ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ದಾವಣಗೆರೆ ಜನರಿಗೆ ಜಿಲ್ಲಾಡಳಿತ ಸಿಹಿ ಸುದ್ದಿ ನೀಡಿದೆ. ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಅರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಮಹತ್ವದ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಜಿಲ್ಲೆಯ ವರ್ತಕರು, ವಿವಿಧ ವ್ಯಾಪಾರಿ ಸಂಘಗಳ ಸಭೆ ನಡೆಯಿತು. ಈ ಸಭೆಯಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು.ಹೀಗಾಗಿ ಕೆಂಪು ವಲಯ ಇದ್ದರೂ ಕೂಡ ಅಂತರ ಕಾಯ್ದುಕೊಳ್ಳುವ, ಶುಚಿತ್ವ, ಮಾಸ್ಕ್ ಸೇರಿದಂತೆ ಕೋವಿಡ್ ನಿಯಂತ್ರಣದ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಆರ್ಥಿಕ ಚಟುವಟಿಕೆಗಳಾದ ಅವಕಾಶ ನೀಡಲಾಗಿದೆ ಎಂದರು.
ಏನೆಲ್ಲಾ ಓಪನ್ ಇರಲಿದೆ..?
ಇಂಡಸ್ಟ್ರಿಯಲ್ ಏರಿಯಾ ಮತ್ತು ಗ್ರಾಮಾಂತರ ಕೈಗಾರಿಕೆಗಳು, ರಫ್ತು, ಅಗತ್ಯ ವಸ್ತುಗಳ ಅಂಗಡಿಗಳು, ಸಣ್ಣಪುಟ್ಟ ಬಟ್ಟೆ ಅಂಗಡಿ, ಸ್ಟುಡಿಯೋ, ಮೆಕ್ಯಾನಿಕ್ ಶಾಪ್, ಉತ್ಪಾದನಾ ಘಟಕಗಳು, ಇ-ಕಾಮರ್ಸ್, ಸರ್ಕಾರಿ ಕಚೇರಿಗಳು ಹಾಗೂ ಶೇ.33 ಸಿಬ್ಬಂದಿಗಳೊಂದಿಗೆ ಖಾಸಗಿ ಕಚೇರಿಗಳು ಆರಂಭಿಸಬಹುದು. ಆರ್ಥಿಕ ಚಟುವಟಿಕೆದಾರರು ಪಾಲಿಕೆಗೆ ಸ್ವಯಂ ಘೋಷಣಾ ಮುಚ್ಚಳಿಕೆ ಬರೆದು ಚಟುವಟಿಕೆ ಆರಂಭಿಸಬೇಕು.
ಕೋವಿಡ್ ನಿಯಂತ್ರಣ ಕುರಿತಾದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮೊದಲು ಎರಡು ಬಾರಿ ಎಚ್ಚರಿಕೆ ನೀಡಿ, ಮೂರನೇ ಬಾರಿಗೆ ಪಾಲಿಕೆಗೆ ಆದೇಶಿಸಿ ಅಂತಹ ಸಂಸ್ಥೆಯನ್ನು, ಅಂಗಡಿಯನ್ನು ಸೀಲ್ ಮಾಡಿಸಲಾಗುವುದು. ಆದ್ದರಿಂದ ಎಲ್ಲರೂ ಸಾಮಾಜಿಕ ಅಂತರ, ಶುಚಿತ್ವ ವಹಿವಾಟು ನಡೆಸಬೇಕೆಂದರು.
ಏನು ಒಪನ್ ಇರಲ್ಲ..?
ಸರ್ಕಾರದ ಮೇ 1 ಮತ್ತು 2 ರ ಮಾರ್ಗಸೂಚಿಯಂತೆ ಯಾವುದೇ ವಲಯವಿದ್ದರೂ, ಅಂತರ ಜಿಲ್ಲೆ, ರಾಜ್ಯ ಸಾರಿಗೆ, ವಿಮಾನಯಾನ, ಶಾಲಾ ಕಾಲೇಜು, ಸಿನೇಮಾ,
ಧರ್ಮ ಸಭೆಗಳು, ಇತರೆ ಸಭೆ ಸಮಾರಂಭಗಳು, ಪ್ರಾರ್ಥನಾ ಮಂದಿರಗಳು, ದೇವಸ್ಥಾನಗಳಲ್ಲಿ ಸೇರುವುದು, ಶಾಪಿಂಗ್ ಮಾಲ್‍ಗಳು, ಮನರಂಜನಾ ಸ್ಥಳಗಳು, ಕ್ಷೌರದ ಅಂಗಡಿಗಳು, ಜಿಮ್, ಬಾರ್‍ಗಳು ಸೇರಿದಂತೆ ಜನಸಂದಣಿ ಆಗುವುದನ್ನು ನಿಷೇಧಿಸಲಾಗಿದೆ.
ನಗರದಲ್ಲಿ ವಿವಿಧ ಹೋಟೆಲ್, ಲಾಡ್ಜ್ ಗಳನ್ನು ಕೋವಿಡ್ ಐಸೋಲೇಷನ್‍ಗಾಗಿ ಬಳಸಿಕೊಳ್ಳಲಾಗುತ್ತಿದೆ. ಪಾಲಿಕೆ, ನಗರಸಭೆ
ಸರ್ಕಾರ ನಿಗದಿಪಡಿಸಿದ ದರವನ್ನು ಈ ಲಾಡ್ಜ್ ಗಳಿಗೆ ಭರಿಸಲಾಗುವುದು. ಅಥವಾ ಯಾವುದೇ ಇತರೆ ಕಟ್ಟಡವನ್ನು ಬಳಕೆ ಮಾಡಿಕೊಂಡರೂ ಸರ್ಕಾರದ ನಿಯಮಾನುಸಾರ ಪಾವತಿಸಲಾಗುವುದು ಎಂದರು.
ಇಂದು ಅಹಮದಾಬಾದ್ ಪ್ರಯಾಣ ಹಿನ್ನೆಲೆ ಹೊಂದಿರುವ 22 ಜನರು ಜಿಲ್ಲೆಗೆ ಆಗಮಿಸಿದ್ದು ಅವರನ್ನು ಸಹ ಕ್ವಾರಂಟೈನ್ ಮಾಡಿ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಶಿವನಗರದಲ್ಲಿ ಕಂಟೈನ್‍ಮೆಂಟ್ ಝೋನ್ ಸ್ಥಾಪನೆ ಬಗ್ಗೆ ಸ್ಥಳೀಯರಿಂದ ಸ್ವಲ್ಪ ಆಕ್ಷೇಪಣೆ ಬಂದ ಹಿನ್ನೆಲೆ ಇಂದು ನಾನು, ಡಿಸಿ, ಪಾಲಿಕೆ ಆಯುಕ್ತರು ಭೇಟಿ ನೀಡಿ ಅವರ ಕುಂದು ಕೊರತೆ ಆಲಿಸಿ, ಆಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ತಿಳಿಸಿ ಬಂದಿದ್ದೇವೆ. ಜೊತೆಗೆ ಕುಡಿಯುವ ನೀರಿನ ಅವರ ಬೇಡಿಕೆಗೆ ಸ್ಪಂದಿಸಿ ಪಾಲಿಕೆ ವತಿಯಿಂದ ಮೋಟಾರ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.