ಡಿವಿಜಿಸುದ್ದಿ.ಕಾಂ, ಚಿಕ್ಕಮಗಳೂರು: ಈ ಬಾರಿ 7 ರಿಂದ 8 ರಾಜ್ಯದಲ್ಲಿ ಪ್ರವಾಹ, ಅತಿವೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಂದ ವರದಿ ತರಿಸಿಕೊಂಡು, ನಂತರ ಪರಿಹಾರ ಘೋಷಣೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾಂಭೆಯ ದರ್ಶನ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲಿಯೂ ಈ ಬಾರಿ ಭಾರೀ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿದ್ದಾರೆ. ಎಲ್ಲ ರಾಜ್ಯಗಳಲ್ಲಿಯೂ ಹಾನಿ ಪ್ರಮಾಣದ ಸರ್ವೇ ಕಾರ್ಯ ನಡೆಯುತ್ತಿದೆ. ಈ ಸರ್ವೆ ಆಧಾರಿಸಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಲಿದೆ ಎಂದರು.

ಚಿಕ್ಕಮಗಳೂರಿನಲ್ಲಿಯೂ ಕಾಫಿ ತೋಟಗಳಿಗೆ ಹಾನಿ ಉಂಟಾಗಿದೆ. ಎಷ್ಟು ಪ್ರಮಾಣದಲ್ಲಿ ಹಾನಿ ಆಗಿದೆ ಎಂಬುದನ್ನು ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಸರ್ವೇ ಕಾರ್ಯ ಮುಗಿದ ಮೇಲೆ ಹಣ ಬಿಡುಗಡೆ ಮಾಡುತ್ತೇವೆ. ಎಂದರು. ಇನ್ನು ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿಯನ್ನು ಕೊಡಲು ತೀರ್ಮಾನಿಸಿದ್ದೇವೆ. ಮೊದಲ ಕಂತಿನಲ್ಲಿ 1 ಲಕ್ಷ ರೂಪಾಯಿಯನ್ನು ನಾಳೆಯಿಂದ ಬಿಡುಗಡೆ ಮಾಡಲಾಗುವುದು. ಸಣ್ಣ ಪ್ರಮಾಣದಲ್ಲಿ ಮನೆ ಹಾನಿಗೊಳಗಾಗಿದ್ದರೆ, 1 ಲಕ್ಷ ರೂಪಾಯಿ ನೀಡಿದ್ದೇನೆ ಎಂದರು.
ಕೇಂದ್ರ ಸರ್ಕಾರದಿಂದ ಪ್ರವಾಹ ಪೀಡಿತರಿಗೆ ಅನುದಾನ ಬಂದಿಲ್ಲವೆಂದು ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷ ಸದಾ ಚಟುವಟಿಕೆಯಿಂದ ಇರಬೇಕೆಂದು ಈ ರೀತಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆ ಮಾಡೋರಿಗೆ ಬೇಡ ಅನ್ನೋದಕ್ಕೆ ಆಗುತ್ತಾ ಎಂದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 98444603336, 7483892205



