ಡಿವಿಜಿಸುದ್ದಿ.ಕಾಂ, ದಾವಣಗೆರೆ: ಗಣಿಗಾರಿಕೆಯಿಂದಲೇ ಭಾರೀ ಸದ್ದು ಮಾಡಿದ್ದ ಬಳ್ಳಾರಿ ಜಿಲ್ಲೆ ಇದೀಗ ವಿಭಜನೆ ಆಗಲಿದೆಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಹೌದು, ಇಂತಹದೊಂದು ಪ್ರಶ್ನೆಗೆ ಕಾರಣವಾಗಿರುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಹೊರಡಿಸಿರುವ ಆದೇಶ ಈ ರೀತಿಯ ಚರ್ಚೆ ಹುಟ್ಟು ಹಾಕಿದೆ.
ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಜನಪ್ರನಿಧಿಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ನಮ್ಮ ಜಿಲ್ಲೆ ತುಂಬಾ ದೊಡ್ಡದಾಗಿದೆ. ಕೆಲವೊಂದು ಪ್ರದೇಶಗಳು ಜಿಲ್ಲಾ ಕೇಂದ್ರದಿಂದ ೨೦೦ ಕಿ.ಮೀ ದೂರ ಇರುವುದರಿಂದ ರೈತರು, ಕೂಲಿ ಕಾರ್ಮಿಕರು, ಬಡವರಿಗೆ ಆಡಳಿತಾತ್ಮಕ ಕೆಲಸಕ್ಕೆ ತೊಂದರೆ ಆಗುತ್ತಿದೆ. ಹೀಗಾಗಿ ಜಿಲ್ಲೆಯನ್ನು ವಿಭಜನೆ ಮಾಡುವಂತೆ ಮನವಿ ಸಲ್ಲಿಸಿದರು. ಈ ಮನವಿಸ್ವೀಕರಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಮುಂದಿನ ಅಧಿವೇಶನದ ಒಳಗೆ ವಿಷಯ ಮಂಡಿಸುವಂತೆ ಪತ್ರ ಬರೆದಿದ್ದಾರೆ.
ವಿಜಯನಗರ ೩೧ನೇ ಜಿಲ್ಲೆ?
ಬಳ್ಳಾರಿ ಜಿಲ್ಲೆ ವಿಸ್ತಾರವಾಗಿದ್ದು ಒಟ್ಟು ೧೧ ತಾಲ್ಲೂಕಗಳನ್ನು ಒಳಗೊಂಡಿದೆ. ಮೂಲ ಬಳ್ಳಾರಿಯಲ್ಲಿ ಬಳ್ಳಾರಿ, ಕರುಗೋಡು, ಸಿರಗುಪ್ಪ, ಸಂಡೂರು ಮತ್ತು ಕೂಡ್ಲಿಗಿ ಉಳಿಸಿಕೊಂಡು. ಇನ್ನುಳಿದ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ಸೇರಿಕೊಂಡು ಹೊಸಪೇಟೆ ಕೇಂದ್ರವಾಗಿಸಿಕೊಂಡು ವಿಜಯನಗರ ಜಿಲ್ಲೆ ರಚನೆ ಆಗಬೇಕಿದೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ವಿಜಯನಗರ ರಾಜ್ಯದ ೩೧ನೇ ಜಿಲ್ಲೆಯಾಗಿ ಹೊರಹೊಮ್ಮುತ್ತಾ ಅನ್ನೋ ಕುತೂಹಲ ಮೂಡಿದೆ.