ಡಿವಿಜಿ ಸುದ್ದಿ, ಕೋಲಾರ: ಲಾಕ್ ಡೌನ್ ಮುಗಿದ ಮೇಲೆ ಬಾರ್ ಮಾಲೀಕರಿಗೆ ಬಿಗ್ ಶಾಕ್ ನೀಡಲಿದೆ ಸರ್ಕಾರ. ಬಾರ್ ನಲ್ಲಿ ಕಳ್ಳತನವಾಗಿದೆ ಎಂದು ಸುಳ್ಳು ಹೇಳಿ ಅಕ್ರಮ ಮದ್ಯ ಮಾರಾಟ ಮಾಡಿದವರ ಮೇಲೆ ಪರಿಶೀಲನೆ ವೇಳೆ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ, ಪರವಾನಿಗೆ ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಸಚಿವ ಎಚ್.ನಾಗೇಶ್, ರಾಜ್ಯದೆಲ್ಲೆಡೆ ಬಾರ್ ಗಳಲ್ಲಿ ಮದ್ಯದ ದಾಸ್ತಾನಿನ ಪರಿಶೀಲನೆ ಮಾಡಿ ವ್ಯತ್ಯಾಸ ಕಂಡುಬಂದರೆ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಪರವಾನಗಿ ರದ್ದುಪಡಿಸುತ್ತೇವೆ ಎಂದು ತಿಳಿಸಿದರು.
ಬಾರ್ ಮಾಲೀಕರೇ ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಈ ಅಕ್ರಮಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ, ಹೀಗಾಗಿ ಲಾಕ್ಡೌನ್ ಜಾರಿಗೂ ಮುನ್ನ ಮದ್ಯದಂಗಡಿಗಳಲ್ಲಿದ್ದ ಮದ್ಯದ ದಾಸ್ತಾನಿನ ವಿವರವನ್ನು ದಾಖಲೆ ಪುಸ್ತಕದಲ್ಲಿ ನಮೂದು ಮಾಡಿ ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿತ್ತು.
ದಾಖಲೆ ಪುಸ್ತಕದಲ್ಲಿನ ವಿವರ ಮತ್ತು ಸದ್ಯ ದಾಸ್ತಾನಿರುವ ಮದ್ಯದ ಪ್ರಮಾಣವನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮದ್ಯದ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡುಬಂದರೆ ಮುಲಾಜಿಲ್ಲದೆ ಅಂಗಡಿಯ ಲೈಸನ್ಸ್ ರದ್ದು ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ನನಗೆ ಕುಡುಕರ ಸಂಘದ ಅಧ್ಯಕ್ಷರೇ ಕರೆ ಮಾಡಿ ಮದ್ಯ ಆರಂಭಿಸುವಂತೆ ಒತ್ತಾಯಿಸಿದ್ದಾರೆ. ಲಾಕ್ಡೌನ್ ಕಾರಣಕ್ಕೆ ತಾತ್ಕಾಲಿಕವಾಗಿ ನಿರ್ಬಂಧಿಸಿರುವುದಾಗಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಮೇ 3ರ ನಂತರ ಮದ್ಯ ಮಾರಾಟಕ್ಕೆ ಅನುಮತಿ ಸಿಗಲಿದೆ ಎಂದರು.



