣು, ವಿಷ್ಣುವಿನ ಹೃದಯ ಶಿವ. ಈ ಮಾತನ್ನು ವಿಸ್ತರಿಸಿ ಹೇಳುವುದಾದರೆ ಪೇಜಾವರ ಶ್ರೀಗಳ ಆರಾಧ್ಯ ದೈವ ಶ್ರೀಕೃಷ್ಣ ನಮ್ಮ ಆರಾದ್ಯ ದೇವರು ಶಿವ. ಆದರೆ ನಮ್ಮೀರ್ವರ ಹೃದಯಗಳು ಬೇರೆ ಬೇರೆಯಾಗಿರದೆ ಒಂದೇ ಆಗಿದ್ದವು. ಅವರು ನೋಡಲು ವಾಮನನಂತೆ ಕೃಶಕಾಯರಾಗಿದ್ದರೂ ಧಾರ್ಮಿಕ ಕ್ಷೇತ್ರದಲ್ಲಿ ತ್ರಿವಿಕ್ರಮನಂತೆ ಆಕಾಶದೆತ್ತರಕ್ಕೆ ಬೆಳೆದವರಾಗಿದ್ದರು. ಪೇಜಾವರ ಶ್ರೀಗಳು ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದಾಗ ಆರಂಭದಲ್ಲಿ ಈ ಮುಂದಿನ ಶ್ರೀಮದ್‌ ಭಾಗವತದ ಶ್ಲೋಕವನ್ನು ತಪ್ಪದೇ ಹೇಳುತ್ತಿದ್ದರು.

tarabalu sree artical 7

ಯೋಂತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಂ

ಸಂಜೀವಯತ್ಯ ಖಿಲಶಕ್ತಿಧರಃ ಸ್ವಧಾಮ್ನಾ

ಅನ್ಶಾಂಶ್ಚ ಹಸ್ತಚರಣ ಶ್ರವಣತ್ವಗಾದೀನ್‌

ಪ್ರಾಣಾನ್‌ ನಮೋ ಭಗವತೇ ಪುರುಷಾಯ ತುಭ್ಯಮ್‌।

“ಆನು ನುಡಿದೆನಯ್ಯಾ ನೀ ನುಡಿಸಿದಂತೆ, ಆನು ಇದ್ದೇನಯ್ಯಾ ನೀನು ಇರಿಸಿದಂತೆ ಜಗದ ಯಂತ್ರವಾಹಕ ಚೆನ್ನಮಲ್ಪಿಕಾರ್ಜುನ’ ಎಂಬ ಅಕ್ಕಮಹಾದೇವಿಯ ವಚನವನ್ನು ಈ ಶ್ಲೋಕವು ನೆನಪಿಸಿಕೊಡುತ್ತದೆ. ಕಣ್ಮುಚ್ಚಿ ಕೈಜೋಡಿಸಿ ಹೃದಯದ ಆಳದಿಂದ ಭಾವ ತುಂಬಿ ಶ್ರೀಗಳು ಪ್ರಾರ್ಥಿಸುತ್ತಿದ್ದ ಈ ಶ್ಲೋಕದ ಆಶಯದಂತೆಯೇ ಅವರಾಡುವ ಮಾತುಗಳೂ ಸಹ ವಿಷಯದ ತಳಸ್ಪರ್ಶಿಯಾಗಿರುತ್ತಿದ್ದವು ಎಂಬುದನ್ನು ಈ ಗ್ರಂಥದಲ್ಲಿ ದಾಖಲಾಗಿರುವ ಅವರ ಮಾತುಗಳಲ್ಲಿ ಕಾಣಬಹುದಾಗಿದೆ.

ಪೇಜಾವರ ಶ್ರೀಗಳವರ ಮಾತಿನಲ್ಲಿ ಶಬ್ದಾಡಂಬರವಿರುತ್ತಿರಲಿಲ್ಲ. ‘ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಮ್‌’ ಎನ್ನುವ ಹಾಗೆ ಮಹಾಕವಿ ಭಾರವಿಯ ಕಾವ್ಯಗಳಲ್ಲಿರುವಂತೆ ಅರ್ಥಗೌರವವಿರುತ್ತಿತ್ತು.ತೂಕವಾದ ತರ್ಕಬದ್ಧವಾದ ವಿಚಾರಧಾರೆ ಅವರದು. ಈ ಗ್ರಂಥದಲ್ಲಿರುವ ಒಂದೊಂದು ಪುಟವನ್ನು ಓದುವಾಗಲೂ ಬಸವಣ್ಣನವರ ಒಂದೊಂದು ವಚನ ನಮಗೆ ನೆನಪಾಗುತ್ತಿದ್ದವು! ಉದಾಹರಣೆಗೆ, ಈ ಜಗತ್ತಿನಲ್ಲಿ ಯಾರು ದೊಡ್ಡವರು. ಎಂಬ ಪ್ರಶ್ನೆಗೆ ಶ್ರೀಗಳು ನೀಡುವ ಉತ್ತರ: “ನಾವು ನೋಡುವ ವಸ್ತುಗಳಲ್ಲಿ ಆಕಾಶ ಅತ್ಯಂತ ದೊಡ್ಡದಾದುದು. ಆದರೆ ಅಂತಹ ಆಕಾಶವನ್ನು ಮೋಡ ಮುಚ್ಚುತ್ತದೆ. ಆಕಾಶಕ್ಕಿಂತ ಮೋಡ ದೊಡ್ಡದು. ಅಂತಹ ಮೋಡವನ್ನು ಗಾಳಿ ಚದುರಿಸುತದೆ. ಆದ್ದರಿಂದ ಮೋಡಕ್ಕಿಂತ ಗಾಳಿ ಹೆಚ್ಚಿನದು. ಈ ಬ್ರಹ್ಮಾಂಡವನ್ನೇ ತನ್ನ ಉದರದಲ್ಲಿ ತುಂಬಿಕೊಳುವ ದೇವರು ಗಾಳಿಗಿಂತ ಹಿರಿಯ. ಅಂತಹ ದೇವರನ್ನು ಭಕ್ತ ತನ್ನ ಹೃದಯಲ್ಲಿ ತುಂಬಿಸಿಕೊಳುತ್ತಾನೆ. ಅಂದ ಮೇಲೆ ಭಗವದ್ಭ್ಕಕ್ತನೇ ಎಲ್ಲರಿಗಿಂತಲೂ ದೊಡ್ಡವನು.”ಶ್ರೀಗಳವರ ಈ ನುಡಿಯನ್ನು ಓದಿದಾಕ್ಷಣ ನಮಗೆ ನೆನಪಾಗಿದ್ದು ಬಸವಣ್ಣನವರ ಈ ಮುಂದಿನ ವಚನ: “ಸಮುದ್ರ ಫನವೆಂಬೆನೆ? ಧರೆಯ ಮೇಲಡಗಿತ್ತು.ಧರೆ ಫನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.ನಾಗೇಂದ್ರ ಘನವೆಂಬೆನೆ? ಪಾರ್ವತಿಯ ಕಿರುಕುಣಿಕೆಯ ಮುದ್ರಿಕೆಯಾಗಿತ್ತು ಅಂತಹ ಪಾರ್ವತಿ ಫನವೆಂಬೆನೆ? ಪರಮೇಶ್ವರನ ಅರ್ಧಾಂಗಿಯಾದಳು. ಅಂತಹ ಪರಮೇಶ್ವರನು ಘನವೆಂಬೆನೆ ನಮ್ಮ ಕೂಡಲ ಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು.’

tarabalu sree artical 4

ಇನ್ನೊಂದು ಕಡೆ ಶ್ರೀಗಳು ಹೇಳುವ ಮಾತು: “ಕತ್ತಲು ತುಂಬಿದ ಮನೆಯಲ್ಲಿ ಜಿರಳೆ, ಕ್ರಿಮಿ ಕೀಟಗಳು ಓಡಾಡುತ್ತವೆ. ಕಳ್ಳರು ಧೈರ್ಯದಿಂದ ಅಂತಹ ಮನೆಗೆ ಪ್ರವೇಶಿಸುತ್ತಾರೆ. ನಮ್ಮ ಅಂತಃಕರಣವೂ ಅಂತಹ ಒಂದು ಮನೆ. ಅಲ್ಲಿ ಅಜ್ಞಾನದ ಕತ್ಪಲೆ ಕವಿದಿದೆ”. ಶ್ರೀಗಳವರ ಈ ನುಡಿ ಬಸವಣ್ಣನವರ ಈ ಮುಂದಿನ ವಚನಕ್ಕೆ ಮಾಡಿದ ವ್ಯಾಖ್ಯಾನಂತಿದೆ: “ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ, ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ, ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲಾ ಕೂಡಲಸಂಗಮ ದೇವಾ!” ಈ ಗ್ರಂಥದಲ್ಲಿ ಸಂಕಲಿತವಾಗಿರುವ ಶ್ರೀಗಳವರ ಇಂತಹ ಸರಳವಾದ ನುಡಿಗಳು ಬಸವಣ್ಣನವರ ಅನೇಕ ವಚನಗಳನ್ನು ನೆನಪಿಗೆ ತರುತ್ತವೆ.ಇಬ್ಬರಲ್ಲಿ ಇರುವ ವಿಚಾರಗಳ ಸಾಮ್ಯತೆ ಎಂಥವರನ್ನೂ ಬೆರಗುಗೊಳಿಸುತ್ತವೆ.ಭಗವಂತನನ್ನು ಭಕ್ತಿಯಿಂದ ಆರಾಧಿಸುವ ಹೃದಯಗಳು ಶೃತಿಗೈದ ವೀಣೆಯ ತಂತಿಗಳಿದ್ದಂತೆ! ವೈಣಿಕರು ಬೇರೆ ಬೇರೆಯಾದರೂ ಅವರು ಕೈಬೆರಳಿನಿಂದ ಮೀಟುವ ತಂತಿಗಳ ನಾದಮಾಧುರ್ಯ ಒಂದೇ!

 

 

ಇಂದಿನ ವೈಜ್ಞಾನಿಕ ಯುಗದಲ್ಲಿ ಗುಡಿ ಮಠಗಳ ಅವಶ್ಯಕತೆ ಇದೆಯೇ? ಎನ್ನುವ ಪ್ರಶ್ನೆಗೆ ಶ್ರೀಗಳು ಕೊಡುವ ಉತ್ತರ: “ಆಧುನಿಕ ಯುಗದಲ್ಲಿ ನೈತಿಕ ಮೌಲ್ಯಗಳು ಬಹಳವಾಗಿ ಕುಸಿದುಬಿದ್ದಿರುವುದರಿಂದ ಎಂದಿಗಿಂತ ಇಂದು ಇನ್ನೂ ಹೆಚ್ಚಿನ ಅವಶ್ಯಕತೆ ಇದೆ. ಮನಸ್ಸಿನಲ್ಲಿ ಸುಧಾರಣೆಯಾಗದ ಹೊರತು ಕಾಯಿದೆಗಳು ಬೆಳೆದಂತೆ ಅವುಗಳನ್ನು ಉಲ್ಲಂಘಿಸುವ ಕುತಂತ್ರಗಳ ಆವಿಷ್ಕಾರವಾಗುತ್ತದೆ. ನೀತಿ, ಶೀಲಗಳ ಭದ್ರ ಮನೋಭೂಮಿಕೆಯನ್ನು ನಿರ್ಮಿಸುವುದೇ ಇಂದಿನ ಪ್ರಧಾನವಾದ ರಾಷ್ಟ್ರ ನಿರ್ಮಾಣ ಕಾರ್ಯವಾಗಿದೆ.”ನಾರಾಯಣ ಭಟ್ಟರು ಈ ಗ್ರಂಥದಲ್ಲಿ ಸಂಗ್ರಹಿಸಿ ಕೊಟ್ಟ ಪೇಜಾವರು ಶ್ರೀಗಳ ಪ್ರತಿಯೊಂದು ನುಡಿಯೂ ಅವರ ಅಗಲಿಕೆಯ ನಂತರವೂ ಅಶರೀರವಾಣಿಯಾಗಿ ಲೌಕಿಕ ಜಂಜಾಟದಲ್ಲಿ ಬೇಸತ್ತ ಜೀವಗಳಿಗೆ ಪ್ರೇರಕ ಶಕ್ತಿಯನ್ನು ನೀಡುವ ಸಂಜೀವಿನಿಯಾಗಿದೆ. ಈ ಗ್ರಂಥದ ಹಸ್ತಪ್ರತಿಯನ್ನು ನಾವು ಮೊದಲ ಓದುಗರಾಗಿಮ ಆಮೂಲಾಗ್ರವಾಗಿ ಓದಿ ಆನಂದಿಸಿದಂತೆ ಈಗ ಸರ್ವಾಂಗ ಸುಂದರವಾಗಿ ಮುದ್ರಣಗೊಂಡು ಹೊರ ಬಂದಿರುವ ಈ ಪುಸ್ತಕವನ್ನು ಸಹಸ್ರಾರು ವಿಚಾರಪ್ರಿಯ ಓದುಗರು ಕೈಗೆತ್ತಿಕೊಂಡು ಓದಿ ಆಸ್ವಾದಿಸುವರೆಂಬ ಪೂರ್ಣ ವಿಶ್ವಾಸ ನಮದು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top