ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ಗೆ ಜೂನ್ 29ರಂದು ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮಾಜಿ ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಅವರಿಗೆ ಟಿಕೆಟ್ ನೀಡಿದೆ. ಆದರೆ, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಎಚ್. ವಿಶ್ವನಾಥ್ ಗೆ ಟಿಕೆಟ್ ಕೈ ತಪ್ಪಿದೆ.
ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಎಚ್. ವಿಶ್ವನಾಥ್ ಹುಣಸೂರಿನಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಸೋತಿದ್ದರು. ಕಲಬುರ್ಗಿಯ ಸುನಿಲ್ ವಲ್ಯಾಪುರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಾಪಸಿಂಹ ನಾಯಕ್ ಅವರು ಟಿಕೆಟ್ ಪಡೆದುಕೊಂಡಿರುವ ಇನ್ನಿಬ್ಬರು ಅಭ್ಯರ್ಥಿಗಳಾಗಿದ್ದಾರೆ. ನಾಮ ಪತ್ರ ಸಲ್ಲಿಕೆಗೆ ಗುರುವಾರ ಕಡೆಯ ದಿನವಾಗಿದ್ದು, ಕೊನೆಯ ಹಂತದಲ್ಲಿ ಟಿಕೆಟ್ ಘೋಷಿಸಲಾಗಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎಂಟಿಬಿ ನಾಗರಾಜ್ ಉಪ ಚುನಾವಣೆಯಲ್ಲಿ ಸೋತಿದ್ದರೂ, ಪರಿಷತ್‌ಗೆ ಟಿಕೆಟ್ ನೀಡಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಆರ್.ಶಂಕರ್‌ಗೂ ಟಿಕೆಟ್ ದೊರೆತಿದೆ.ಚಿಂಚೋಳಿಯಿಂದ ಎರಡು ಬಾರಿ ವಿಧಾನಸಭೆ ಸದಸ್ಯರಾಗಿ, ಸಚಿವರಾಗಿದ್ದ ಸುನಿಲ್ ವಲ್ಯಾಪುರೆ ಅವರಿಗೆ ಪರಿಷತ್ ಪ್ರವೇಶಕ್ಕೆ ಅವಕಾಶ ದೊರೆತಿದೆ.



