ಡಿವಿಜಿಸುದ್ದಿ.ಕಾಂ, ದಾವಣಗೆರೆ: ವಿದ್ಯೆ ಎಂಬ ಸಸಿಗೆ ಪರಿಶ್ರಮ ಎಂಬ ಗೊಬ್ಬರ ಹಾಕಿ ದುರ್ಗಣಗಳೆಂಬ ಕಳೆ ನಾಶಮಾಡಿದರೆ ಜ್ಞಾನದ ಗಿಡ ಬೆಳೆಯಬಹುದು ಎಂದು ರಾಣೇಬೆನ್ನೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಿ.ಬಿ. ನಂದ್ಯಾಲ ಹೇಳಿದರು.
ನಗರದ ರೋಟರಿ ಬಾಲ ಭವನದಲ್ಲಿ ಶನಿವಾರ ಕೊಂಡಜ್ಜಿ ಬಸಪ್ಪ ವಿದ್ಯಾವರ್ಧಕ ಸಂಘ, ರಾಣೇಬೆನ್ನೂರು ಲಯನ್ಸ್ ಕಬ್ಲ್ ಸಹಯೋಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಡಾ. ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನ, ಕೊಂಡಜ್ಜಿ ಬಸಪ್ಪ ಹಾಗೂ ಸಿದ್ಧಗಂಗಾಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಮನೆಯಲ್ಲಿ ಸಂಸ್ಕಾರ ಕಲಿತು, ಸಾಕ್ಷರತೆಯಿಂದ ಅಕ್ಷರ ಜ್ಞಾನ ಪಡೆದು ಜ್ಞಾನ ವಿಸ್ತರಿಸಿಕೊಂಡರೆ ಉನ್ನತ ಹುದ್ದೆ ಅಲಂಕರಿಸಬಹದುದು. ಸಿನಿಮಾ, ಕೇಬಲ್ ಟಿವಿ, ಸೆಲ್‌ಫೋನ್, ಚಾಟಿಂಗ್, ಕ್ರಿಕೆಟ್ ಎಂಬ ಐದು ಸಿ ಗಳಿಂದ ದೂರ ಇರುವುದರಿಂದ ಏಕಾಗ್ರತೆ ಸಂಪಾದಿಸಬಹುದು.
ಸರಿಯಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡುವುದೇ ಶಿಸ್ತು, ಸಮಯವನ್ನು ಗೌರವಿಸಿದರೆ ಮುಂದೆ ನಿಮ್ಮನ್ನು ಗೌರವಿಸುವ ಸಮಯ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಹತ್ತಿಯ ಬೀಜ ಎಣ್ಣೆಯಾಗಿ ಬತ್ತಿಯನ್ನು ಉರಿಸುವಂತೆ ಮಕ್ಕಳು ವೃದ್ಧಪ್ಯದಲ್ಲಿರುವ ಪೋಷಕರನ್ನು ಉರಿಸಬಾರದು. ಪೋಷಕರು ಹೇಳುವ ಮಾತುಗಳನ್ನು ಉದಾಸೀನ ಮಾಡದೇ, ಶಿಕ್ಷಕರು ಹೇಳಿಕೊಡುವ ಪಾಠವನ್ನು ಶ್ರದ್ಧೆಯಿಂದ ಆಲಿಸಿ ವಿದ್ಯಾವಂತರಾಗಿ ಎಂದು ಹೇಳಿದರು.
ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಯಾರು ಕೂಡ ಬಡತನವನ್ನು ಕೇಳಿ ಪಡೆದುಕೊಂಡು ಬರುವುದಿಲ್ಲ. ಹೀಗಾಗಿ ಬಡತನದಲ್ಲಿ ಹುಟ್ಟಿದ ಮಕ್ಕಳನ್ನು ಬಡ ಮಕ್ಕಳು ಎಂದು ಕರೆಯುವುದರ ಬದಲು ವಿಶೇಷ ಮಕ್ಕಳು ಎಂದು ಕರೆಯೋಣ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶೇ.90 ರಷ್ಟು ಅಂಕ ಪಡೆದರು ಕಡಿಮೆ. ಹೀಗಾಗಿ ಶಿಸ್ತು, ಸಂಯಮ, ಪರಿಶ್ರಮದ ಮೂಲಕ ಉತ್ತಮ ಅಂಕ ಪಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಣೇಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಬಸವರಾಜ ಎಂ. ಬಡಿಗೇರಾ, ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ.ಸತೀಶ್, ಲಯನ್ಸ್ ಕ್ಲಬ್ ರಿಜಿನಲ್ ಬೆಳ್ಳೂಡಿ ಶಿವಕುಮಾರ್, ದಾವಣಗೆರೆ ತಾಲೂಕು ಔಷಧ ವ್ಯಾಪಾರಿಗಳ ಸಂಘ ಹಾಗೂ ಅರಿವು ಬಳಗದ ಅಧ್ಯಕ್ಷ ಬಿ.ಓ.ಮಲ್ಲಿಕಾರ್ಜುನ್, ದುರ್ಗಾಂಬಿಕಾ ದೇವಸ್ಥಾನ ಸಮಿತಿ ಕಾರ್ಯದರ್ಶಿ ಗೌಡ್ರು ಜಿ. ಚನ್ನಬಸಪ್ಪ, ಲಯನ್ಸ್ ಕ್ಲಬ್ ಸದಸ್ಯ ಎಸ್.ನಾಗರಾಜ್, ವಿನೋದ್, ಯಲ್ಲಪ್ಪ, ಶಿವಕುಮಾರ್ ಇತರರು ಇದ್ದರು



