ಡಿವಿಜಿಸುದ್ದಿ.ಕಾಂ, ಹರಿಹರ: ರೈತರಿಂದ ಕೋಟ್ಯಾಂತರ ಮೌಲ್ಯದ ಭತ್ತ ಖರೀದಿಸಿ ಕಳೆದ 6 ತಿಂಗಳಿಂದ ಹಣ ನೀಡದ ಎಂ.ಬಿ. ರೈಸ್ ಮಿಲ್ ಮಾಲೀಕನ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಎಂ.ಬಿ. ರೈಸ್ ಮಿಲ್ ಗೆ ನೂರಾರು ರೈತರ ಮುತ್ತಿಗೆ ಹಾಕಿ ಬಾಕಿ ಬರುವ ಹಣ ನೀಡುವಂತೆ ಪ್ರತಿಭಟಿಸಿದರು. ಅ.14 ರಂದು ಪಾವತಿಸುವುದಾಗಿ ವಾಗ್ದಾನ ಮಾಡಿದ್ದ ಎಂ.ಬಿ. ರೈಸ್ ಮಿಲ್ ಮಾಲೀಕ ವಿರುದ್ಧ ರೈತರು ಆಕ್ರೋಶಭರಿತವಾಗಿ ಧರಣಿ ನಡೆಸಿದರು. ಇದರಿಂದ ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ರಾಜಿ ಪಂಚಾಯಿತಿ ನಡೆಸಿ ಅ.14 ರಂದು ಶೇ. 50 ರಷ್ಟು ರೈತರ ಬಾಕಿ ಹಣ, ಸುಮಾರು ರೂ. 2 ಕೋಟಿ ಹಣ ಪಾವತಿಸುವುದಾಗಿ ಮಾತು ನೀಡಿದ್ದರು. ಪಂಚಾಯಿತಿಯಲ್ಲಿ ನಡೆದ ಮಾತಿನಂತೆ ಸೋಮವಾರ ರೈತರು ಹಣ ಪಡೆಯಲು ಬಂದಾಗ ಇನ್ನೂ 4 ದಿನಗಳ ಕಾಲಾವಕಾಶ ನೀಡುವಂತೆ ರೈಸ್ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಹಣ ಪಾವತಿಸುವಂತೆ ಪಟ್ಟು ಹಿಡಿದು ಗಲಾಟೆ ಆರಂಭಿಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾತುಕತೆ ನಡೆಸಿ ಪ್ರತಿ ದಿನ 40 ಲಕ್ಷದಂತೆ 5 ದಿನಗಳ ಅವಧಿಯಲ್ಲಿ ರೂ. 2 ಕೋಟಿ ಪಾವತಿಸುವುದಾಗಿ ರೈತರ ಮನವೊಲಿಸುವ ಯತ್ನ ನಡೆಸಿದ್ದಾರೆ.
ರೈತರು ಹಣ ಪಡೆಯದೇ, ಮನೆಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ರೈಸ್ ಆವರಣದಲ್ಲಿ ಧರಣಿ ನಡೆಸಲು ಸಿದ್ಧರಾಗಿದ್ದಾರೆ.
ಹುಲಿಗಿನಹೊಳೆ, ಕಮಲಾಪುರ, ಧೂಳೆಹೊಳೆ, ಗೋಪನಾಳು, ಹದಡಿ, ಕನಗಾನಹಳ್ಳಿ, ಬೆಳವನೂರು, ೬ನೇ ಕಲ್ಲು, ಗಿರಿಯಾಪುರ ಸೇರಿ ಹಾವೇರಿ ಜಿಲ್ಲೆಯ ಅನೇಕ ರೈತರಿಂದ ಎಂ.ಬಿ. ರೈಸ್ ಮಿಲ್ ಮಾಲೀಕ 3 ತಿಂಗಳ ಅವಧಿಯಲ್ಲಿ ಹಣ ಪಾವತಿಸುವುದಾಗಿ ಭರವಸೆ ನೀಡಿ ಸುಮಾರು 4 ಕೋಟಿಗೂ ಹೆಚ್ಚು ಮೌಲ್ಯದ ಭತ್ತ ಖರೀದಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಪಿಎಸ್‌ಐ ಡಿ. ರವಿಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಕಲ್ಪಿಸಿದ್ದಾರೆ.



