ಬೆಳಗಾವಿ: ಪ್ರವಾಹ ಹಾಗೂ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ (NDRF) ನಿಯಮಗಳ ಅಡಿ ನೀಡುವ ಪರಿಹಾರಕ್ಕೆ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರ್‌ಗೆ 13,500 ರೂಪಾಯಿನಿಂದ ಮೂಲಕ 25 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇನ್ನು ಒಣ ಭೂಮಿಗೆ 6800 ನಿಂದ 11,500 ವರೆಗೆ ಸೇರಿಸಿ ವಿವಿಧ ಬೆಳೆಗಳಿಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಘೋಷಿಸಿದ್ದಾರೆ.
- ಹೆಚ್ಚಳ ಮೊತ್ತ
ಒಣ ಬೇಸಾಯ ಭೂಮಿ 6800 -13600
ನೀರಾವರಿ ಜಮೀನು 13500 -25000
ತೋಟಗಾರಿಕೆ ಬೆಳೆ 18000 -28000
ವಿಧಾನಸಭೆಯಲ್ಲಿ ನಡೆದ ನೆರೆ ಹಾನಿ ಕುರಿತ ಚರ್ಚೆಗೆ ಮಂಗಳವಾರ ಉತ್ತರ ನೀಡಿದ ಅವರು, ಹೆಚ್ಚುವರಿ ಪರಿಹಾರದಿಂದ 12.69 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾಗಿರುವ 14 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ 1200 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ ಎಂದರು. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ, ಬೆಳೆ ಹಾನಿಯಾಗಿರುವ ಒಣ ಬೇಸಾಯ ಭೂಮಿಗೆ 1 ಹೆಕ್ಟೇರ್‌ಗೆ 6,800 ರು. ಪರಿಹಾರ ನಿಗದಿಯಾಗಿತ್ತು. ಇದಕ್ಕೆ ರಾಜ್ಯ ಸರ್ಕಾರದಿಂದ 6,800 ರು. ಹೆಚ್ಚುವರಿ ಹಣ ಸೇರಿಸಲಾಗಿದೆ. ಇದೀಗ ಒಟ್ಟು ಪ್ರತಿ ಹೆಕ್ಟೇರ್‌ಗೆ 13,600 ರು. ಪರಿಹಾರ ಸಿಗಲಿದೆ.
ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರ್‌ಗೆ 13,500 ರು. ಪರಿಹಾರ ನೀಡಲಾಗುತ್ತಿತ್ತು. ಅದಕ್ಕೆ ಹೆಚ್ಚುವರಿಯಾಗಿ 11,500 ರು. ಸೇರಿಸುವ ಮೂಲಕ 25 ಸಾವಿರ ರು. ಪರಿಹಾರ ನೀಡಲಾಗುವುದು. ಪ್ರತಿ ಹೆಕ್ಟೇರ್ ತೋಟಗಾರಿಕೆ ಬೆಳೆಗೆ ನೀಡುತ್ತಿದ್ದ 18 ಸಾವಿರ ರು. ಪರಿಹಾರಕ್ಕೆ 10 ಸಾವಿರ ರು. ಸೇರಿಸಿ 28 ಸಾವಿರ ರು. ಪರಿಹಾರ ಒದಗಿಸಲಾಗುವುದು ಎಂದು ಘೋಷಿಸಿದರು.
ನೆರೆ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆ, ಕೊರತೆ ಆಗದ ರೀತಿ ಪ್ರವಾಹ ನಿರ್ವಹಣೆ ಮಾಡಿದ್ದೇವೆ. ಬೆಳೆ ಹಾನಿ ಪರಿಹಾರ ಇನ್ನಷ್ಟುಹೆಚ್ಚಾಗಬೇಕು ಎಂಬ ಚಿಂತನೆ ಇತ್ತು. ಆ ಕಾರಣಕ್ಕೆ ಕೊರೋನಾದಿಂದ ಉಂಟಾಗಿರುವ ಆರ್ಥಿಕ ಇತಿ ಮಿತಿಯೊಳಗೆ ಬೆಳೆ ನಷ್ಟಪರಿಹಾರ ಹೆಚ್ಚಳ ಮಾಡಿದ್ದೇವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 1,200 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಿದೆ. ಸಾರ್ವಜನಿಕರಿಗಾಗಿ ಸರ್ಕಾರ ಇದನ್ನು ನಿಭಾಯಿಸಲು ಸಿದ್ಧವಾಗಿದೆ ಎಂದರು.