ಡಿವಿಜಿ ಸುದ್ದಿ, ದಾವಣಗೆರೆ : ಭತ್ತ ಖರೀದಿಗೆ ಮೇ 15ರೊಳಗೆ ಹೆಸರು ನೊಂದಸಿಕೊಳ್ಳಿ ಎಂದು ಆದೇಶ ಹೊರಡಿಸಿರುವುದು ಎಷ್ಟು ಸೂಕ್ತ ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಪ್ರಶ್ನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸರಿ ಸುಮಾರು 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ, ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹರಿದಿರುವುದು ತಡವಾಗಿದೆ. ತರಾತುರಿಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭ ಮಾಡಲಾಗುತ್ತಿದ್ದು, ಭತ್ತ ಬೆಳೆಗಾರರ ಮೇಲೆ ಒತ್ತಡ ಹೇರುವುದು ಬೇಡ. ಲಾಕ್ ಡೌನ್ ನಿಂದ ರೈತರ ಕೈಯಲ್ಲಿ ಹಣವಿಲ್ಲ, ಭತ್ತ ಕೊಯ್ಲಿಗೂ ಸಹ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮೇ 15 ರೊಳಗೆ ರೈತರು ಹೆಸರು ನೊಂದಾಯಿಸಿ ಎಂದು ಒತ್ತಡ ಹೇರುವುದು ಸರಿಯಲ್ಲ ಎಂದಿದ್ದಾರೆ.
ಇನ್ನೂ ಕ್ವಿಂಟಲ್‍ಗೆ 1,810 ರೂಪಾಯಿ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರದ 200 ರೂಪಾಯಿ ಸೇರಿಸಿ 2010 ರೂಪಾಯಿ ದರ ನಿಗಧಿ ಮಾಡಲಾಗಿದೆ. ಭತ್ತಕ್ಕೆ ಕನಿಷ್ಠ 2600 ರೂಪಾಯಿ ದರ ನಿಗಧಿ ಮಾಡಿ ಖರೀದಿ ಮಾಡಲಿ ಎಂದು ಆಗ್ರಹಿಸಿದ್ದಾರೆ. ಇನ್ನೂ ತೂಕ ಮತ್ತು ಅಳತೆಯಲ್ಲಿ ಮೋಸ ನಡೆಯುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿ, ಅನ್ನದಾತರಿಗೆ ಮೊಸವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.



