ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯ, ಜಿಎಂಎಸ್ ಅಕಾಡೆಮಿ ಫಸ್ಟ್ ಗ್ರೇಡ್ ಕಾಲೇಜ್ ಮತ್ತು ಜಿ ಎಂ ಫಾರ್ಮಾಸುಟಿಕಲ್ ಸೈನ್ಸ್ ಅಂಡ್ ರಿಸರ್ಚ್ ಹಾಗೂ ಎನ್ ಸಿ ಸಿ ಘಟಕ, ಎನ್ಎಸ್ಎಸ್ ಘಟಕ, ಲಯನ್ಸ್ ಕ್ಲಬ್ ದಾವಣಗೆರೆ ಆಸರೆ, ಲಯನ್ಸ್ ಕ್ಲಬ್ ವಿದ್ಯಾನಗರ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ದಾವಣಗೆರೆ ಇವರ ಸಹಯೋಗದಲ್ಲಿ ದಿವಂಗತ ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಇವರ ಪುಣ್ಯ ಸ್ಮರಣೆ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿವರ್ಷದಂತೆ ಈ ವರ್ಷವೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳು ಪಾಲ್ಗೊಂಡು ತಮ್ಮ ರಕ್ತದಾನವನ್ನು ಮಾಡಿದರು. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳು ಸೇರಿ ಒಟ್ಟು 331 ಯೂನಿಟ್ ರಕ್ತವನ್ನು ದಾನ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಕ್ತದಾನ ಮಾಡುವ ವ್ಯಕ್ತಿಗಳಿಗೆ ಪ್ರಥಮ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಅರ್ಹ ವ್ಯಕ್ತಿಗಳಿಂದ ರಕ್ತವನ್ನು ದಾನವಾಗಿ ಪಡೆಯಲಾಯಿತು. ರಕ್ತದಾನ ಮಾಡಿದ ವ್ಯಕ್ತಿಗಳಿಗೆ ಎಲ್ಲಾ ರೀತಿಯ ವೈದ್ಯೋಪಚಾರಗಳೊಂದಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು.
ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳು ನವನವಿಕೆಯಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು ಎಂದು ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಘಟಕದ ಮುಖ್ಯಸ್ಥರುಗಳಾದ ಡಾ ಓಂಕಾರಪ್ಪ ಎಚ್ ಎಸ್ ಮತ್ತು ಡಾ ಸಂತೋಷ್ ಬಿ ಎಂ ತಿಳಿಸಿದರು.
ಎನ್ ಎಸ್ ಎಸ್ ಮತ್ತು ಎನ್‌ಸಿಸಿ ಘಟಕದ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದ ಉಸ್ತುವಾರಿಯನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದ ರಕ್ತದಾನ ನಡೆದಿದ್ದು, ಸಂಘಟಕ ರಲ್ಲಿ ಹರ್ಷವನ್ನುಂಟು ಮಾಡಿತ್ತು.
ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ಎಲ್ಲಾ ಸಂಘ ಸಂಸ್ಥೆಗಳಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಬೃಹತ್ ರಕ್ತದಾನ ಶಿಬಿರದಲ್ಲಿ ಕಾಲೇಜಿನ ಆಡಳಿತಾಧಿಕಾರಿಗಳಾದ ವೈ ಯು ಸುಭಾಷ್ ಚಂದ್ರ, ಡಾ ಗಿರೀಶ್ ಬೋಳಕಟ್ಟೆ, ಪ್ರೊ ಶ್ವೇತಾ ಮರಿಗೌಡರ್, ಲಯನ್ ಎ ಆರ್ ಉಜ್ಜನಪ್ಪ, ಲಯನ್ ಎಚ್ಎನ್ ಶಿವಕುಮಾರ್, ಲಯನ್ ಮೌನೇಶ್ವರ ಎನ್ ಹೆಚ್ ಮತ್ತು ಲಯನ್ ಬಿ ದಿಲ್ಯಪ್ಪ ಉಪಸ್ಥಿತರಿದ್ದರು.



