Connect with us

Dvgsuddi Kannada | online news portal | Kannada news online

ಕೊರೊನಾ ಜೊತೆ-ಜೊತೆಗೆ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ; ಕಂದಾಯ ಸಚಿವ  ಆರ್. ಅಶೋಕ

ಪ್ರಮುಖ ಸುದ್ದಿ

ಕೊರೊನಾ ಜೊತೆ-ಜೊತೆಗೆ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ; ಕಂದಾಯ ಸಚಿವ  ಆರ್. ಅಶೋಕ

ಡಿವಿಜಿ ಸುದ್ದಿ, ದಾವಣಗೆರೆ: ಲಾಕ್‍ಡೌನ್ ಜಾರಿಯಿಂದ ರಾಜ್ಯದಲ್ಲಿಆರ್ಥಿಕತೆಗೆ ಸಾಕಷ್ಟು ಸಮಸ್ಯೆ ಎದುರಾಗಿದೆ.  ಹೀಗಾಗಿ ಕೊರೊನಾ ಜೊತೆ ಜೊತೆಗೆ ಆರ್ಥಿಕ ಚಟುವಟಿಕೆಗಳನ್ನು ಮುನ್ನೆಡೆಸಬೇಕಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ   ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಜೊತೆಗೆ ಆರ್ಥಿಕ ಅಭಿವೃದ್ಧಿ ನಡೆಸಬೇಕಿದೆ. ಕೊರೊನಾ ಇನ್ನೂ ಒಂದು ತಿಂಗಳೋ, ಎರಡು ತಿಂಗಳೋ ಗೊತ್ತಿಲ್ಲ. ಹೀಗೇ ಪರಿಸ್ಥಿತಿ ಮುಂದುವರಿದರೆ ಜನರ ಬದುಕು ಕಷ್ಟವಾಗುತ್ತದೆ. ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆದು ಆರ್ಥಿಕ ಚಟುವಟಿಕೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಆರ್ಥಿಕ ಚಟುವಟಿಕೆಗೆ ಒತ್ತು ನೀಡಲು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.

ಮನೆ ಬಾಗಿಲಿಗೆ ಅಧಿಕಾರಿಗಳು

ವೃದ್ದಾಪ್ಯ ವೇತನ ಪಡೆಯಲು ಇನ್ಮುಂದೆ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರರ ಕಚೇರಿಗಳಿಗೆ  ವಯೋವೃದ್ದರು ಅಲೆದಾಡಬೇಕಿಲ್ಲ. ಬದಲಾಗಿ 60 ವರ್ಷ ಪೂರೈಸಿದ ಬಡವರಿಗೆ ಮನೆ ಬಾಗಿಲಿಗೇ ಸೌಲಭ್ಯ ಹುಡುಕಿಕೊಂಡು ಬರಲಿವೆ. ಯೋಜನೆಯ ಲಾಭ ಪಡೆಯಲು ವಯೋವೃದ್ಧರು ಅಲೆದಾಡಿಸುವುದನ್ನು ತಪ್ಪಿಸುವ ದೃಷ್ಟಿಯಿಂದ ಅವರ ಮನೆ ಬಾಗಿಲಿಗೇ ಈ ಯೋಜನೆ ತಲುಪಲಿದೆ. ಜಿಲ್ಲಾ ಮತ್ತು ತಾಲ್ಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್‍ಗಳ ಪಟ್ಟಿಯಿದ್ದು, ಯಾರಿಗೆ 60 ವರ್ಷ ತುಂಬಿರುತ್ತದೆಯೋ ಅವರಿಗೆ ಅಂಚೆ ಮೂಲಕ, ಇಲ್ಲವೇ ಗ್ರಾಮ ಲೆಕ್ಕಿಗರೇ ಹೋಗಿ ವೃದ್ದಾಪ್ಯ ವೇತನ ಯೋಜನೆಯ ಸೇರ್ಪಡೆ ಪತ್ರ ನೀಡಬೇಕು ಎಂದು ಸೂಚಿಸಿದರು.

ಪ್ರತಿ ತಿಂಗಳಿಗೆ ಒಂದು ಬಾರಿ ಜಿಲ್ಲಾಧಿಕಾರಿಗಳು ಒಂದು ಗ್ರಾಮಕ್ಕೆ ಭೇಟಿ ನೀಡಬೇಕು. ಬೆಳಗ್ಗೆ 10 ರಿಂದ ಸಂಜೆಯವರೆಗೆ ಗ್ರಾಮದಲ್ಲಿಯೇ ಇದ್ದು ಅಲ್ಲಿನ ಸಮಸ್ಯೆಗಳನ್ನು ಅರಿಯಬೇಕು. ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಅಲ್ಲಿನ ರೈತರ ಮನೆಯಲ್ಲಿ ಊಟ ಮಾಡಬೇಕು. ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಎಸಿ, ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಹಾಜರಿರಬೇಕು. ಈ ವೇಳೆ ಅಂಗನವಾಡಿಗಳು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕು. ಈ ಸಮಯದಲ್ಲಿ ಪಿಂಚಣಿ ಸಮಸ್ಯೆ, ರೈತರ ಸಮಸ್ಯೆ, ಖಾತಾ ಸಮಸ್ಯೆ, ನರೇಗಾ ಯೋಜನೆ ಕುರಿತಾಗಿ ಪರಿಶೀಲಿಸಬೇಕು. ಸರ್ಕಾರ ಹಾಗೂ ಕಂದಾಯ ಇಲಾಖೆಗಳು ಜನರ ಮನೆ ಬಾಗಿಲಿಗೆ ಬಂದಿದೆ ಎಂದು ಜನ ಹೇಳಬೇಕು. ಆ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪ್ರವಾಹ ಸಂಸತ್ರಸ್ತರಿಗೆ ಸರ್ಕಾರದಿಂದ ಯಾವುದೇ ರೀತಿಯ ತೊಂದರೆಯಾಗಬಾರದು. ಮನೆ ಕಟ್ಟಿಕೊಡಬೇಕು. ಸಹಾಯ ಮಾಡಬೇಕು. ಅವರ ಖಾತೆಗೆ ಹಣ ತಲುಪಿಸಬೇಕು. ಜೊತೆಗೆ ಬಹಳಷ್ಟು ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳು ಮುಚ್ಚುವ ಮೂಲಕ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ದೂರುಗಳಿವೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ತಕ್ಷಣದಿಂದಲೇ ತಮ್ಮ ಸೇವೆಯನ್ನು ಮುಂದುವರಿಸಬೇಕು. ಜೊತೆಗೆ ಒತ್ತುವರಿ ಆಗಿರುವ ಹೊಳೆದಂಡೆ, ಶಾಲೆ, ಗೋಮಾಳ, ಸರ್ಕಾರಿ ಜಮೀನುಗಳ ಸರ್ವೇಯನ್ನು ಕೂಡಲೇ ನಡೆಸಿ ಮಾಹಿತಿ ನೀಡಬೇಕು ಎಂದು ಹೇಳಿದರು.

ಸ್ಮಶಾನ ಇಲ್ಲದಿರುವ ಹಳ್ಳಿಗಳ ಪಟ್ಟಿ ಮಾಡಬೇಕು. ಪ್ರತಿ ಹಳ್ಳಿಗಳ ಪಟ್ಟಿ ಮಾಡಿ ಜಾಗ ಗೊತ್ತು ಮಾಡಿಸಬೇಕು. ಒಂದು ವೇಳೆ ಸ್ಮಶಾನಕ್ಕಾಗಿ ಜಾಗವಿಲ್ಲದಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕು. ಬಗರ್ ಹುಕುಂ, ಸಾಗುವಳಿ ಹಕ್ಕುಪತ್ರ ವಿತರಿಸಬೇಕು. ಜೊತೆಗೆ 94 ಸಿ ಹಾಗೂ 94 ಸಿಸಿ ಅಡಿಯಲ್ಲಿನ ಅರ್ಜಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಪೋಡಿಗಾಗಿ ಬಂದ ಅರ್ಜಿಗಳನ್ನು ಯಾವುದು ಬಾಕಿ ಉಳಿಸಿಕೊಳ್ಳಬಾರದೆಂದು ಸೂಚಿಸಿದರು.

ಕಂದಾಯ ಗ್ರಾಮಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಈ ಭೂಮಿ ಅರಣ್ಯ ಇಲಾಖೆಗೆ ಸಂಬಂಧಿಸಿದರೆ ಅವರೊಂದಿಗೆ ಮಾತುಕತೆ ನಡೆಸಬೇಕು. ಅವರ ಷರತ್ತು ನಿಂಬಂಧನೆಗಳು ತುಂಬಾ ಕ್ಲಿಷ್ಟಕರವಾಗಿರುತ್ತದೆ. ಭೂ ಮಂಜೂರಾತಿಗೆ ಸಂಬಂಧಪಟ್ಟ ಕಮಿಟಿ ಮಾಡಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಅನುಸರಿಸುತ್ತಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

70 ಕೋಟಿ ಹಣ ಬಿಡುಗಡೆ

ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತಹ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕಂದಾಯ ಇಲಾಖೆಯಿಂದ ಆರೋಗ್ಯ ಇಲಾಖೆಗೆ ರೂ.70 ಕೋಟಿ ಹಣ ನೀಡಲಾಗಿದೆ. ಇದನ್ನು ಅವರು ಆಸ್ಪತ್ರೆ ನಿರ್ಮಾಣಕ್ಕೆ, ಟೆಸ್ಟಿಂಗ್ ಲ್ಯಾಬ್ ಸೆಂಟರ್, ಮಾಸ್ಕ್, ಸ್ಯಾನಿಟೈಸರ್ ಖರೀದಿಗೆ ಬಳಸಿಕೊಳ್ಳಬಹುದಾಗಿದೆ. ಅದೇ ರೀತಿ ಬೆಂಗಳೂರು ಮಹಾನಗರಪಾಲಿಕೆಗೆ ರೂ. 50 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅದು ಬೇರೆ ರಾಜ್ಯ ಹಾಗೂ ದೇಶಗಳಿಂದ ಬಂದಂತಹವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಹಾಗೂ ಊಟ ವ್ಯವಸ್ಥೆಗೆ ಬಳಸಿಕೊಳ್ಳಬಹುದಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿಗಳೀಗೆ ಮಾಸ್ಕ್, ಸ್ಯಾನಿಟೈಸರ್ ಖರೀದಿ ಮಾಡಲ ರೂ.7 ಕೋಟಿ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರೂ 151.1 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕೊರೊನಾಗೆ ಸಂಬಂಧಪಟ್ಟಂತೆ ದಾವಣಗೆರೆಗೆ ರೂ. 3.24 ಕೋಟಿ ಹಣ ಬಿಡುಗಡೆ ಮಾಡಿದೆ. ಒಟ್ಟು ರೂ. 278.1 ಲಕ್ಷ ಹಣವನ್ನು ಕರೊನಾಗೆ ಸಂಬಂಧಪಟ್ಟಂತೆ ಈ ಇಲಾಖೆಗೆಗಳಿಗೆ ನೀಡಲಾಗಿದೆ ಮಾಹಿತಿ ನೀಡಿದರು.

49 ಬರಪೀಡಿತ ತಾಲ್ಲೂಕು

ಈಗಾಗಲೇ ಬರಪೀಡಿತ ತಾಲ್ಲೂಕುಗಳು 49 ಎಂದು ಘೋಷಣೆ ಮಾಡಲಾಗಿದೆ. ಇನ್ನೂ ಒಂದು ತಿಂಗಳ ಕಾಲ ಬರ ಕಾಮಗಾರಿ ಮುಂದುವರಿಸಬೇಕು. ಅದಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ. ಇದುವರೆಗೂ ರೈ. 112 ಕೋಟಿ ಹಣವನ್ನು ಬರಪೀಡಿತ ತಾಲ್ಲೂಕುಗಳಿಗೆ ನೀಡಲಾಗಿದೆ. ಎಸ್‍ಡಿಆರ್‍ಎಫ್ ಅಡಿಯಲ್ಲಿ ದಾವಣಗೆರೆಗೆ ರೂ. 14 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಜಗಳೂರು ತಾಲ್ಲೂಕು ಸೇರಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ಜನ ಸಂಕಷ್ಟದಲ್ಲಿ ಇದ್ದಾರೆ. ರಿಜಿಸ್ಟ್ರೇಷನ್ ಸಂಖ್ಯೆ ಹೆಚ್ಚಾಗಬೇಕು ಎನ್ನುವ ದೃಷ್ಟಿಯಿಂದ ರಿಜಿಸ್ಟ್ರೇಷನ್ ಶುಲ್ಕ ಕಡಿಮೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಸ್ಥಳೀಯ ಸ್ಟ್ಯಾಂಪ್ ಡ್ಯೂಟಿ ಕಡಿಮೆ ಮಾಡಬೇಕು. ಅಲ್ಲದೆ ಗೈಡೆನ್ಸ್ ವ್ಯಾಲ್ಯೂ ಇಡೀ ರಾಜ್ಯದಲ್ಲಿ ಕಡಿಮೆ ಮಾಡುವ ಪ್ರಮುಖವಾದ ನಿರ್ಧಾರ ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಇನ್ಮುಂದೆ ರಿಜಿಸ್ಟ್ರೇಷನ್ ಜಾಸ್ತಿ ಆಗಬೇಕು ಎಂದು ಪ್ರಮುಖವಾದ ನಿರ್ಧಾರ ತೆಗೆದುಕೊಂಡಿದ್ದೇವೆ. ಹೌಸಿಂಗ್ ಪ್ರಾಜೆಕ್ಟ್‍ಗೆ ಸಂಬಂಧಪಟ್ಟಂತೆ ರೂ.20 ಲಕ್ಷದವರೆಗೂ ಶೇ. 2 ರಷ್ಟು ಸ್ಟ್ಯಾಂಪ್ ಡ್ಯೂಟಿ ಇತ್ತು. ಇನ್ನೂ ಮುಂದೆ 20 ರಿಂದ 35 ಲಕ್ಷದವರೆಗೂ ಶೇ. 3 ರಷ್ಟು ಸ್ಟಾಂಪ್ ಡ್ಯೂಟಿ ಮಾಡಲಾಗಿದೆ. ಅಂದರೆ ಇದರಿಂದ ಮಧ್ಯಮ ವರ್ಗದ ಜನರಿಗೆ ವರದಾನವಾಗಿದೆ. ರಾಜ್ಯದ ಬೊಕ್ಕಸಕ್ಕೆ ವರಮಾನ ಕಡಿಮೆಯಾದರೂ ಜನರ ಒಳಿತಿಗೆ ಪರಿಗಣಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿತ ಇದೆ. ಈ ಬಾರಿ ಸ್ಟ್ಯಾಂಪ್ ಡ್ಯೂಟಿ ಒಂದರಿಂದಲೇ ರೂ. 3500 ಸಾವಿರದಿಂದ 4000 ಸಾವಿರ ಕೋಟಿ ಹಣ ಸರ್ಕಾರಕ್ಕೆ ನಷ್ಟವಾಗಿದೆ. ಆ ದೃಷ್ಟಿಯಿಂದ ಹಲವಾರು ನಿರ್ಣಯ ತೆಗೆದುಕೊಳ್ಳಲಾಗಿದೆ. ಅಕ್ರಮ ಸಕ್ರಮ ಕಾಯ್ದೆಯಡಿ ಮನೆಗಳನ್ನು ಸಕ್ರಮಗೊಳಿಸಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಆರ್ಥಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ನಿರಂತರವಾಗಿ ಸಭೆಗಳನ್ನು ಹಂತ ಹಂತವಾಗಿ ನಡೆಸಿಕೊಂಡು ಬರಲಾಗಿದೆ. ಜಿಲ್ಲೆಯ ಜನರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಕೈಗಾರಿಕೆಗಳಲ್ಲಿ ಸಿಬ್ಬಂದಿಗಳಿದ್ದು, ಲಾಕ್‍ಡೌನ್ ವೇಳೆಯಿಂದಲೂ ಕೈಗಾರಿಕೆಗಳು ನಡೆಸಿಕೊಂಡು ಬರಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಜಗಳೂರು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇರುವಂತಹ 20 ರಿಂದ 25 ಹಳ್ಳಿಗಳ ಪಟ್ಟಿ ಮಾಡಲಾಗಿದೆ. ಸಮಸ್ಯೆ ತಲೆದೋರಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಡಿಸಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಆಧಾರ್ ಲಿಂಕ್ ನೋಂದಣಿಯಲ್ಲಿ ಶೇ. 99.7 ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲಿ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ರಾಮಪ್ಪ, ಪ್ರೊ.ಲಿಂಗಣ್ಣ, ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮೇಯರ್ ಅಜಯ್ ಕುಮಾರ್, ದೂಡಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಉಪಸ್ಥಿತರಿದ್ದರು.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top