ಅಭಿವೃದ್ಧಿ ಕಾಮಗಾರಿಗಳಿಗೆ ವಿಳಂಬ ಬೇಡ ; ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಶಂಕುಸ್ಥಾಪನೆ ನೆರವೇರಿಸಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ‌ಸಚಿವ ಭೈರತಿ ಬಸವರಾಜ್ ಹೇಳಿದರು.

ದೂಡಾ ಕಚೇರಿಯಲ್ಲಿ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ರಿಂಗ್ ರಸ್ತೆ ಸೇರಿದಂತೆ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪ ಅಳವಡಿಸುವುದು, ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ಸೇರಿದಂತೆ ನಿವೇಶನ ಹಂಚಿಕೆ ಕಾರ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಈಗಾಗಲೇ ಕೆಲವರು ನಿವೇಶನಕ್ಕಾಗಿ ಅರ್ಜಿ ಹಾಕಿ ಎಂಟು ವರ್ಷಗಳು ಕಳೆದಿದೆ. ಹಣ ಪಾವತಿಸಿದವರಲ್ಲಿ ಯಾರಿಗೆ ನಿವೇಶನ ಇಲ್ಲವೋ ಅವರಿಗೆ ನಿವೇಶನ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಅವರು ಕಟ್ಟಿರುವ ಹಣಕ್ಕೆ ಬಡ್ಡಿ ಸೇರಿಸಿ ವಾಪಾಸ್ಸು ಮಾಡಬೇಕೆಂದು ತಿಳಿಸಿದರು.

ಮಹಾನಗರಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್ ಮಾತನಾಡಿ, ಅಭಿವೃದ್ಧಿ ಪಡಿಸಿದ ಮತ್ತು ಅಭಿವೃದ್ಧಿ ಪಡಿಸಬೇಕಾದ ವರ್ತುಲ ರಸ್ತೆಯ ಕಾಮಗಾರಿ ಕುರಿತು ಪರ್ಯಾಯ ಮಾರ್ಗ ಅನುಸರಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ದಾವಣಗೆರೆ-ಹರಿಹರ ನಗರ ಸ್ಥಳೀಯ ಯೋಜನಾ ಪ್ರದೇಶವು ದಾವಣಗೆರೆ ಮತ್ತು ಹರಿಹರ ನಗರಗಳು ಸೇರಿದಂತೆ ಒಟ್ಟು 40 ಹಳ್ಳಿಗಳನ್ನು ಒಳಗೊಂಡಂತೆ 250.07 ಚ.ಕಿ.ಮೀ ಇರುತ್ತದೆ. ಅದರಲ್ಲಿ ದಾವಣಗೆರೆ ನಗರೀಕರಣ ಬೆಳವಣಿಗೆ ಕ್ಷೇತ್ರಕ್ಕೆ 3128.06 ಹೆಕ್ಟೇರ್ ಹಾಗೂ ಹರಿಹರ ನಗರೀಕರಣ ಬೆಳವಣಿಗೆ ಕ್ಷೇತ್ರಕ್ಕೆ 702.56 ಹೆಕ್ಟೇರ್ ಪ್ರದೇಶ ಗುರುತಿಸಲಾಗಿದೆ. ರೂ. 37 ಕೋಟಿ ವೆಚ್ಚದಲ್ಲಿ ಪಿ.ಬಿ ರಸ್ತೆಯಿಂದ ಎಸ್‍ಪಿ ಕಚೇರಿವರೆಗೆ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಬಣ್ಣ ಹಚ್ಚುವ ಕಾರ್ಯ ಬಾಕಿ ಇದೆ ಎಂದರು.

ಒಟ್ಟು 11 ಕೋಟಿ ವೆಚ್ಚದಲ್ಲಿ 6 ಕೆರೆಗಳ ಅಭಿವೃದ್ದಿ, ನವೀಕರಣ ಕೈಗೊಳ್ಳಲಾಗಿದೆ. ಧಾರವಾಡದ ಹುಲಿಕಲ್ ಕೆರೆಯ ರೀತಿಯಲ್ಲಿ ಅಭಿವೃದ್ದಿ ಮಾಡಲಾಗುವುದು. ಹಾಗೂ ಟಿವಿ ಸ್ಟೇಷನ್ ಕೆರೆಯನ್ನು ರೂ.2 ಕೋಟಿ ಮತ್ತು ಆವರೆಗೆರೆ ಕರೆಯನ್ನು ರೂ.18 ಲಕ್ಷ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಪ್ರಾಧಿಕಾರದ ವತಿಯಿಂದ ವಸತಿ ರಹಿತರಿಗೆ ಆರ್ಥಿಕವಾಗಿ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ ನಿಯಮಾನುಸಾರ ನಿವೇಶನ ಹಂಚಿಕೆ ಮಾಡುವುದು. ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಲು ಅನುಮೋದನೆ ನೀಡುವುದು ಹಾಗೂ ಪ್ರಾಧಿಕಾರದಿಂದ ರಚಿಸಲ್ಪಟ್ಟ ಬಡಾವಣೆಯಲ್ಲಿ ನಿವೇಶನದಾರರಿಗೆ ಕಟ್ಟಡ ಪರವಾನಿಗೆ ನೀಡುವುದು. ಜೊತೆಗೆ ಪ್ರಾಧಿಕಾರ ಹಾಗೂ ಖಾಸಗಿ ವಿನ್ಯಾಸಗಳಲ್ಲಿ ಲಭ್ಯವಿರುವ ಉಪಯೋಗಿ ನಿವೇಶನಗಳನ್ನು ಸರ್ಕಾರಿ ಸಂಸ್ಥೆಗಳು ಹಾಗೂ ನೊಂದಾಯಿತ ಸಂಘ ಸಂಸ್ಥೆಗಳಿಗೆ ನಿವೇಶನ ಹಂಚಿಕೆ ಮಾಡುವುದು ಪ್ರಾಧಿಕಾರದ ಮುಖ್ಯ ಚಟುವಟಿಕೆಯಾಗಿದೆ ಎಂದು ವಿವರಿಸಿದರು.

ಪ್ರಾಧಿಕಾರಕ್ಕೆ ಒಟ್ಟು ಮಂಜೂರಾದ ಖಾಯಂ ಹುದ್ದೆಗಳ ಸಂಖ್ಯೆ 38 ಇದ್ದು, ಹಾಲಿ ಭರ್ತಿ ಇರುವ ಹುದ್ದೆಗಳ ಸಂಖ್ಯೆ 18 ಇವೆ. ಇನ್ನೂ ಪ್ರಾಧಿಕಾರದಲ್ಲಿ ಹಾಲಿ 20 ಖಾಲಿ ಹುದ್ದೆಗಳಿವೆ ಎಂದು ಮಾಹಿತಿ ನೀಡಿದರು.

ಬಾಕಿ ಇರುವ 202 ಮೂಲೆ ನಿವೇಶನ ಹಾಗೂ 167 ಮಧ್ಯಂತರ ವಸತಿ ಬಿಡಿ ನಿವೇಶನಗಳನ್ನು ಹಾಗೂ ಬಾಕಿ ಇರುವ 37 ಮೂಲೆ ನಿವೇಶನ ಹಾಗೂ 04 ಮಧ್ಯಂತರ ವಸತಿ ಬಿಡಿ ನಿವೇಶನಗಳನ್ನು ನಿಯಮಾನುಸಾರ ಹಂಚಿಕೆ ಹಾಗೂ ಹರಾಜು ಮೂಲಕ ವಿಲೇ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಹೊಸದಾಗಿ ತೆಗೆದುಕೊಂಡಿರುವ ಕಾಮಗಾರಿಗಳಿಗೆ ಪರಿಶೀಲನೆ ಹಂತದಲ್ಲಿದೆ. ವರ್ತುಲ ರಸ್ತೆ ಅಭಿವೃದ್ಧಿ ಪಡಿಸುವ ಯೋಜನೆಯ ವಿವರ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ. ಅದರಂತೆ ದಾವಣಗೆರೆ-ಹರಿಹರ ಯೋಜನಾ ಪ್ರದೇಶದ ಮಹಾ ಯೋಜನೆಯನ್ನು ಪರಿಷ್ಕರಣೆ ಸಂಬಂಧ ಟೆಂಡರ್ ಕರೆದು ಬೆಂಗಳೂರಿನ ಸ್ಟೆಮ್ ಕಂಪೆನಿಗೆ ನೀಡಲಾಗಿದ್ದು, ಈ ಯೋಜನೆಯ ಮೂಲ ನಕ್ಷೆ ತಯಾರಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಎಸ್.ಎ.ರವೀದ್ರನಾಥ್, ಪ್ರೊ.ಲಿಂಗಣ್ಣ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಡಿಸಿ ಪೂಜಾರ ವೀರಮಲ್ಲಪ್ಪ ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *