ಡಿವಿಜಿಸುದ್ದಿ.ಕಾಂ: ನಾನು ಮುಖ್ಯಮಂತ್ರಿಯಾಗಿ ಒಂದು ರೀತಿಯಲ್ಲಿ ತಂತಿಯ ಮೇಲೆ ನಡೆಯುತ್ತಿದ್ದು, ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮುನ್ನ 10 ಬಾರಿ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ನೋವು ತೋಡಿಕೊಂಡರು.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸುವ ರಂಭಾಪುರಿ ಶ್ರೀಗಳ 28ನೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗ ತಂತಿಯ ಮೇಲೆ ನಡೆಯುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಯಾವುದೇ ಅನುದಾನ ಘೋಷಣೆ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದರು.
ರಾಜ್ಯದಲ್ಲಿ ಈಗ ಹಣಕಾಸು ಪರಿಸ್ಥಿತಿ ಬೇರೆ ಸರಿ ಇಲ್ಲ. ಇಂತಹ ಸಂದರ್ಭದಲ್ಲಿ ಧರ್ಮ ಸಮ್ಮೇಳನಗಳಿಗೆ ಹಣ ಕಾಸಿನ ನೆರವು ನೀಡಲು ಸಾಧ್ಯವಿಲ್ಲ. ಒಂದು ವೇಳೆ ಹಣ ಕೊಟ್ಟರೆ ಅಕ್ಷ್ಯಮ್ಯ ಅಪರಾಧವಾಗುತ್ತದೆ. ಈ ಬಜೆಟ್ ನಲ್ಲಿ ನೆರೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡಬೇಕಿದೆ. ಹೀಗಾಗಿ ಮುಂದಿನ ಬಜೆಟ್ ನಲ್ಲಿ ಎಲ್ಲ ಸಮುದಾಯಗಳಿಗೂ ಅನ್ಯಾಯ ಮಾಡದಂತೆ ಅನುದಾನ ಘೋಷಣೆ ಮಾಡಲಿದ್ದೇನೆ ಎಂದು ತಿಳಿಸಿದರು.
ರೇಣುಕ ಮಂದಿರ ನಿರ್ಮಾಣಕ್ಕೆ 2 ಕೋಟಿ
ದಾವಣಗೆರೆಯಲ್ಲಿರುವ ಅಭಿನವ ರೇಣುಕ ಮಂದಿನ ಅಭಿವೃದ್ಧಿಗೆ ಎರಡು ಕೋಟಿ ನೀಡಲು ಸಿದ್ಧವಿದ್ದೇನೆ. ನೀವು ಕೂಡ ಒಂದು ಕೋಟಿ ಸಂಗ್ರಹ ಮಾಡಿ. ಮೂರು ಕೋಟಿಯಲ್ಲಿ ಅಭಿನವ ರೇಣುಕ ಮಂದಿರ ಅಭಿವೃದ್ಧಿಪಡಿಸೋಣ ಎಂದರು.
ನನಗೆ ಇವತ್ತು ಸುದಿನ. ಯಾಕೆಂದರೆ ಒಂದೇ ದಿನ ಎರಡು ಮಹತ್ವದ ಕಾರ್ಯಕ್ರಮಗಳಾದ ಮೈಸೂರು ದಸರಾ ಮತ್ತು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಉದ್ಘಾಟನೆ ಮಾಡಿದ್ದೇನೆ. ಈ ಹಿಂದೆಯು ರಂಭಾಪುರಿ ಶ್ರೀಗಳ ದಸರಾ ಕಾರ್ಯಕ್ರಮ ಉದ್ಘಾಟಿಸಿದ ತೃಪ್ತಿ ನನಗಿದೆ. ಎಲ್ಲರೂ ಈ ಒಂಭತ್ತು ದಿನ ನವ ರಾತ್ರಿಯಲ್ಲಿ ಭಾಗಿಯಾಗಿ ಯಶಸ್ವಿಗೊಳಸಬೇಕು ಎಂದರು.



