-ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ ಮತ್ತು ಶ್ವಾಸ ಯೋಗ ಪೀಠ,ಬೆಂಗಳೂರು
ನದಿಗಳು ದೇಶದ ಜೀವನಾಡಿಗಳು. ದೇಶದ ನೆಲ ಮತ್ತು ಜೀವಸಂಕುಲ ನದಿಗಳನ್ನ ನಂಬಿಯೇ ಉಸಿರಾಡುತ್ತಿದೆ. ಹೇಗೆ ದೇಹದಲ್ಲಿ ನರನಾಡಿಗಳಿವೆಯೋ ಹಾಗೆ ದೇಶದಲ್ಲಿ ನದಿಗಳು. ಅವುಗಳನ್ನು ಸ್ವಚ್ಛವಾಗಿ ಇಟ್ಟರೆ ದೇಹವೂ ಆರೋಗ್ಯ, ದೇಶವೂ ಆರೋಗ್ಯ. ಆ ದಿಸೆಯಿಂದಲೇ ಮೋದಿ ಜೀ ಅತ್ಯಂತ ಮಹತ್ವದ ನಮಾಮಿ ಗಂಗಾ ಯೋಜನೆಯನ್ನು ಆರಂಭಿಸಿದ್ದು. ಗಂಗೆ ಈಗ ಹಿಂದಿಗಿಂತ ಹೆಚ್ಚು ಪವಿತ್ರವಾಗಿ ಹರಿಯುತ್ತಿದ್ದಾಳೆ.

ಗಂಗೆಯಂತೆ ತುಂಗಭದ್ರಾ ನದಿಯನ್ನೂ ಏಕೆ ಸ್ವಚ್ಛ ಗೊಳಿಸಬಾರದು ಅನ್ನುವ ಯೋಚನೆ ನಮಗೆ ಬಂದಿತ್ತು. ಊರು ನನ್ನದಾದ ಮೇಲೆ ನದಿ ನನ್ನದಾದ ಮೇಲೆ ಅದನ್ನು ಸಂರಕ್ಷಿಸುವ, ಕಾಯಿಲೆ ಬಿದ್ದಾಗ ಗುಣಪಡಿಸುವ ಹೊಣೆಯೂ ನಮ್ಮದೇ ಅಲ್ಲವೇ! ಹಾಗಾಗಿ ನಮ್ಮ ನೇತೃತ್ವದಲ್ಲಿ ಸ್ಥಳೀಯ ಪರಿಸರ ಸಂಘಟನೆ ನನ್ನ ಊರು ನನ್ನ ಹೊಣೆ ಜೊತೆ ಸೇರಿ ತುಂಗೆಯನ್ನು ಸ್ಚಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಎರಡು ವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಠದ ನೂರಾರು ಭಕ್ತರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಪುಣ್ಯಸ್ನಾನಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡುವುದರಿಂದ ಹಾಗೂ ನದಿ ತಟದಲ್ಲಿಯೇ ಹಬ್ಬದೂಟ ಮಾಡಿ ಸವಿಯುವುದರಿಂದ ಗಂಗೆ ತಟದ ಸ್ವಚ್ಛತಾ ಕಾರ್ಯಕ್ರಮ ಹೆಚ್ಚು ಮಹತ್ವ ಪಡೆದುಕೊಂಡಿತು.

ನಮ್ಮನ್ನು ಪೋಷಿಸಿರುವ ಪರಿಸರವನ್ನು ಯಾವತ್ತೂ ಮಲಿನ ಗೊಳಿಸಬಾರದು. ಪ್ರಮುಖವಾಗಿ ಜೀವ ನದಿಗಳು. ಅವು ಉಸಿರು ನೀಡುತ್ತವೆ. ಹಸಿರು ನೀಡುತ್ತವೆ. ಅನ್ನ ನೀಡುತ್ತವೆ. ಗೊತ್ತಿರಲಿ ಸ್ವಚ್ಛ ಪರಿಸರ ಸ್ವಚ್ಛ ಭಾರತದ ಸಂಕೇತ.ನಮ್ಮೆಲ್ಲರ ಪರಿಶ್ರಮದಿಂದ ತುಂಗೆ ಗಂಗೆಯಂತೆ ಈಗ ಹೆಚ್ಚು ಪವಿತ್ರವಾಗಿ ಹರಿಯುತ್ತಿದ್ದಾಳೆ ಎನ್ನಲು ನಮಗೆ ಸಂತೋಷವಾಗುತ್ತಿದೆ.


