ಡಿವಿಜಿಸುದ್ದಿ ಕಾಂ, ದಾವಣಗೆರೆ:ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನ ಗೆಲ್ಲಬೇಕಿದ್ದು, ಎಲ್ಲಾ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮವಹಿಸಿ ಎಂದು ಕಾರ್ಯಕರ್ತರಿಗೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಕರೆ ನೀಡಿದರು.
ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕಾಂಗ್ರೆಸ್ ಪಕ್ಷದ ಎಸ್.ಎಸ್. ಭವನದಲ್ಲಿ ಆಯೋಜಿಸಿದ್ದ ಮಹಾನಗರ ಪಾಲಿಕೆ ಚುನಾವಣೆ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಯಾವ ವಾರ್ಡ್ಗೆ ಯಾರು ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ಅಭ್ಯರ್ಥಿ ಯಾರೇ ಆದರೂ, ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗೆ ಶ್ರಮವಹಿಸಬೇಕು ಎಂದರು.

ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅವರು ಮಾಡಿದ ಕೆಲಸಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಡಬೇಕಿದೆ. ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ, ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸಾಗರ್ ಎಲ್.ಎಚ್, ಕಾಂಗ್ರೆಸ್ ಮುಖಂಡರಾದ ಕೆಂಗನಹಳ್ಳಿ ಹರೀಶ್, ಎಸ್. ಮಲ್ಲಿಕಾರ್ಜುನಪ್ಪ, ಬಿ. ವೀರಣ್ಣ, ಆಲಿ ರೆಹಮಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



