– ಡಾ. ನಾ. ಲೋಕೇಶ ಒಡೆಯರ್, ವಿಶ್ರಾಂತ ಪ್ರಾಚಾರ್ಯರು, ದಾವಣಗೆರೆ.
ಭಾರತದ ಪ್ರಮುಖ ಧಾರ್ಮಿಕ ಪೀಠಗಳಲ್ಲಿ `ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ವು ಒಂದಾಗಿದೆ. ಹನ್ನೊಂದನೆಯ ಶತಮಾನದಲ್ಲಿ ವಿಶ್ವಬಂಧು ಮರುಳಸಿದ್ಧರಿಂದ ಸ್ಥಾಪಿತವಾದ `ಸದ್ಧರ್ಮ ಗದ್ದುಗೆಯು ಲೋಕದ ತರಳರೆಲ್ಲರ ಬಾಳಿಗೆ ಬೆಳಕಾಗಿ `ತರಳಬಾಳು ಜಗದ್ಗುರು ಪೀಠವಾಗಿದೆ. ಇದುವರೆಗೆ ಈ ಪೀಠದಲ್ಲಿ 21 ಜನ ಜಗದ್ಗುರುಗಳಾಗಿ ಸಾಮಾಜಿಕ ಒಳಿತಿನ ಕಾರ್ಯಗಳನ್ನು ಧಾರ್ಮಿಕ ನೆಲೆಗಟ್ಟಿನ ಮೇಲೆ ಮಾಡುತ್ತಾ ಬಂದಿದ್ದಾರೆ.
29 ವರ್ಷಗಳ ಹಿಂದೆ ಲಿಂಗೈಕ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಈ ಪೀಠದ 20 ನೆಯ ಜಗದ್ಗುರುಗಳಾಗಿ ಅನುಪಮ ಕಾರ್ಯನಿರ್ವಹಿಸಿ 78 ವರ್ಷಗಳ ಕಾಲ ಸಾರ್ಥಕ ಬದುಕು ಸಾಗಿಸಿ ಹಲವು ಪ್ರಥಮಗಳನ್ನು ದಾಖಲಿಸಿದರು. ಜನರು ಬಯಸುವುದನ್ನು ಕೊಡುವವನು ನಿಜವಾದ ಮುಖಂಡನಲ್ಲ ಜನರಿಗೆ ಅಗತ್ಯವಾದುದನ್ನು ನೀಡುವವನು `ನಿಜವಾದ ಮುಖಂಡ ಎಂದು ನಂಬಿ ಬದ್ಧತೆಯಿಂದ ಪ್ರಗತಿಪರ, ಜನಪರ ಚಟುವಟಿಕೆಗಳನ್ನು ನಲವತ್ತು ವರ್ಷಗಳ ಕಾಲಾವಧಿಯಲ್ಲಿ ಮಾಡಿ ಆದರ್ಶ ಸಮಾಜದ ಕನಸು ಕಂಡು ನನಸು ಮಾಡಿದವರು.
1940 ಮೇ 10 ರಂದು ಸಿರಿಗೆರೆಯ ` ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ದ ಪಟ್ಟಾಧಿಕಾರ ಸ್ವೀಕರಿಸಿದಾಗ ಹಲವು ಹತ್ತು ಸವಾಲುಗಳನ್ನು ಎದುರಿಸಬೇಕಾಗಿತ್ತು. ಅವುಗಳನ್ನೆಲ್ಲಾ ದಿಟ್ಟತನದಿಂದ ಎದುರಿಸಿ ಸುಂದರ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು. ತಮ್ಮ ಕನಸಿನಂತೆ ಸಂಸ್ಕೃತ ಭಾಷೆಯಲ್ಲಿ ಕಾಶಿಯಲ್ಲಿ ಉನ್ನತ ಪದವಿಯನ್ನು ಗಳಿಸಲು ಪಟ್ಟಪಾಡು ಹೇಳತೀರದು. 1929-1936 ಅವಧಿಯಲ್ಲಿ ಸುಸಂಸ್ಕೃತ ಶಿಕ್ಷಣ ಪಡೆಯುವ ಸಂದರ್ಭದ ಮಧ್ಯದಲ್ಲೇ 1933 ಆಗಸ್ಟ್ 2 ರಂದು ಬೇಲೂರು ತಾಲ್ಲೂಕಿನ `ಯಲಹಂಕ ಮಠಕ್ಕೆ ಚರಪಟ್ಟಾಧಿಕಾರ ವಹಿಸಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು. 1939ರಲ್ಲಿ ಸಿರಿಗೆರೆ-ಪಾಲ್ಕುರಿಕೆ-ಯಲಹಂಕ ಮಠಗಳ ಏಕೀಕರಣ ಮಾಡಿ ತಮ್ಮ ಗುರುಗಳಾಗಿದ್ದ ಶ್ರೀಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರು ಲಿಂಗೈಕ್ಯರಾದ ಕಾರಣ ಸಿರಿಗೆರೆ ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಪಟ್ಟಾಭಿಷಿಕ್ತರಾದ ಸಂದರ್ಭದಲ್ಲಿ ಮಠದ ಆರ್ಥಿಕ ಸ್ಥಿತಿ ತುಂಬಾ ಗಂಭೀರವಾಗಿತ್ತು. ಸುತ್ತಮುತ್ತ ಇರುವ ಜನರೂ ಸಹ ಕಿರುಕುಳ ನೀಡುತ್ತಿದ್ದರು. ಒಂದು ರೀತಿಯಲ್ಲಿ ಅವರು ಏರಿದ ಸದ್ಧರ್ಮ ಸಿಂಹಾಸನ ಹೂವಿನದಾಗಿರಲಿಲ್ಲ, ಮುಳ್ಳಿನದಾಗಿತ್ತು.
ಪೂಜ್ಯರು 1937-38ರಲ್ಲಿ ಬರೆದ ದಿನಚರಿಗಳಲ್ಲಿ ಒಬ್ಬ ಸಂನ್ಯಾಸಿ ಹೇಗಿರಬೇಕು, ಜವಾಬ್ದಾರಿ ಎಂತಹದು, ಸವಾಲುಗಳನ್ನು ಹೇಗೆ ಸ್ವೀಕರಿಸಿ ಕಾರ್ಯನಿರ್ವಹಿಸಿ ತಾನು ಒಪ್ಪಿಕೊಂಡ ಹುದ್ದೆಗೆ ನ್ಯಾಯ ಒದಗಿಸಲು ಸಾಧ್ಯವೆಂದು ದಾಖಲಿಸಿದ್ದಾರೆ. ಇವುಗಳನ್ನು `ಆತ್ಮನಿವೇದನೆ ಎಂಬ ಹೆಸರಿನಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಂಪಾದಿಸಿಕೊಟ್ಟು ಉಪಕಾರ ಮಾಡಿದ್ದಾರೆ. ಇದೊಂದು `ಮಠಾಧಿಪತಿಗಳಿಗೆ ಕೈಪಿಡಿ ಎಂಬುದಾಗಿ ಡಾ. ಹಾ.ಮಾ. ನಾಯಕ ಅವರು ತಮ್ಮ ಪ್ರಜಾವಾಣಿ ಅಂಕಣ ಬರಹ `ಸಂಪ್ರತಿಯಲ್ಲಿ ಪ್ರಾಂಜಲ ಮನಸ್ಸಿನಿಂದ ಬರೆದಿರುವುದು ಉಲ್ಲೇಖನೀಯ. ಇದು ಅವರ `ಅಂತರಂಗದ ಬದುಕಿಗೆ ಕನ್ನಡಿ ಹಿಡಿದರೆ, `ದಿಟ್ಟ ಹೆಜ್ಜೆ ಧೀರ ಕ್ರಮ ಎಂಬ ಗ್ರಂಥ ಅವರ ಹೋರಾಟದ ಜೀವನಕ್ಕೆ ಕನ್ನಡಿ ಹಿಡಿಯುವಂತಿದೆ. ಈ ಎರಡು ಕೃತಿಗಳನ್ನು ನಾವು ಅಧ್ಯಯನ ಮಾಡಿದರೆ ` ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವನ-ಸಾಧನೆಯ ಸ್ಪಷ್ಟ ಚಿತ್ರ ಕಣ್ಣಿಗೆ ಕಟ್ಟುತ್ತದೆ.
ಪಟ್ಟಾಭಿಷಿಕ್ತರಾಗಿ ಮಠದ ಎಲ್ಲಾ ವ್ಯವಹಾರಗಳನ್ನು ಮೊದಲು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮಾನವರ ಎಲ್ಲಾ ಅನರ್ಥಗಳಿಗೆ ಮೂಲ ಕಾರಣ ಅಜ್ಞಾನ. ಅದನ್ನು ನಿವಾರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮನವರಿಕೆ ಮಾಡಿಕೊಂಡು, 1946ರಲ್ಲೆ ಸಿರಿಗೆರೆಯಲ್ಲಿ ವಿವಿಧೋದ್ದೇಶ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಅವಕಾಶಗಳಿಂದ ವಂಚಿತರಾದ ಮಕ್ಕಳಿಗೆ ಇದು ಕಲಿಯಲು ಅವಕಾಶ ಕಲ್ಪಿಸಿಕೊಟ್ಟಿತು. ಮುಂದೆ ಮಕ್ಕಳು ವಿದ್ಯಾಭ್ಯಾಸ ಮಾಡ ಬೇಕಾದರೆ ಹಾಸ್ಟೆಲ್ ಬೇಕಲ್ಲ ಅದನ್ನು ತೆರೆದು ಅಂತ್ಯಜರಿಂದ ಹಾರವರವರೆಗೆ ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡಿದರು. ಇಲ್ಲಿ ಬಹಳ ಮುಖ್ಯವಾಗಿ `ಇವನಾರವ ಇವನಾರವನೆನ್ನದೆ ಇವ ನಮ್ಮವ ಇವ ನಮ್ಮವ ಎಂಬ ಬಸವಾದಿ ಶಿವಶರಣರ ತತ್ತ್ವ ಪೂಜ್ಯರಿಗೆ ಹಿನ್ನೆಲೆಯಾಯಿತು. ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಭಾವಿಸಿ ಹಳ್ಳಿಗಳು ಉದ್ಧಾರವಾದರೆ ಭಾರತ ಉದ್ಧಾರವಾಗುತ್ತದೆಂದು ಪರಿಭಾವಿಸಿ ರಾಜ್ಯದಲ್ಲಿ ಹದಿನಾಲ್ಕು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳು, ಪ್ರಸಾದ ನಿಲಯಗಳನ್ನು ತೆರೆದು ಸಹಸ್ರ ಸಹಸ್ರ ಮಕ್ಕಳ ಬಾಳಿಗೆ ಬೆಳಕಾದರು. ವ್ಯಕ್ತಿ ಶಿಕ್ಷಣ ಪಡೆದರೆ ಅದರ ಬಲದಿಂದ ಉದ್ಯೋಗ ಪಡೆಯುತ್ತಾನೆ. ಅದರಿಂದ ಹಣ ಸಂಚಯವಾಗುತ್ತದೆ. ತನ್ಮೂಲಕ ಸಮಾಜದಲ್ಲಿ ಸ್ಥಾನಮಾನಗಳು ತಾನೇ ತಾನಾಗಿ ಬರುತ್ತವೆಂದು ಬಲವಾಗಿ ನಂಬಿ ಈ ದಿಶೆಯಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಎಲ್ಲಾ ಜನಾಂಗದ ಮಕ್ಕಳಿಗೆ, ವ್ಯಕ್ತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ ಪ್ರಾತಃಸ್ಮರಣೀಯರು.
ಜಾತಿ ಜನರನ್ನು ವಿಘಟಿಸಿದರೆ: ಧರ್ಮ ಜನರನ್ನು ಸಂಘಟಿಸುತ್ತದೆಂದು ತಿಳಿದು ಈ ಹೊತ್ತಿಗೂ ಪ್ರಸ್ತುತವಾಗುವಂಥ ಆದರ್ಶ ಅನುಕರಣೀಯ ಜೀವನ ಮೌಲ್ಯಗಳುಳ್ಳ `ಬಸವ ಧರ್ಮವನ್ನು ಅಪ್ಪಿಕೊಂಡು ಒಪ್ಪಿಕೊಂಡು ಆಚರಣೆ ತಂದವರು.
ಇವರು ಕುಂತಲ್ಲಿ, ನಿಂತಲ್ಲಿ, ನಡೆದಾಡುವಲ್ಲಿ ಬಸವಾದಿ ಶಿವಶರಣರ ಆದರ್ಶ ಜೀವನವನ್ನು ಪರಿಚಯಿಸುವ ಉದ್ದೇಶಕ್ಕೆ ಅವರು ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡರು. ಅದಕ್ಕಾಗಿ 1949ರ ವೇಳೆಗೆ ಅಣ್ಣನ ಬಳಗ, ಅಕ್ಕನ ಬಳಗ, ಕಲಾ ಸಂಘ, ತರಳಬಾಳು ಪ್ರಕಾಶನ ಎಂಬ ಅಂಗ ಸಂಸ್ಥೆಗಳನ್ನು ಪ್ರಾರಂಭಿಸಿ, ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ದಿಶೆಯಲ್ಲಿ ದಿಟ್ಟ ಹೆಜ್ಜೆಗಳನಿಟ್ಟರು. ಇದರೊಂದಿಗೆ ಗೃಹ ಪ್ರವೇಶ, ಮದುವೆ, ಸಮಾರಾಧನೆ ಮುಂತಾದ ಸಂದರ್ಭಗಳಿಗೆ `ಸರ್ವಶರಣ ಸಮ್ಮೇಳನ ಗಳೆಂದು ಹೆಸರಿಸಿ- ತನ್ಮೂಲಕ ಜನರನ್ನು ಸುಶಿಕ್ಷಿತರನ್ನಾಗಿ ಮಾಡಿದರು. ಭಾರತೀಯ ಪರಂಪರೆಯಲ್ಲಿ ಆಚರಿಸುವ ಹಬ್ಬ-ಹರಿದಿನಗಳನ್ನು ಶಿವಶರಣ ಜಯಂತಿಗಳಾಗಿ ಪರಿವರ್ತಿಸಿ ಅವುಗಳ ಮೂಲಕ ಅವರ ಜೀವನಾದರ್ಶಗಳನ್ನು ತಿಳಿಸತೊಡಗಿದರು.ಇದಕ್ಕೆ ಪೂರಕವಾಗಿ ಪ್ರತಿವರ್ಷ ನಾಡಿನ ಒಳ-ಹೊರಗೆ `ತರಳಬಾಳು ಹುಣ್ಣಿಮೆ ಮಹೋತ್ಸವ ಗಳನ್ನು ಸಂಯೋಜಿಸಿ, ಔಪಜಾರಿಕವಾಗಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯದ ವಯಸ್ಕರಿಗೆ ಅನೌಪಚಾರಿಕ ಪದ್ಧತಿಯಲ್ಲಿ ಶಿಕ್ಷಣ ನೀಡುತ್ತಾ ಬಂದರು. ಇದೊಂದು ಅದ್ಭುತವಾದ ಕಾರ್ಯ. ಜಂಗಮ ವಿಶ್ವವಿದ್ಯಾಲಯದ ರೀತಿಯಲ್ಲಿ ಇವೆಲ್ಲ ಕಾರ್ಯ ನಿರ್ವಹಿಸಿದವು. ಇಲ್ಲೆಲ್ಲ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸಗಳನ್ನು ನೀಡುತ್ತಿದ್ದುದು ಗಮನಾರ್ಹ.
ಸಂಸ್ಕೃತದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಪೂಜ್ಯರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ `ವಿಶ್ವಬಂಧು ಮರುಳಸಿದ್ಧ `ಮರಣವೇ ಮಹಾನವಮಿ ` ಶರಣ ಸತಿ- ಲಿಂಗ ಪತಿ `ಶಿವಕುಲ ನಾಟಕಗಳನ್ನು : ಆತ್ಮನಿವೇದನೆ, ದಿಟ್ಟಹೆಜ್ಜೆ-ಧೀರ ಕ್ರಮ- ಆತ್ಮಕತೆ, ಅಣ್ಣ ಬಸವಣ್ಣ- ಗದ್ಯ ಗ್ರಂಥ, ಶತಮಾನೋತ್ಸವ ಸಂದೇಶ, ಸಂಕಲ್ಪ, ಶ್ರೀ ಗುರುಶಾಂತ ರಾಜ ದೇಶಕೇಂದ್ರ ಮಹಾಸ್ವಾಮಿಗಳವರು ಮುಂತಾದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸರ್ವತೋಮುಖ ಬೆಳವಣಿಗೆಗೆ ಅಹರ್ನಿಶಿ ಶ್ರಮಿಸಿದ ಪೂಜ್ಯರು ರಾಷ್ಟ್ರಮಟ್ಟದಲ್ಲಿ ಬೃಹನ್ಮಠದ ಖ್ಯಾತಿ ಪಸರಿಸುವಂತೆ ಮಾಡಿದರು. ಸರ್ಕಾರಿ ನೌಕರರಿಗೆ ನಿವೃತ್ತಿ ವಯಸ್ಸಿರುವಂತೆ ತಾವೇ ಸ್ವ-ಇಚ್ಛೆಯಿಂದ ಅರವತ್ತನೆಯ ವರ್ಷದಲ್ಲಿ `ತ್ಯಾಗಪತ್ರ ಅರ್ಪಿಸಿದ ಅಪರೂಪದ ಸ್ವಾಮಿಗಳೆನಿಸಿಕೊಂಡಿದ್ದಾರೆ. ಮಠ-ಮಾನ್ಯಗಳ ಇತಿಹಾಸದಲ್ಲಿ ಇದೊಂದು ಚರಿತ್ರಾರ್ಹ ಘಟನೆಯೆಂದರೆ ಅತಿಶಯೋಕ್ತಿಯಲ್ಲ. ಒಂದು `ಮಠ ಎಂದರೆ ಎಲ್ಲ ಆಯಾಮಗಳಿಂದ ಹೀಗೆ ಇರಬೇಕೆಂದು ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹೀಗಾಗಿ ಪೂಜ್ಯರನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ. ಅವರಿಗೆ ಅವರೇ ಸಮ, ಸರಿಸಾಟಿ. ಸಾಗರಕ್ಕೆ ಸಾಗರವೇ ಹೋಲಿಕೆಯಾದಂತೆ. `ನ್ಯಾಯ ನಿಷ್ಠುರಿ ದಾಕ್ಷಿಣ್ಯ ಪರ ನಾನಲ್ಲ, ಲೋಕ ವಿರೋಧಿ ಶರಣನಾರಿಗೂ ಅಂಜುವನಲ್ಲ, ಕೂಡಲ ಸಂಗನ ರಾಜ ತೇಜದಲ್ಲಿಪ್ಪೆನಾಗಿ ಈ ವಚನ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ.
ತಮ್ಮ ತರುವಾಯ ಸಮರ್ಥ ವ್ಯಕ್ತಿ ಪೀಠಕ್ಕೆ ಬರಬೇಕು, ಎಲ್ಲಾ ರೀತಿಯಲ್ಲಿ ಸಶಕ್ತವಾಗಿರಬೇಕು, ಕೇವಲ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಠದ ಕಾರ್ಯವ್ಯಾಪ್ತಿ ವಿಸ್ತರಿಸಿ-ಸುಂದರ ಜಾತ್ಯತೀತ ಸಮಾಜವನ್ನು ಬಸವಾದಿ ಶಿವಶರಣರ ತತ್ತ್ವಾದರ್ಶಗಳ ಹಿನ್ನೆಲೆಯಲ್ಲಿ ರೂಪಿಸಬೇಕೆಂದು 1979 ಫೆಬ್ರವರಿ 11 ರಂದು ಈಗಿನ ಪೂಜ್ಯರಾದ `ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಪಟ್ಟಗಟ್ಟಿ `ತರಳಾ ಬಾಳು ಎಂದು ಆಶೀರ್ವದಿಸಿ, 1992 ಸೆಪ್ಟಂಬರ್ 24 ರಂದು ಲಿಂಗೈಕ್ಯರಾದರು. ಪೂಜ್ಯರು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಇಪ್ಪತ್ತೊಂಬತ್ತು ವರ್ಷಗಳಾದವು. ಈ ಬರಹದ ಮೂಲಕ ಅವರ ಶ್ರದ್ಧಾಂಜಲಿ ಸಮಾರಂಭಕ್ಕೆ ನನ್ನ ನುಡಿ ಕಾಣಿಕೆ ಅರ್ಪಿಸುವೆ.