ಡಿವಿಜಿ ಸುದ್ದಿ, ಬೆಂಗಳೂರು: ನಾವು ಬಂಡಾಯ ಶಾಸಕರು ಅಲ್ಲ. ನಾವು ನಮ್ಮ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರದ ವಿರುದ್ಧ ಬಂಡಾಯ ಎದ್ದು, ಸಭೆ ಮಾಡಲು ಹೋಗಿರಲಿಲ್ಲ. ಲಾಕ್ಡೌನ್ನಿಂದ ಹೋಟೆಲ್ ಬಂದ್ ಆಗಿವೆ. ಹೀಗಾಗಿ ರೊಟ್ಟಿ ತಿನ್ನಲು ಆಗಿರಲ್ಲಿಲ್ಲ. ಆದ್ದರಿಂದ ಉಮೇಶ್ ಕತ್ತಿ ಮನೆಯಲ್ಲಿ ಒಟ್ಟಿಗೆ ಸೇರಿ ರೊಟ್ಟಿ ತಿನ್ನಲು ಹೋಗಿದ್ದೆವು ಎಂದು ಹೇಳಿದ್ದಾರೆ.
ನಮಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಅಸಮಾಧಾನವಿಲ್ಲ. ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವ ವಿಚಾರದಲ್ಲಿ 5 ಸಲ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೂ ಸ್ಪದನೆ ಸಿಕ್ಕಿಲ್ಲ. ಈ ವಿಚಾರದಲ್ಲಿ ನಮ್ಮ ಅಸಮಾಧನವಿದೆ. ಕತ್ತಿ ಮನೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಬಗ್ಗೆಯೂ ಚರ್ಚೆ ಆಗಿಲ್ಲ. ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ. ಸರ್ಕಾರ ಕೆಡುವುವ ಕೆಲಸ ಯತ್ನಾಳ್ ಮಾಡುವುದಿಲ್ಲ ಎಂದರು.
ನಮ್ಮ ನಾಯಕರು ಯಡಿಯೂರಪ್ಪ ಅಲ್ಲ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಶಾ. ನಮ್ಮ ಹೈ ಕಮಾಂಡ್ ಸೂಚಿಸಿದವರು ಮುಖ್ಯಮಂತ್ರಿಯಾಗಿದ್ದಾರೆ. ಯಾರಿಗೆ ಯಾವಾಗ ಅದೃಷ್ಟ ಬರುತ್ತೆ ಹೇಗೆ ಅಂತಾ ಹೇಳಲು ಸಾಧ್ಯವಿಲ್ಲ ಎಂದರು.
ನಾವು ಬಂಡಾಯ ಮಾಡಿಲ್ಲ, ಬಂಡಾಯದ ಸೂಚನೆಯೂ ಇಲ್ಲ. ನಮಗೆ ಮಾತನಾಡಲು ಮುಕ್ತವಾದ ಸ್ವಾತಂತ್ರ ಇದೆ ಎಂದು ಯತ್ನಾಳ್ ತಿಳಿಸಿದ್ದಾರೆ.
ಇದೇ ವೇಳೆ ಉಮೇಶ್ ಕತ್ತಿ ಅವರ ಮಂತ್ರಿ ಸ್ಥಾನದ ಬಗ್ಗೆ ಕೇಳಿದ್ದಕ್ಕೆ ಈ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಈ ಬಗ್ಗೆ ನಾನು ಮಾತನಾಡಲ್ಲ ಎಂದರು.



