ಮುಂಬೈ: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ವಿಚಾರಣೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ಹಾಜರಾಗಿ ವಿಚಾರಣೆ ಎದುರಿಸಿದರು.
ದೀಪಿಕಾ ಅವರ ಉದ್ಯಮ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿಯ ವಿಶೇಷ ಪಡೆ ಶುಕ್ರವಾರ ವಿಚಾರಣೆಗೆ ಒಳಪಡಿಸಿತ್ತು. ಹೀಗಾಗಿ ದೀಪಿಕಾ ಅವರು ಕಾನೂನು ಸಲಹೆಗಾರರನ್ನು ಭೇಟಿಯಾಗಿದ್ದರು.
ಕರಿಷ್ಮಾ ಪ್ರಕಾಶ್ ಅವರ ವಾಟ್ಸ್‌ಆ್ಯಪ್ ಸಂದೇಶಗಳಲ್ಲಿ ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿ ‘ಡಿ’ ಎಂಬ ವ್ಯಕ್ತಿ ಜತೆಗೆ ಸಂಭಾಷಣೆ ನಡೆದಿದೆ. ಆ ವ್ಯಕ್ತಿ ಯಾರು ಎಂಬುದನ್ನು ತಿಳಿಯಬೇಕಿದೆ ಎಂದು ಎನ್‌ಸಿಬಿ ಮೂಲಗಳು ಈ ಹಿಂದೆಯೇ ತಿಳಿಸಿವೆ.
ಎನ್‌ಸಿಬಿ ಕಚೇರಿ ಎದುರು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮಾಧ್ಯಮ ಸಿಬ್ಬಂದಿಯೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಹಾಗೂ ರಕುಲ್ ಪ್ರೀತ್ ಸಿಂಗ್ ಅವರಿಗೆ ಇದೇ 23ರಂದು ಎನ್‌ಸಿಬಿ ಸಮನ್ಸ್ ಜಾರಿ ಮಾಡಿತ್ತು.



