ಅಂಕಣ
ವಿಧಿಯ ಹೆಡೆಮುರಿ ಕಟ್ಟಲು ಸಾಧ್ಯವೇ?
– ಶ್ರೀ ತರಳಬಾಳು ಜಗದ್ಗುರು, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ , ತರಳಬಾಳು ಬೃಹನ್ಮಠ, ಸಿರಿಗೆರೆ
ತುಂಬಾ ಹಳೆಯ ಘಟನೆಯಿದು. ಇದೇ ಅಂಕಣದಲ್ಲಿ ನಿಮ್ಮೊಂದಿಗೆ ಹಂಚಿಕೊಂಡ ನೆನಪು: ಯುವಕನೊಬ್ಬ ಬೈಸಿಕಲ್ ಹತ್ತಿ ಮನೆಯಿಂದ ಹೊರಟ. ಅರ್ಧ ಕಿಲೋಮೀಟರ್ ಹೋಗಿರಬಹುದು. ಆಕಾಶದಲ್ಲಿ ಹಾರುತ್ತಿದ್ದ ಹದ್ದಿನ ಕಾಲುಗಳಲ್ಲಿ ಬಂಧಿಯಾಗಿದ್ದ ನಾಗರ ಹಾವು ಹೇಗೋ ಹಿಡಿತದಿಂದ ಬಿಡಿಸಿಕೊಂಡು ನೇರವಾಗಿ ಅವನ ತಲೆಯ ಮೇಲೆಯೇ ಬಿದ್ದು ಕಚ್ಚಿತು. ಕ್ಷಣಾರ್ಧದಲ್ಲಿ ವಿಷ ಆವರಿಸಿ ಆ ಹುಡುಗ ಸ್ಥಳದಲ್ಲಿಯೇ ಸತ್ತುಹೋದ! ನೋಡಿದ ಜನರು ಉದ್ಗರಿಸಿದರು, ”ಅಯ್ಯೋ! ಈ ಹುಡುಗ 5 ನಿಮಿಷ ಮುಂಚೆ ಅಥವಾ 5 ನಿಮಿಷ ತಡವಾಗಿ ಮನೆಯಿಂದ ಹೊರಟಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ!” ಈ ಘಟನೆಗೆ ನಿಮ್ಮ ವಿವರಣೆ ಏನು? ದುರ್ಘಟನೆ ಹೇಗೆ ನಡೆಯಿತೆಂದು ನೀವು ಹೇಳಬಹುದೇ ಹೊರತು ಏಕೆ ನಡೆಯಿತೆಂದು ಖಂಡಿತಾ ಹೇಳಲಾರಿರಿ. ಹುಡುಗ ಮಾಡಿದ್ದರಲ್ಲಿ ಯಾವುದೇ ದೋಷವಿರಲಿಲ್ಲ. ಅವನು ಸೈಕಲ್ ಓಡಿಸುವಾಗ ಆಕಾಶ ನೋಡುತ್ತಾ ಇರಬೇಕಾಗಿತ್ತು ಎಂದು ನೀವು ಹೇಳಲು ಸಾಧ್ಯವಿಲ್ಲ.ಆಕಾಶದಿಂದ ಹಾವು ಬೀಳುತ್ತದೆ ಎಂದು ಯಾರಾದರೂ ಊಹಿಸಲು ಸಾಧ್ಯವೇ!
ಇನ್ನೊಂದು ನಿಜವಾದ ಘಟನೆ; ಇದು ನಡೆದು ಅನೇಕ ದಶಕಗಳೇ ಉರುಳಿದವು. ಒಬ್ಬ ಯಜಮಾನರು ಹರಿಹರದಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದರು. ಚಿತ್ರದುರ್ಗದಲ್ಲಿ ಮಧ್ಯಾಹ್ನ ಪ್ರಯಾಣಿಕರ ಊಟಕ್ಕಾಗಿ ಬಸ್ಸುನಿಂತಿತು. ಬೆಂಗಳೂರಿಗೆ ತುರ್ತಾಗಿ ಹೋಗಬೇಕಾಗಿದ್ದರಿಂದ ತಡವಾಗುತ್ತಿರುವುದಕ್ಕೆ ಚಡಪಡಿಸತೊಡಗಿದರು. ಕಿಟಕಿಯಾಚೆ ನೋಡಿದಾಗ ಹತ್ತಿರದಲ್ಲಿಯೇ ನ್ಯೂಸ್ ಪೇಪರ್ ವ್ಯಾನು ಹೊರಟು ನಿಂತಿತ್ತು. ಬೇಗನೆ ಬೆಂಗಳೂರು ಸೇರಬಹುದಲ್ಲಾ ಎಂದು ಯೋಚಿಸಿ ಬಸ್ ಇಳಿದು ಅವರು ವ್ಯಾನ್ ಬಳಿ ಹೋದರು. ವ್ಯಾನಿನಲ್ಲಿ ಅವರ ಅಳಿಯನೇ ಕುಳಿತಿದ್ದನ್ನು ನೋಡಿ ಅಚ್ಚರಿಗೊಂಡರು. ಅಳಿಯ ಸೌಜನ್ಯದಿಂದ ವ್ಯಾನಿನಲ್ಲಿ ತನ್ನ ಸೀಟನ್ನು ಮಾವನಿಗೆ ಬಿಟ್ಟುಕೊಟ್ಟು ಮಾವನಿಂದ ಟಿಕೆಟ್ ಪಡೆದು ಬಸ್ ಹತ್ತಿದ. ಪೇಪರ್ ವ್ಯಾನ್ ಚಿತ್ರದುರ್ಗ ಬಿಟ್ಟು ಹೊರಟಿತು. ಆದರೆ ನಗರದ ಹೊರವಲಯ ತಲುಪುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಪಕ್ಕದ ದೊಡ್ಡ ಬಂಡೆಗೆ ಅಪ್ಪಳಿಸಿತು.ವ್ಯಾನನಲ್ಲಿದ್ದವರೆಲ್ಲರಿಗೂ ಸ್ಥಳದಲ್ಲಿಯೇ ಮೃತಪಟ್ಟರು. ಮಾವ ವಾಹನ ಬದಲಾಯಿಸದೆ ಬಸ್ಸಿನಲ್ಲಿಯೇ ಪ್ರಯಾಣ ಮುಂದುವರಿಸಿದ್ದರೆ ಉಳಿಯುತ್ತಿದ್ದನೇ? ಅಳಿಯ ಸಾಯಿತ್ತಿದ್ದನೇ? ಇಂತಹ ಸಂದರ್ಭಗಳಲ್ಲಿ “ಅಳಿಯನ ಹಣೆಯಬರಹ ಗಟ್ಟಿ ಇತ್ತು. ವಿಧಿ ಮಾವನನ್ನು ಎಳೆದುಕೊಂಡು ಹೋಯಿತು!” ಎಂದು ಜನರು ಉದ್ಗರಿಸುತ್ತಾರೆ.
‘ವಿಧಿ’. ಎಂಬ ಶಬ್ದವನ್ನು ‘ದುಃಖದಾಯಕ ದುರ್ಘಟನೆ’ ಎಂಬ ನೇತ್ಯಾತಕ ಅರ್ಥದಲ್ಲಿ ಬಳಸುವುದೇ ಹೆಚ್ಚು. ಕೆಲವು ಶಬ್ದಗಳು ತಮ್ಮ ಮೂಲದಲ್ಲಿ ಇಲ್ಲದ ಅರ್ಥಗಳನ್ನು ಜನಮಾನಸದಲ್ಲಿ ಪಡೆಯುವುದು ಭಾಷಾಲೋಕದ ಒಂದು ವಿಚಿತ್ರ ವಿದ್ಯಮಾನ. ಉದಾಹರಣೆಗೆ ‘ವಾಸನೆ’ ಎಂಬ ಶಬ್ದವನ್ನೇ ನೋಡಿ. ಗಟಾರದ ಬಳಿ ಬಂದಾಗ ‘ಥೂ ವಾಸನೆ ! ಎಂದು ಮೂಗು ಮುಚ್ಚಿಕೊಳ್ಳುತ್ತೀರಿ. ಆದರೆ ವಾಸನೆ’ ಎಂದರೆ ಮೂಗಿನಿಂದ ಗ್ರಹಿಸಬಲ್ಲ ಸಂವೇದನೆ ಎಂದಷ್ಟೇ ಮೂಲದ ಅರ್ಥ. ಅದು ಮೂಗನ್ನು ಅರಳಿಸುವಂತಹ ಮಲ್ಲಿಗೆಯ ಪರಿಮಳವೂ ಇರಬಹುದು ಇಲ್ಲವೆ ಮೂಗು ಮುಚ್ಚಿಕೊಳ್ಳುವಂತಹ ಗಟಾರದ ಗಬ್ಬು ನಾತವೇ ಇರಬಹುದು. ಆದರೆ ಇಂಗ್ಲೀಷಿನ ‘Luck’ ಎಂಬ ಶಬ್ದ ಮಾತ್ರ ಇತ್ಯಾತ್ಮಕ ಅರ್ಥದಲ್ಲಿಯೇ ಬಳಕೆಯಾಗುತ್ತದೆ. ಅದೃಷ್ಟ ಖುಲಾಯಿಸಿದಾಗ ಅವನ ‘Luck’ ಎಂದರೂ ಸರಿ, ‘Good luck’ ಎಂದರೂ ಸರಿ. ನೇತ್ಯಾತ್ಮಕ ಅರ್ಥದಲ್ಲಿ ಬಳಸುವ ಸಂದರ್ಭ ಬಂದಾಗ ಮಾತ್ರ. ‘Bad luck’ ಎಂದು ಹೇಳುತ್ತಾರೆ.
ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಬಹುಭಾಷ ವಿಶಾರದರಾದ ಅರಮನೆ ಪಂಚಗವಿ ಮಠದ ಗೌರೀಶಂಕರ ಸ್ವಾಮಿಗಳು ಹಣೆಯ ಮೇಲೆ ಮೂರು ಗೆರೆಗಳು ಮೂಡುವಂತೆ ವಿಭೂತಿಯನ್ನು (ತಿಪುಂಡ್ರ) ಕೈಬೆರಳಲ್ಲಿ ಧರಿಸುತ್ತಿರಲಿಲ್ಲ. ಅದರ ಬದಲು ಇಡೀ ಹಣೆಯನ್ನೇ ಆವರಿಸುವಂತೆ ವಿಭೂತಿ ಉಂಡೆಯನ್ನು ಉಜ್ಜಿಕೊಳ್ಳುತ್ತಿದ್ದರಂತೆ. ಕಾರಣವೇನೆಂದು ಕೇಳಿದವರಿಗೆ” ಅವರು ಕೊಟ್ಟ ಉತ್ತರ: “ಬ್ರಹ್ಮನು ಬರೆದ ಹಣೆಯ ಬರಹವನ್ನು ಅಳಿಸಿ ಹಾಕಲು ನಾನು ಹೀಗೆ ಮಾಡುತ್ತಿದ್ದೇನೆ!” ಅವರು ಹೆಳಿದ್ದನ್ನು ವಾಚ್ಯಾರ್ಥದಲ್ಲಿ ಗ್ರಹಿಸುವುದು ಸರಿಯಲ್ಲ. ಅದರ ಹಿಂದಿನ ಅರ್ಥವೇ ಬೇರೆ. ಬದುಕಿನಲ್ಲಿ ದುರ್ಫಟನೆಗಳೇ ಬರದಂತೆ ಹಣೆಯ ಬರೆಹವನ್ನು ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ!ಭವಿಷ್ಯದಲ್ಲಿ ಏನು ನಡೆಯಬಹುದೆಂದು ಊಹಿಸಿ ಹೇಳಬಹುದೇ ಹೊರತು ಹೀಗೆಯೇ ಆಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಆದರೆ ಅವು ಬಂದಾಗ ಅಂಜದೆ ಅಳುಕದೆ ಮನಸ್ಸನ್ನು ಗಟ್ಟಿ ಗೊಳಿಸಿಕೊಂಡು ಧೈರ್ಯವಾಗಿ ಎದುರಿಸಬೇಕೆಂಬುದೇ ಮಾತಿನ ತಾತ್ವರ್ಯ. “ನಾಳೆ ಬಪ್ಪದು ನಮಗಿಂದೇ ಬರಲಿ, ಇಂದು ಬಪ್ಪದು ನಮಗೀಗಲೇ ಬರಲಿ. ಇದಕಾರಂಜುವರು, ಇದಕಾರಳುಕುವರು? ಜಾತಸ್ಯ ಮರಣಂ ಧ್ರುವಂ ಎಂದುದಾಗಿ ನಮ್ಮ ಕೂಡಲಸಂಗಮ ದೇವರು ಬರೆದ ಬರೆಹವ ತಪ್ಪಿಸುವೂಡೆ ಹರಿಬ್ರಹ್ಮಾದಿಗಳಿಗಳವಲ್ಲಾ” ಎನ್ನುತ್ತಾರೆ ಬಸವಣ್ಣನವರು. “ಮದನಂ ದೇಹವ ನೀಗಿದ,ನೃಪವರಂ ಚಂಡಾಲಗಾಳಾದ, ಪೋದುದು ಬಹ್ಮಂಗೆ ಶಿರಸ್ಸು, ಭಾರ್ಗವನು ಕಣ್ಗಾಣಂ, ನಳ ವಾಚಿಪಂ, ಸುಧೆಯಂ ಕೊಟ್ಟು ಸುರೇಂದ್ರ ಸೋಲ್ತ, ಸತಿಯಂ ಪೋಗಾಡಿದ ರಾಘವಂ, ವಿಧಿಯಂ ಮೀರುವನಾವನೈ ಹರಹರಾ ಶ್ರೀಚೆನ್ನಸೋಮೇಶ್ವರಾ”.(ಮನ್ಮಥನ ದೇಹವನ್ನು ಶಿವ ಸುಟ್ಟುಹಾಕಿದ. ರಾಜಶ್ರೇಷ್ಠನಾದ ಹರಿಶ್ಚಂದ್ರನು ಚಂಡಾಲನಿಗೆ ದಾಸನಾದ, ಬ್ರಹ್ಮನಿಗೆ ಒಂದು ತಲೆಯೇ ಹೋಯಿತು, ಶುಕ್ರಾಚಾರ್ಯನಿಗೆ ಒಂದು ಕಣ್ಣು ಹೋಯಿತು. ನಳ ಮಹಾರಾಜ ಕುದುರೆಯನ್ನು ಕಾಯುವಂತಾದ, ಇಂದ್ರನು ಅಮೃತವನ್ನು ಕೊಟ್ಟು ಯುದ್ಧದಲ್ಲಿ ಸೋಲುವಂತಾದ, ಶ್ರೀರಾಮನು ಸೀತೆಯನ್ನು ಕಳೆದುಕೊಂಡು ಪರಿತಪಿಸುವಂತಾಯಿತು.ಆದ ಕಾರಣ ವಿಧಿಯನ್ನು ಮೀರಿಸುವವರು ಯಾರಿದ್ದಾರೆ?’ ಎಂದು ಪ್ರಶ್ನಿಸುತ್ತದೆ ಸೋಮೇಶ್ವರ ಶತಕ.
ಜೀವನವೆಂಬುದು ಸಮತಟ್ಟಾದ ದಾರಿಯ ಸಲೀಸು ಪಯಣವಲ್ಲ. ನಡೆಯುವ ದಾರಿಯಲ್ಲಿ ಅನೂಹ್ಯವಾದ ಅನೇಕ ತಿರುವುಗಳು, ತಗ್ಗು ತಿಟ್ಟುಗಳು ಹೆಜ್ಜೆಹೆಜ್ಜೆಗೂ ಎದುರಾಗಿ ದಿಗ್ರ್ಭಾಂತರನ್ನಾಗಿಸುತ್ತವೆ. A wise man finds opportunity in every problem whereas the dull finds problem in every opportunity (ಜಾಣನಾದವನು ಪ್ರತಿಯೊಂದು ಸಮಸ್ಯೆಯಲ್ಲಿಯೂ ಅವಕಾಶವನ್ನು ಕಾಣುತ್ತಾನೆ; ದಡ್ಡನಾದವನು ಪ್ರತಿಯೊಂದು ಅವಾಶದಲ್ಲಿಯೂ ಸಮಸ್ಯೆಯನ್ನೇ ಕಾಣುತ್ತಾನೆ) ಎಂಬ ಮಾತಿದೆ. ಸಮಸ್ಯೆಯೇ ಬದುಕಿನಲ್ಲಿ ಮುಖಾಮುಖಿ ಆಗಬಾರದೆಂದು ನಿರೀಕ್ಷಿಸುವುದು ತಪ್ಪು. ಬದಲಾಗಿ ಎದುರಾಗುವ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವವನೇ ಜಾಣ. ಸಾಮಾನ್ಯವಾಗಿ ಜರುಗುವ ಘಟನೆಗಳಿಗೆ ಕಾರ್ಯ ಕಾರಣ ಸಂಬಂಧವಿರುತ್ತದೆ. ಕಾರ್ಯಕಾರಣ ಸಂಬಂಧವಿಲ್ಲದೆ. ಜರುಗುವ ಅನೇಕ ವಿದ್ಯಮಾನಗಳೂ ಇರುತ್ತವೆ. ಅದನ್ನೇ ವಿಧಿ ಎನ್ನುವುದು. ವಿಧಿಯೆಂಬುದು ಬುದ್ಧಿ ಮತ್ತು ತರ್ಕಕ್ಕೆ ನಿಲುಕದ್ದು. ಅದನ್ನು ತಾರ್ಕಿಕವಾಗಿ ನಿರೂಪಿಸಲು ಆಗುವುದಿಲ್ಲ. ಅದು ಹೇಗೆ ಸಂಭವಿಸಿತು ಎಂಬುದನ್ನು ಮಾತ್ರ ನಿರೂಪಿಸಬಹುದೇ ಹೊರತು ಏಕೆ ಸಂಭವಿಸಿತು ಎಂದು ವಿವರಣೆ ನೀಡಲು ಬರುವುದಿಲ್ಲ. ಏಕೆಂದರೆ ಅದು ಮನುಷ್ಯನ ಗ್ರಹಿಕೆಗೆ ನಿಲುಕುವುದಿಲ್ಲ. ಆದರೆ ಅನೇಕ ವೇಳೆ ತಮ್ಮ ವಿಫಲತೆಗಳಿಗೆ ವಿಧಿಯನ್ನು ದೂಷಿಸುವ ಪ್ರವೃತ್ತಿ ರೂಢಿಗತವಾಗಿ ಬಂದಿದೆ. ತಮಗೆ ಒದಗುವ ತೊಂದರೆಗಳಿಗೆಲ್ಲಾ ವಿಧಿಯೇ ಕಾರಣವೆಂದು ಪದೇ ಪದೇ ಹಲಬುತ್ತಾರೆ. ಮರುಕ್ಷಣ ‘ಯಾರೇನು ಮಾಡೋಕಾಗುತ್ತೆ ನಾನು ಪಡೆದುಕೊಂಡು ಬಂದ ಕರ್ಮ!’ ಎಂಬ ಹತಾಶೆಯ ಉದ್ಗಾರ ಹೊರಹೊಮ್ಮುತ್ತದೆ. ಅನೇಕರು ಆಡುವ ಈ ಮಾತಿನಲ್ಲಿ ಸ್ವಂತಕ್ಕೆ ಸಮಾಧಾನ ಪಟ್ಟುಕೊಳ್ಳುವುದಕ್ಕಿಂತ ಇನ್ನೊಬ್ಬರ ಮೇಲೆ ಹರಿಹಾಯುವ ಪ್ರವೃತ್ತಿ ಇರುತ್ತದೆ.
ವಿಧಿಯನ್ನು ಹೆಡೆಮುರಿ ಕಟ್ಟಿ ಕೂರಿಸುವಂತಿದ್ದರೆ ಹೇಗಿರುತ್ತಿತ್ತು? ಅಜರಾಮರನಾಗಿ ಉಳಿದು ಸಾವನ್ನೇ ಗೆದ್ದು ಮೃತ್ಯುಂಜಯನಾಗಿ ಉಳಿದು ವಿಧಿಯನ್ನು ಅಣಕಿಸ ಬಹುದಾದರೆ ಹೇಗೆ! ಇದರ ಬಗೆಗೂ ಚಿಂತನೆಗಳು ನಡೆದಿವೆ. ಒಂದು ಐತಿಹ್ಯವಾಧಾರಿತ ಕಥೆ. ಅಲೆಗ್ಸಾಂಡರ್‌ಗೆ ತನಗೆ ಸಾವೇ ಬರಬಾರದು, ಅಮರನೇ ಆಗಿಬಿಡಬೇಕು ಎಂಬ ಆಸೆಯಾಯಿತಂತೆ. ಅದಕ್ಕಾಗಿ ಋಷಿಯೊಬ್ಬನನ್ನು ಕೇಳಿದ. ಆ ಋಷಿ ‘ಹಿಮಾಲಯದಲ್ಲಿ ಒಂದು ಸರೋವರವಿದೆ. ಅದರ ನೀರನ್ನು ನೀನು ಕುಡಿದರೆ ನಿನಗೆ ಎಂದಿಗೂ ಸಾವು ಬರುವುದಿಲ್ಲ ಅಜರಾಮರನಾಗುತ್ತೀಯ!’ ಎಂದು ಹೇಳಿದನಂತೆ. ಅಲೆಕ್ಸಾಂಡರ್ ಆ ಸರೋವರವನ್ನು ಹುಡುಕಿಕೊಂಡು ಹೋದ. ಹಿಮಾಲಯ ಪರ್ವತವನ್ನು ಹತ್ತಿ ಋಷಿ ಹೇಳಿದ ದಾರಿಯಲ್ಲಿ ಕಷ್ಟ ಪಟ್ಟು ನಡೆಯುತ್ತಾ ಸಾಗಿ ಅಂತೂ ಇಂತೂ ಆ ಸರೋವರದ ಬಳಿಗೆ ಬಂದ. ಅಮರನಾಗುವ ಆತುರದಲ್ಲಿ ಅತಿ ಉತ್ಸಾಹದಿಂದ ಕೈ ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡ. ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಅಲ್ಲಿದ್ದ ಒಂದು ಕಾಗೆ ಕೂಗಿ ಕೂಗಿ ಎಚ್ಚರಿಸಿತು: “ಬೇಡ! ಬೇಡ!! ಈ ನೀರು ಕುಡಿಯಬೇಡ! ನನಗೆ ಬಂದ ದುರ್ದೆಸೆಯೇ ನಿನಗೂ ಬರುತ್ತದೆ!” ಅಲೆಗ್ಸಾಂಡರ್ ಅವಾಕ್ಕಾಗಿ ನಿಂತ. ‘ಏಕೆ ಕುಡಿಯಬಾರದು?’ ಬೇಗನೆ ಹೇಳು ಎಂದು ಕೇಳಿದ. “ಆ ಋಷಿಯು ನಿನನ್ನು ಇಲ್ಲಿಗೆ ಕಳಿಸಿದ್ದಾನೆ ತಾನೆ. ನಾನೂ ನಿನ್ನ ಹಾಗೆ ಒಬ್ಬರಾಜ, ಅಮರತ್ವದ ಅಮಲು ನಿನ್ನ ಹಾಗೆಯೇ ನನಗೂ ಹತ್ತಿತ್ತು. ಅದೇ ಋಷಿಯ ಮಾತಿನಂತೆ ಇಲ್ಲಿಗೆ ಬಂದು ಈ ಸರೋವರದ ನೀರನ್ನು ಕುಡಿದೆ. ಆಮರನಾದೆ ಎಂಬ ಖುಷಿಯಲ್ಲಿದ್ದ ನಾನು ಕಾಗೆಯಾದೆ. ನನ್ನ ಕಣ್ಣೆದುರಿಗೆ ಹೆಂಡತಿ ಸತ್ತಳು. ಮಕ್ಕಳು ಸತ್ತರು,ಮೊಮ್ಮಕ್ಕಳು ಸತ್ತರು, ಮರಿಮಕ್ಕಳು ಸತ್ತರು, ಗಿರಿಮಕ್ಕಳು ಸತ್ತರು. ಆದರೂ ನಾನು ಸಾಯದೆ ಬದುಕಿದ್ದೇನೆ. ನನ್ನವರೆನ್ನುವರರು ಯಾರೂ ಇಲ್ಲ. ಕಾಗೆಯಾಗಿ ಸಾವಿರಾರು ವರ್ಷ ಬದುಕಿ ಏನು ಪ್ರಯೋಜನ? ಸತ್ತು ಕಾಗೆ ಜನ್ಮದಿಂದ ಮುಕ್ತಿ ಪಡೆಯಲು ಬಯಸುತ್ತಿದ್ದೇನೆ. ಸಾಯಲು ಹಂಬಲಿಸುತ್ತಿದ್ದೇನೆ. ಆದರೆ ಅಮರತ್ವ ದೊರೆತಿರುವುದರಿಂದ ಸಾವು ಸಮೀಪವು ಸುಳಿಯುತ್ತಿಲ್ಲ. ಇಷ್ಟವಿಲ್ಲದಿದ್ದರೂ ಕಾಗೆಯಾಗಿ ಬದುಕಿಯೇ ಇದ್ದೇನೆ. ಈಗ ಸಾವಿಗಾಗಿ ಹಂಬಲಿಸುತ್ತಿದ್ದೇನೆ. ನನ್ನ ಈ ದುರ್ದೆಸೆ ನಿನಗೆ ಬರುವುದು ಬೇಡ!” ಕಾಗೆಯ ಈ ಮಾತನ್ನು ಕೇಳುತ್ತಿದ್ದಂತೆಯೇ ಅಲೆಗ್ಸಾಂಡರನ ಬೊಗಸೆಯಿಂದ.ನೀರು ಕೆಳಕ್ಕೆ ಚೆಲ್ಲಿಹೋಯಿತು! ಅಮರತ್ತದ ಅಮಲು ಇಳಿದು ಹೋಯಿತು. ಹಿಮಾಲಯವನ್ನಿಳಿದು ತನ್ನ ಸೈನ್ಯವನ್ನು ತಲುಪಿದ. ಕೊನೆಗೆ ಬರಬಾರದ ಕಾಯಿಲೆ ಬಂದು ಸತ್ತ, ಆದರೆ ಅದು ವಿಷಾದವಿಲ್ಲದ ಸಂತೃಪ್ತ ಸಾವಾಗಿತ್ತು! ಸಾಯುವ ಮುಂಚೆ ತನ್ನ ಸೇನಾಧಿಕಾರಿಯತ್ತ ತಿರುಗಿ ಆಜ್ಞಾಪಿಸಿದ:
“ನನ್ನ ಎರಡೂ ಕೈಗಳನ್ನು ಶವದ ಪೆಟ್ಟಿಗೆಯ ಹೊರಗೆ ಜನರಿಗೆ ಕಾಣಿಸುವಂತೆ ಇರಿಸಿ ಸ್ಮಶಾನದತ್ತ ಕರೆದೊಯ್ಯಿ! ಜಗತ್ತನ್ನೇ ಗೆಲ್ಲಲು ಪಣ ತೊಟ್ಟಿದ್ದ ಅಲೆಗ್ಸಾಂಡರ್ ಸತ್ತಾಗ ಬರಿಗೈಯಲ್ಲಿಹೋದ ಎಂದು ಜಗತ್ತಿಗೆ ಗೊತ್ತಾಗಲಿ!”
1977-79 ರಲ್ಲಿ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಒಂದೇ ವಿದ್ಯಾರ್ಥಿನಿಲಯದಲ್ಲಿ ನಮ್ಮ ಕೊಠಡಿಯ ಎದುರಿಗೆ ವಾಸವಾಗಿದ್ದ ಮುಸ್ಲಿಂ ಸ್ನೇಹಿತರೊಬ್ಬರು ಸ್ವಿಟ್ಸರ್ ಲ್ಯಾಂಡ್ ನಲ್ಲಿ ನೆಲೆಸಿದ್ದಾರೆ. ನಲವತ್ತು ವರ್ಷಗಳ ನಂತರ ಅವರು ನಮ್ಮ ಸಂಪರ್ಕಕ್ಕೆ ಬಂದು ಇತ್ತೀಚೆಗೆ ಕಳುಹಿಸಿದ WhatsApp ಸಂದೇಶ:
We are born without bringing any-thing
We die without taking anything !
Absolutely nothing!
And the sad thing in the interval
Between Life and Death
We fight for:
What we did not bring and What we will not take!
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com