ರವಿ ತನ್ನ ಪ್ರತಿಭೆಯನ್ನು ಸರಿಯಾದ ಉದ್ದೇಶಕ್ಕೆ ಬಳಸದೇ ಹೋದರು: ದಿನೇಶ್ ಅಮೀನ್ ಮಟ್ಟು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ಕೆಲವರು ಹೀಗೆ ಇರುತ್ತಾರೆ, ನೀವು ಅವರನ್ನು ಪ್ರೀತಿಸಬಹುದು, ದ್ವೇಷಿಸಬಹುದು, ಆದರೆ ನಿರ್ಲಕ್ಷಿಸುವಂತಿಲ್ಲ. ರವಿ ಬೆಳಗೆರೆ ಹೀಗೆ ಆರಾಧನೆ-ಅವಹೇಳನಗಳೆರಡನ್ನೂ ಆಹ್ಹಾನಿಸಿಕೊಂಡು ಬದುಕಿದ್ದ ವ್ಯಕ್ತಿ. ನನಗೇನು ಇವರು ಸ್ನೇಹಿತರಲ್ಲ. ಇವರನ್ನು ನಾನು ಎರಡು-ಮೂರು ಬಾರಿ ಸಮಾರಂಭಗಳಲ್ಲಿ ಭೇಟಿ ಮಾಡಿದ್ದೆ, ಎರಡು-ಮೂರು ಬಾರಿ ಮಾತನಾಡಿದ್ದೆ, ಕೊನೆಯ ಬಾರಿ ಅವರೇ ಪೋನ್ ಮಾಡಿ ಮಾತನಾಡಿದ್ದು ಹಕ್ಕುಚ್ಯುತಿಯ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಲು ಹೊರಟ ಸಂದರ್ಭದಲ್ಲಿ. ನನಗೆಂದೂ ಅವರನ್ನು ಭೇಟಿ ಮಾಡಬೇಕು, ಮಾತನಾಡಬೇಕೆಂದು ಅನಿಸಿರಲೇ ಇಲ್ಲ. ಸ್ನೇಹಿತರಾದ ಡಿ.ಉಮಾಪತಿ ಅವರಿಗೆ ರವಿ ಖಾಸಾದೋಸ್ತ್, ದೆಹಲಿಗೂ ಹಲವು ಬಾರಿ ಬಂದಿದ್ದರು. ನನ್ನನ್ನು ಅರಿತಿದ್ದ ಉಮಾಪತಿ ಎಂದೂ ಅವರನ್ನು ನನಗೆ ಭೇಟಿ ಮಾಡಿಸಿರಲಿಲ್ಲ.

ನಾನೆಂದೂ ‘ಹಾಯ್ ಬೆಂಗಳೂರು’ ಪತ್ರಿಕೆಯನ್ನು ದುಡ್ಡು ಕೊಟ್ಟು ಖರೀದಿಸಿಲ್ಲ, ಎಲ್ಲಾದರೂ ಕಣ್ಣಿಗೆ ಬಿದ್ದರೆ ಪುಟಗಳನ್ನು ತಿರುವಿಹಾಕಿ ಖಾಸ್ ಬಾತ್ ಓದುತ್ತಿದ್ದೆ. ರವಿಯವರು ನಡೆಸುತ್ತಿದ್ದ ಪತ್ರಿಕೋದ್ಯಮ ಮತ್ತು ನಾನು ನಂಬಿರುವ ಪತ್ರಿಕೋದ್ಯೋಗ ಬೇರೆಬೇರೆ. ಟ್ಯಾಬ್ಲಾಯ್ಡ್ ಪತ್ರಿಕೆಗಳು ಎರಡಲಗಿನ ಕತ್ತಿ ಇದ್ದ ಹಾಗೆ. ಅದು ಲಂಕೇಶ್ ಪತ್ರಿಕೆಯೂ ಆಗಬಹುದು, ಹಾಯ್ ಬೆಂಗಳೂರು ಕೂಡಾ ಆಗಬಹುದು. ಲಂಕೇಶ್ ಪತ್ರಿಕೆಯನ್ನು ಒಂದು ತಲೆಮಾರಿನ ಕಣ್ಣು ತೆರೆಸಿದವರು ಎಂದು ಹೇಳುತ್ತಿದ್ದರು, ನನ್ನ ಕಣ್ಣು ತೆರೆಯಲು ಕೂಡಾ ಅವರ ಪತ್ರಿಕೆ ನೆರವಾಗಿರುವುದು ನಿಜ. ಆದರೆ ನನ್ನ ಪ್ರಕಾರ ರವಿ ಬೆಳಗೆರೆಗೆ ಕೂಡಾ ಅಂತಹ ಶಕ್ತಿ ಇತ್ತು, ಅದನ್ನು ಅವರು ಮಾಡದೆ ಹೋದರು ಎನ್ನುವುದು ಕೂಡಾ ಸತ್ಯ.

ನಮ್ಮ ಗುರಿ ಮತ್ತು ದಾರಿಯ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ಸಂದರ್ಭದಲ್ಲಿ ನಾವೆಲ್ಲರೂ ನಮ್ಮನ್ನು ನಾವೇ ನಿಕಷಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ. ತಪ್ಪು ಗುರಿಯನ್ನು ಇಟ್ಟುಕೊಂಡು ಓಡುವ ಓಟಗಾರ ಎಷ್ಟೇ ಪ್ರತಿಭಾಶಾಲಿಯಾಗಿದ್ದರೂ ಆತನನ್ನು ಅನುಕರಿಸುವುದು ಕಷ್ಟ, ಗುಂಡಿಗೆ ಬೀಳುವ ಅಪಾಯ ಇದೆ. ಸರಿಯಾದ ಗುರಿಯನ್ನಿಟ್ಟುಕೊಂಡು ಓಡುವ ಓಟಗಾರನದ್ದು ಸಾಮಾನ್ಯ ಪ್ರತಿಭೆಯಾದರೂ ಆತನನ್ನು ಹಿಂಬಾಲಿಸಬಹುದು, ವಿಳಂಬವಾದರೂ ಸರಿಯಾದ ಗುರಿ ತಲುಪಬಹುದು. ರವಿ ಬೆಳಗೆರೆಯವರದ್ದು ದೈತ್ಯ ಪ್ರತಿಭೆ ಅನ್ನುತ್ತಾರಲ್ಲಾ ಅಂತಹದ್ದು. ಓದುಗರನ್ನು ಸಮ್ಮೋಹನಗೊಳಿಸುವ ಅವರ ಭಾಷೆ ಮತ್ತು ಬರವಣಿಗೆಯ ಶೈಲಿ, ಅವರ ನೆನಪಿನ ಶಕ್ತಿ, ಮಾತುಗಳು ಎಲ್ಲವೂ ಅವರನ್ನು ಜನಪ್ರಿಯರನ್ನಾಗಿ ಮಾಡಿತ್ತು. ನನ್ನಂತಹರಲ್ಲಿಯೂ ಅಸೂಯೆ ಹುಟ್ಟಿಸುತ್ತಿತ್ತು. ರವಿ ತನ್ನ ಪ್ರತಿಭೆಯನ್ನು ಸರಿಯಾದ ಉದ್ದೇಶಕ್ಕೆ ಬಳಸದೆ ಹೋದರು. ಮನಸ್ಸಿನ ಮೇಲೆ ಎಚ್ಚರ ಇಲ್ಲದೆ ಓದಲು ಕಲಿತರೆ ನಮ್ಮನ್ನು ನಾವೆ ಅವರ ಕೈಗೆ ಒಪ್ಪಿಸಿಬಿಡುವಷ್ಟು ಪ್ರಭಾವಶಾಲಿಯಾಗಿ ಬರೆಯುತ್ತಿದ್ದ ರವಿ ಒಬ್ಬ ಸೃಜನಶೀಲ ಬರಹಗಾರ. ಅವರ ಕೆಲವು ಕಾದಂಬರಿಗಳು ನನಗೆ ಇಷ್ಟ, ಅದಕ್ಕಿಂತಲೂ ಹೆಚ್ಚು ಮೆಚ್ಚಿಕೊಂಡಿರುವುದು ಅವರು ಈಟಿವಿ ಚಾನೆಲ್ ನಲ್ಲಿ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮಗಳನ್ನು. ಸೃಜನಶೀಲತೆಯ ಇನ್ನೊಂದು ಮುಖ ಅಶಿಸ್ತು. ಈ ಅಶಿಸ್ತು ರವಿ ಬದುಕನ್ನು ಅಡ್ಡಾದಿಡ್ಡಿ ದಾರಿಯಲ್ಲಿ ಕೊಂಡೊಯ್ದಿತ್ತು.

ಅವರು ಮನಸ್ಸು ಮಾಡಿದ್ದರೆ, ಸರಿಯಾದ ಅವಕಾಶ ಸಿಕ್ಕಿದ್ದರೆ (ರವಿಯವರೇ ಅಭಿಮಾನ ಇಟ್ಟುಕೊಂಡಿರುವ) ಕನಿಷ್ಠ ಕನ್ನಡದ ಖುಷ್ ವಂತ್ ಸಿಂಗ್ ಆಗುತ್ತಿದ್ದರೇನೋ? ಕಡುಕಷ್ಟದಲ್ಲಿ ಬೆಳೆದ ನೋವು ಮತ್ತು ತನ್ನ ಪ್ರತಿಭೆಗೆ ಸರಿಯಾದ ಅವಕಾಶ ಸಿಗಲಿಲ್ಲ, ಬಯಸಿದಂತೆ ಯಾವುದೂ ಆಗಲಿಲ್ಲ ಎಂಬ ಕೊರಗಿನಲ್ಲಿಯೇ ಹೆಚ್ಚುಕಡಿಮೆ ಅರ್ಧ ಆಯಷ್ಯವನ್ನು ಕಳೆದ ರವಿ ಬೆಳಗೆರೆ, ತನ್ನ ಪ್ರತಿಭೆಗೆ ಹಣವನ್ನು ಹುಟ್ಟಿಸುವ ಇನ್ನೊಂದು ಶಕ್ತಿ ಇದೆ ಎಂಬ ಅರಿವಾದಾಗ ತಪ್ಪು-ಸರಿ, ನ್ಯಾಯ-ಅನ್ಯಾಯದ ವಿಮರ್ಶೆಗೆ ಹೋಗದೆ ಆ ದಾರಿಯಲ್ಲಿ ಮುನ್ನುಗ್ಗಿ ಕಳೆದುಹೋಗಿಬಿಟ್ಟರು. ಅವರಿಗೆ ಕನ್ನಡದ ಒಂದು ಮುಖ್ಯವಾಹಿನಿ ಪತ್ರಿಕೆ ಇಲ್ಲವೇ ಟಿವಿ ಚಾನೆಲ್ ನ ಸಂಪಾದಕರಾಗುವ ಅವಕಾಶ ಸಿಕ್ಕಿದ್ದರೆ, ನಾವೆಲ್ಲ ಬಯಸುವ ಪತ್ರಿಕೋದ್ಯಮವನ್ನು ಮುನ್ನಡೆಸುವ ಶಕ್ತಿ ಖಂಡಿತ ಇತ್ತು. ಆದರೆ ಅದರಲ್ಲಿ ಕಷ್ಟ-ನಷ್ಟ ಇತ್ತು, ರವಿ ಕೊನೆಗೆ ಹಿಡಿದ ದಾರಿಯಲ್ಲಿ ಸಿಕ್ಕ ದುಡ್ಡು ಮಾತ್ರ ಇರಲಿಲ್ಲ. ಆ ರೀತಿ ಭಿನ್ನವಾದ ದಾರಿ ಹಿಡಿದಿದ್ದರೆ ರವಿ ಇನ್ನೊಬ್ಬ ಅರ್ನಬ್ ಗೋಸ್ವಾಮಿ ಆಗುವ ಅಪಾಯ ಕೂಡಾ ಇತ್ತು. ಕೊನೆಗೂ ರವಿಬೆಳಗೆರೆಯ ನೆನಪು ಉಳಿಸುವುದು ಅವರ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿದ್ದ ಹೆಡ್ಡಿಂಗ್ ಗಳು ಮಾತ್ರ, ಲೇಖನಗಳಲ್ಲ.

ಶಾಶ್ವತವಾಗಿ ಅವರನ್ನು ಉಳಿಸಿರುವುದು ಅವರು ಬರೆದ ಕಾದಂಬರಿಗಳು,ಖಾಸ್ ಬಾತ್ ಅಂಕಣಗಳು, ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮಗಳು ಮಾತ್ರ. ಇದನ್ನು ಪತ್ರಿಕೋದ್ಯಮ ಎಂದು ಹೇಳಬಹುದೇ? ಬಹಳ ಮಂದಿ ರವಿಬೆಳಗೆರೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ, ಅವರಲ್ಲಿ ಯಾರಾದರೂ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಮೆಚ್ಚಿಕೊಂಡ ಎಷ್ಟು ವರದಿಗಳನ್ನು ಉಲ್ಲೇಖಿಸಲು ಸಾಧ್ಯವಿದೆ? ಈ ಪೋಸ್ಟ್ ಜೊತೆ ರವಿ ಜೊತೆ ನಾನಿದ್ದ ಪೋಟೊ ಇದೆ. ಇದು ತುಮಕೂರಿನಲ್ಲಿದ್ದಾಗ ತೆಗೆದಿದ್ದ ಪೋಟೊ. ಅಲ್ಲಿ ನನಗೂ ಆತ್ಮೀಯನಾಗಿದ್ದ ಮಹೇಶ್ ಹೊನ್ನುಡಿಕೆ ಎಂಬ ರವಿಯ ಕಡುಅಭಿಮಾನಿ ಇದ್ದ. ಪತ್ರಕರ್ತ,ರಾಜಕಾರಣಿ,ಉದ್ಯಮಿ ಎಲ್ಲವೂ ಅರೆಕಾಲಿಕ ಆಗಿದ್ದ ಮಹೇಶನ ಪುಸ್ತಕ ಬಿಡುಗಡೆಗೆ ರವಿ ಬಂದಿದ್ದಾಗ ತೆಗೆದಿದ್ದ ಪೋಟೊ. ಹೊನ್ನುಡಿಕೆ ಪಾಲಿಗೆ ರವಿ ಆರಾಧ್ಯ ದೇವರಾಗಿದ್ದರು. “ಅವರ ಭಗ್ನಪ್ರೇಮದ ಕತೆ ನನ್ನದೂ ಕೂಡಾ ಸಾರ್, ಅವರು ಕುಡಿಯುವ ರಮ್ ನನ್ನ ಫೇವರೇಟ್ ಸಾರ್, ಅವರ ಬ್ರಾಂಡ್ ಖೋಡೆ ರಮ್ ಕೂಡಾ ನನ್ನದೇ ಬ್ರಾಂಡ್ ಸಾರ್, ಅವರ ಗಡ್ಡ ನನ್ನದೇ ಸಾರ್.” ಎಂದೆಲ್ಲ ರಾತ್ರಿ ಬಾರಿನಲ್ಲಿ ಕೂತು ಗಡ್ಡ ಕೆರೆಯುತ್ತಾ, ರಮ್ ಹೀರುತ್ತಾ ಮಹೇಶ್ ಬಡಬಡಿಸುವವ. ಕೊನೆಗೆ ಕುಡಿಯಬಾರದ್ದಷ್ಟನ್ನು ಕುಡಿದು ಸಾಯಬಾರದ ವಯಸ್ಸಿನಲ್ಲಿ ಮಹೇಶ್ ನಮ್ಮನಗಲಿ ಹೋದ. ಈ ರೀತಿ ಕಣ್ಣುಮುಚ್ಚಿ ಆರಾಧಿಸುವ ಸಾವಿರಾರು ಯುವ ಅಭಿಮಾನಿಗಳು ರವಿ ಬೆಳಗೆರೆಗೆ ಇದ್ದರು, ರವಿ ಬೆಳಗೆರೆ ಖಾಸ್ ಬಾತ್ ಗಳು ಬಹಳ ಬೇಗ ಅವರಿಗೆ ಅರ್ಥವಾಗುತ್ತಿತ್ತು. ಅವರಿಗೆ ಕಣ್ಣು ತೆರೆಸುವ ನನ್ನಂತಹವರ ಮಾತುಗಳು ಅರ್ಥವಾಗುತ್ತಿರಲಿಲ್ಲ ಅರ್ಥಮಾಡಿಕೊಂಡಿದ್ದರೆ ಮಹೇಶ್ ಇಂದು ರವಿ ಮೃತದೇಹದ ಮುಂದೆ ಕಂಬನಿ ಸುರಿಸಲು ಬದುಕಿರುತ್ತಿದ್ದ. ಆ ಗೆಳೆಯ ಮಹೇಶನ ನೆನಪಿನೊಂದಿಗೆ ರವಿ ಬೆಳಗೆರೆಗೆ ವಿದಾಯ.

– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ, ಅಂಕಣಕಾರ

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *