ಬೆಂಗಳೂರು : ಮಾರ್ಚ್‌ನಲ್ಲಿ ಹೊಸ ವೇತನ ಆಯೋಗ ಜಾರಿಗೆ ಬಂದ ನಂತರ ಎನ್‌ಪಿಎಸ್ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿದ್ದಾರೆ.
ಉಡುಪಿ ಮಣಿಪಾಲದಲ್ಲಿ ನಡೆದ ಜಿಲ್ಲಾ ಸರಕಾರಿ ನೌಕರರ ಸಂಘದ 2022ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ನೌಕರರು ಕರ್ತವ್ಯದ ಅವಧಿಯಲ್ಲಿ ಮರಣ ಹೊಂದಿದರೆ 1 ಕೋಟಿ ರೂ. ಪರಿಹಾರ ನೀಡುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮನೆ ಮತ್ತು ವಿದ್ಯಾಭ್ಯಾಸ ಸಾಲದಲ್ಲಿ ರಿಯಾಯತಿ ನೀಡುವ ಬಗ್ಗೆ ಸರಕಾರದೊಂದಿಗೆ ಚರ್ಚೆ ನಡೆಯುತ್ತಿದೆ.
ಸಂಘದ ವತಿಯಿಂದ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿವರ್ಷ 10000 ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣವಾಗುವ ಅವಧಿಯನ್ನು 2023ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಕೆಜಿಐಡಿಯಲ್ಲಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದರು.



