ದಾವಣಗೆರೆ : ವಿಧಾನಸಭೆ ಚುನಾವಣೆ ಹಿನ್ನೆಲೆ ತಾಲೂಕಿನ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ತರಬೇತಿ ಪಡೆಯಲು ಬಂದಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ಶ್ರೀನಿವಾಸ್(41)ಮೃತ ಶಿಕ್ಷಕರಾಗಿದ್ದಾರೆ. ತಾಲೂಕು ಆಡಳಿತ ವತಿಯಿಂದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಪಿಆರ್‌ಓ ಮತ್ತು ಎಪಿಆರ್‌ಓಗಳಿಗೆ ಚುನಾವಣಾ ಮತದಾನ ಮತ್ತು ಮತಯಂತ್ರಗಳ ಕುರಿತ ಮೊದಲ ಹಂತದ ತರಬೇತಿ ಮಂಗಳವಾರ ಬೆಳಗ್ಗೆ 11ರಿಂದ ಆರಂಭವಾಗಿತ್ತು. ಮೊದಲ ಹಂತದ ತರಬೇತಿ ಪಡೆದ ಶಿಕ್ಷಕ ಮಧ್ಯಾಹ್ನ 1 ಗಂಟೆ ವೇಳೆಗೆ ಊಟ ಮಾಡಿ ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದ ವೇಳೆ ಕುಸಿದುಬಿದ್ದಿದ್ದಾರೆನ್ನಲಾಗಿದೆ.
ತಕ್ಷಣ ಸಹಶಿಕ್ಷಕರು ಮತ್ತು ತಾಲೂಕು ಕಚೇರಿ ಸಿಬ್ಬಂದಿ ಎಚ್ಚರ ತಪ್ಪಿದ್ದಾರೆಂದು ತಿಳಿದು ಕೂರಿಸಲು ಪ್ರಯತ್ನಿಸಿದ್ದಾರೆ. ಇವರ ಜತೆ ತಹಸೀಲ್ದಾರ್ ಎರ್ರಿಸ್ವಾಮಿ ಸ್ಥಳಕ್ಕೆ ಆಗಮಿಸಿ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.



