ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರವನ್ನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಉದ್ಘಾಟಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಪರೀಕ್ಷಾ ಕೇಂದ್ರ ವನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಹಳ ದಿನಗಳಿಂದ ಕೋವಿಡ್ ಲ್ಯಾಬ್‍ನ ಬೇಡಿಕೆ ಇತ್ತು. ಇಂದು ಜಿಲ್ಲಾಡಳಿತ ನೆರವೇರಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಲು ಇಷ್ಟಪಡುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಜಿಲ್ಲೆಗೆ 15 ಬಾರಿ ಬಂದು ಹೋಗಿದ್ದೇನೆ. ಮುಂದಿನ ಬಾರಿ ಬಂದಾಗ ಪರೀಕ್ಷಾ ಕೇಂದ್ರ ಉದ್ಘಾಟನೆ ಮಾಡಬೇಕು ಎಂದು ಹೇಳಿದ್ದೆ. ಅದರಂತೆ ಇಂದು ನೆರವೇರಿಸಲಾಗಿದೆ. ಈ ಪರೀಕ್ಷಾ ಕೇಂದ್ರದಲ್ಲಿ 3 ಶಿಫ್ಟ್‍ನಲ್ಲಿ ಒಟ್ಟು 200 ಸ್ಯಾಂಪಲ್ ಪರೀಕ್ಷೆ ಮಾಡಬಹುದಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ 3 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ ಹೆಚ್ಚು ಉಪಯೋಗವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಚಿವ ಸೋಮಶೇಖರ್, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್, ಪ್ರೊ.ಲಿಂಗಣ್ಣ, ಮಾಡಾಳ್ ವಿರೂಪಾಕ್ಷಪ್ಪ, ಮಹಾಪೌರರು ಬಿ.ಜಿ.ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಸಿ ಮಮತಾ ಹೊಸ್‍ಗೌಡರ್, ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ, ಡಿಎಸ್ ಡಾ.ನಾಗರಾಜ ಮತ್ತಿತರರು ಹಾಜರಿದ್ದದರು.



