ಬೆಂಗಳೂರು: ಸಾರಿಗೆ ನೌಕರರ 6ನೇ ವೇತನ ಆಯೋಗ ಜಾರಿ ಮತ್ತು ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಾಳೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಘರ್ಷಣೆ ಮುಂದುವರಿದಿದ್ದು, ಸರ್ಕಾರ ಮುಷ್ಕರ ಮಾಡದಂತೆ ತಡೆಯಲ್ಲ.ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮಧ್ಯೆ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ನೌಕರರು ಹೇಳಿದ್ದಾರೆ.
ಸರ್ಕಾರ ವೇತನ ಹೆಚ್ಚಳಕ್ಕೆ ಸಿದ್ಧವಿದೆ. ಆದರೆ, 6ನೇ ವೇತನ ಆಯೋಗ ಜಾರಿ ಅಸಾಧ್ಯ. ಮುಷ್ಕರ ನಡೆಸಿದರೆ ಎಸ್ಮಾ ಕಾಯ್ದೆ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಸರ್ಕಾರದ ನಿರ್ಧಾರಕ್ಕೆ ಸೆಡ್ದು ಹೊಡೆದಿರುವ ಸಾರಿಗೆ ನೌಕರರು ಎಸ್ಮಾ ಜಾರಿಗೂ ಬಗ್ಗಲ್ಲ, ಜೈಲಿಗೆ ಹೋದರೂ ಹೆದರಲ್ಲ ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ.
ಸಾರಿಗೆ ನೌಕರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಸರ್ಕಾದ ಎಸ್ಮಾ ಜಾರಿ ಮಾಡಿದರೂ ತಲೆ ಕೆಡಿಸಿಕೊಳ್ಳಲ್ಲ. 6ನೇ ವೇತನ ಆಯೋಗ ಜಾರಿವರೆಗೆ ಹೋರಾಟ ನಿಲ್ಲುವುದಿಲ್ಲ. ನಾಳೆ ಒಂದೇ ಒಂದು ಬಸ್ ಕೂಡ ರಸ್ತೆಗೆ ಇಳಿಯಲ್ಲ. ಖಾಸಗಿ ಬಸ್ ಗಳನ್ನು ರಸ್ತೆಗೆ ಇಳಿಸಿದರೆ ಅವರ ಸ್ಥಿತಿಯೂ ಹೀಗೆ ಆಗಲಿದೆ ಎಂದರು.