ಡಿವಿಜಿ ಸುದ್ದಿ, ದಾವಣಗೆರೆ: ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಕೊರೊನಾ ಪೀಡಿತ ಬಾಷಾ ನಗರ ನರ್ಸ್ ಮತ್ತು ಜಾಲಿನಗರ ವೃದ್ಧ ಪರಸ್ಪರ ಸಬಂಧಿಗಳಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ದಾವಣಗೆರೆಯ ಕೊರೊನಾ ಸೋಂಕಿನ ಮೂಲಗಳನ್ನು ಎರಡು ರೀತಿಯಲ್ಲಿ ಪತ್ತೆ ಹಚ್ಚಲಾಗುತ್ತಿದೆ. ಒಂದು ಸರ್ವೇಲೆನ್ಸ್ ತಂಡ ಮತ್ತು ಸಿಡಿಆರ್ ವರದಿ ಮೂಲಕ. ಸೋಂಕು ಹರಡಿದ ಮೂಲ ಕೇಸ್‍ಗಳಾದ ರೋಗಿ ಸಂಖ್ಯೆ 533 ಬಾಷನಗರ ಮತ್ತು 556 ಜಾಲಿನಗರ ಪರಸ್ಪರ ಸಂಬಂಧಿಕರಾಗಿದ್ದು, ರೋಗಿ ಸಂಖ್ಯೆ 533 ರ ಪ್ರಾಥಮಿಕ ಸಂಪರ್ಕದಲ್ಲಿದ್ದ ರೋಗಿ ಸಂಖ್ಯೆ 616 ಮತ್ತು 617 ಇವರು ಈರುಳ್ಳಿ ಲಾರಿಗಳ ಮೂಲಕ ಕೋವಿಡ್ ಇರುವ ಜಿಲ್ಲೆಗಳಾದ ಬಳ್ಳಾರಿ, ಬಾಗಲಕೋಟೆ, ಹಾಸನ ಜಿಲ್ಲೆಗಳಲ್ಲಿ ತಿರುಗಾಡಿ ಬಂದಿರುತ್ತಾರೆ.
ಇವರೇ ಬೇರೆಯವರಿಗೆ ಸೋಂಕು ಹಚ್ಚಿರುವ ಶಂಕೆ ಇದೆ. ಲಾಕ್‍ಡೌನ್ ವೇಳೆ ಅಗತ್ಯ ವಸ್ತುಗಳ, ತರಕಾರಿಗಳ ಗಾಡಿಗಳ ಓಡಾಟದಿಂದ ಸೋಂಕನ್ನು ತಂದು ಇಲ್ಲಿ ಹರಡಿದ್ದಾರೆಂಬ ನಿಲುವಿಗೆ ಬರಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಇದುವರೆಗೆ 1500 ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, 1243 ನೆಗೆಟಿವ್ ವರದಿ ಬಂದಿದೆ. 257 ವರದಿ ಬಾಕಿ ಇದ್ದು, ಒಟ್ಟು 67 ಪಾಸಿಟಿವ್ ಬಂದಿದೆ. 2 ಗುಣಮುಖ ಮತ್ತು 4 ಸಾವು ಸಂಭವಿಸಿದೆ. ಜಾಲಿನಗರ, ಬಾಷಾನಗರ, ಇಮಾಂ ನಗರ, ಕೆಟಿಜೆ ನಗರ, ಬೇತೂರು ರಸ್ತೆ ಮತ್ತು ಎಸ್‍ಪಿಎಸ್ ನಗರ ಆರು ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸಕ್ರಿಯ ಸರ್ವೆಲೆನ್ಸ್ ಕಾರ್ಯ ನಡೆಯುತ್ತಿದೆ ಎಂದರು.
ಜಿಲ್ಲಾ ಸರ್ಜನ್ ಡಾ.ನಾಗರಾಜ್ ಮಾತನಾಡಿ, ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿದ್ದು ಒಟ್ಟು 300 ಕೋವಿಡ್ ಬೆಡ್‍ಗಳ ಪೈಕಿ 50 ಐಸಿಯು, 150 ಹೈಫ್ಲೋ ಆಕ್ಸಿಜನ್ ಮತ್ತು 100 ಕೋವಿಡ್ ಸಾಮಾನ್ಯ ಬೆಡ್‍ಗಳೆಂದು ವಿಂಗಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಹೆಚ್ಚಾದಲ್ಲಿ ಬಾಪೂಜಿ ಮತ್ತು ಎಸ್‍ಎಸ್ ಆಸ್ಪತ್ರೆಯಲ್ಲಿ ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 7 ವೆಂಟಿಲೇಟರ್ ಇವೆ ಎಂದು ಮಾಹಿತಿ ನೀಡಿದರು.



