ಬೆಂಗಳೂರು : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬಾಲಚಂದ್ರ ಜಾರಕಿಹೊಳಿ ಹೆಸರು ಕೇಳಿ ಬಂದಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬೆಳಗಾವಿ ಜಿಲ್ಲೆಯ ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಅಧ್ಯಕ್ಷ ಸ್ಥಾನ ನೀಡಲು ಯಡಿಯೂರಪ್ಪ ಉತ್ಸುಕರಾಗಿದ್ದಾರೆ.
ರಾಜ್ಯ ಸರ್ಕಾರ ಬಾಲಚಂದ್ರ ಜಾರಕಿಹೊಳಿಯನ್ನು ಕೆಎಂಎಫ್ ನಾಮನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಅಧ್ಯಕ್ಷಗಿರಿ ಮೇಲೆ ಕಣ್ಣು ಇಟ್ಟಿದೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕಾಗಿ ಎಚ್.ಡಿ. ರೇವಣ್ಣ ಮತ್ತು ಶಾಸಕ ಭೀಮನಾಯ್ಕ್ ನಡುವೇ ಬಿಗ್ ಫೈಟ್ ನಡೆಯುತ್ತಿದೆ. ಇದರ ಮಧ್ಯೆ ರಾಜ್ಯ ಸರ್ಕಾರ ಬಾಲಚಂದ್ರ ಜಾರಕಿ ಹೊಳಿಯನ್ನು ಕೆಎಂಎಫ್ ನಾಮ ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಅಧ್ಯಕ್ಷ ಚುನಾವಣೆ ಕಾವು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಇದೇ ತಿಂಗಳು 31 ರಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.