ಡಿವಿಜಿ ಸುದ್ದಿ, ದಾವಣಗೆರೆ : 2019-20 ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಕೋವಿಡ್-19 ಲಾಕ್ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ರೂ. 5 ಸಾವಿರ ಆರ್ಥಿಕ ನೆರವು ಘೋಷಿಸಿದೆ. ಇದನ್ನು ಅರ್ಹ ರೈತರಿಗೆ ತಲುಪಿಸಲು ಅದಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಕೃಷಿ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಕ್ಡೌನ್ನಿಂದಾಘಿ ಮೆಕ್ಕೆಜೋಳ ಬೇಡಿಕೆ ಕಳೆದುಕೊಂಡಿತ್ತು. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ನೆರವು ನೀಡಿದ್ದು, ಅದನ್ನು ಅಮರ್ಪಕವಾಗಿ ತಲುಪಿಸಬೇಕಿದೆ.

ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರದ ಇ-ಆಡಳಿತ ವತಿಯಿಂದ ಕೈಗೊಳ್ಳಲಾದ 2019-20ನೇ ಸಾಲಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಈಗ ದಾಖಲಾಗಿರುವ ಬೆಳೆ ವಿವರಗಳ ಆಧಾರದ ಮೇರೆಗೆ ಪಾವತಿಸಬೇಕು. ಜೊತೆಗೆ ಬೆಳೆ ಸಮೀಕ್ಷೆಯಲ್ಲಿ ಇರುವಂತೆ ಮೆಕ್ಕೆಜೋಳ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೆಂದ್ರ ಹಾಗೂ ತಾಲ್ಲೂಕು ಕಚೇರಿಯ ನಾಪಫಲಕದಲ್ಲಿ ಪ್ರದರ್ಶಿಸಬೇಕು. ಮೆಕ್ಕೆಜೋಳ ಬೆಳೆಗಾರರ ಹೆಸರು ಪಟ್ಟಿಯಲ್ಲಿ ಇದರಿದ್ದರಲ್ಲಿ, ಅಂತಹ ರೈತರಿಂದ ಅರ್ಜಿ ಪಡೆಯಬೇಕು ಎಂದು ಯೋಜನೆ ಕುರಿತು ವಿವರಿಸಿದರು.
ಬೆಳೆ ಸಮೀಕ್ಷೆಯಲ್ಲಿ ದಾಖಲಾಗದಿದ್ದಲ್ಲಿ ಅಂತಹ ರೈತರಿಂದ ಅರ್ಜಿ ಪಡೆದು ಹೋಬಳಿ ಮಟ್ಟದಲ್ಲಿ ಕೃಷಿ ಅಧಿಕಾರಿ. ಸಹಾಯಕ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರನ್ನು ಒಳಗೊಂಡ ತಂಡವನ್ನು ರಚಿಸಿ ಕೃಷಿ ಬೆಳೆಗಳ ತಾಲ್ಲೂಕುಗಳನ್ನು ಪರಿಶೀಲಿಸಿ, ಸ್ಥಳೀಯವಾಗಿ ಪಂಚನಾಮೆ ಮಾಡಿಕೊಂಡು ಪರಿಹಾರ ವಿತರಿಸಲು ತಾಲ್ಲೂಕು ಮಟ್ಟದ ಸಮಿತಿಗೆ ಶಿಫಾರಸ್ಸು ಮಾಡಬೇಕು ಎಂದು ತಿಳಿಸಿದರು.
ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಸರ್ಕಾರದ ಸೂಚನೆ ಪಾಲಿಸುವ ಮೂಲಕ ರೈತರ ಸಹಾಯಕ್ಕೆ ಮುಂದಾಗಬೇಕು. ಈ ಬಾರಿ ಮಳೆ ಜಾಸ್ತಿ ಬರಬಹುದು. ಮುನ್ನೆಚರಿಕಾ ಕ್ರಮವಾಗಿ ಅಧಿಕಾರಿಗಳು ತಯಾರಿ ನಡೆಸಿಕೊಂಡಿರಬೇಕು. ಕೊರೊನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದಂತೆ, ಜಿಲ್ಲೆಯಲ್ಲಿ ಪ್ರವಾಹ ಬಂದರೆ ಕೊರೊನಾ ಜೊತೆ ಜೊತೆಗೆ ಕೆಲಸ ಮಾಡಲು ಸನ್ನದ್ಧರಾಗಬೇಕು. ಯಾವುದೇ ರೀತಿಯ ಪ್ರಾಣ ಹಾನಿ, ಜೀವ ಹಾನಿ ಆಗದಂತೆ ನೋಡಿಕೊಳ್ಳಬೇಕು ಎಂದರು.
ಕೃಷಿ ಜಂಟಿ ಸಹಾಯಕ ನಿರ್ದೇಶಕರು ಶರಣಪ್ಪ ಮುದಗಲ್, ತಹಶೀಲ್ದಾರ್ ಗಿರೀಶ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.