ದಿನದ ಯೋಗ: ದೇಹದಲ್ಲಿನ ವೈರಸ್ ವಿರುದ್ಧ ಹೋರಾಟಕ್ಕೆ ಧ್ಯಾನ ಸಹಕಾರಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read
  • ಜಿ.ಎನ್.ಶಿವಕುಮಾರ

ಧ್ಯಾನ (Dhyāna, Meditation) ಅಭ್ಯಾಸದಿಂದ ಉಸಿರಾಟ, ಹೃದಯದ ಬಡಿತ, ಶಾರೀರಿಕ ಸ್ವಾಭಾವಿಕ ಕ್ರಿಯೆ ನಿಯಂತ್ರಣ ಸಾಧ್ಯವಾಗಿ, ಆತಂಕ, ಭಾವೋದ್ವೇಗ, ವಿಕೃತ ಸ್ವಭಾವ ನಿವಾರಣೆಯಾಗುತ್ತದೆ. ದೃಢತೆ, ಆತ್ಮವಿಶ್ವಾಸ ವೃದ್ಧಿಸುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಕರೋನ ವೈರಸ್ ವಿರುದ್ಧ ದೈಹಿಕ ಮತ್ತು ಮಾನಸಿಕವಾಗಿ ಹೋರಾಟ ಅನಿವಾರ್ಯವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ(Yoga), ಧ್ಯಾನ(Dhyāna, Meditation) ಅತ್ಯಂತ ಸಹಕಾರಿಯಾದುದಾಗಿದೆ. ಲಾಕ್ ಡೌನ್ ವೇಳೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಅಭ್ಯಾಸ ಮಾಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

ಸರಳವಾಗಿ ಧ್ಯಾನ ಮಾಡುವ ಕ್ರಮ

ಧ್ಯಾನ ಅಭ್ಯಾಸ ವೇಳೆ ನಾನು ನನಗೆ ಹಾಗೂ ಇತರರಿಗೆ ತೊಂದರೆ ಆಗದಂತೆ ನನ್ನ ದೇಹವನ್ನು ಸಮಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತೇನೆ ಎಂದು ನಿರ್ಧರಿಸಿ. (ಇಲ್ಲಿ ವಿವರಿಸುವ ಎಲ್ಲಾ ಕ್ರಮಗಳು ಮನಸ್ಸಿನಲ್ಲಿಯೇ ನಡೆಯುವುದರಿಂದ ಬಾಯಿಯಿಂದ ಹೇಳುವ ಯಾವುದೇ ಗೊಜಿಗೆ ಹೋಗಬೇಡಿ.)

ನೇರವಾಗಿ ಕುಳಿತು ಕಣ್ಣುಗಳನ್ನು ಮುಚ್ಚಿ(ಧ್ಯಾನ ಪೂರ್ಣ ಮುಗಿಯುವವರೆಗೆ ಕಣ್ಣು ತೆರೆಯಬೇಡಿ) ನಗುಮೊಗವಿರಲಿ. ಹಸನ್ಮುಖಿಗಳಾಗಿರಿ.

ಮನಸ್ಸಿನಲ್ಲಿಯೇ ಈ ಮುಂದಿನಂತೆ ಸಂಕಲ್ಪ ಮಾಡಿ. ‘ನನ್ನ ದೇಹವನ್ನು ಅತ್ತಿತ್ತ ಅಲುಗಾಡದಂತೆ ಅಚಲವಾದ ಬೆಟ್ಟದೋಪಾದಿಯಲ್ಲಿ ಸ್ತಬ್ಧವಾಗಿರಿಸಿ ಐದು ನಿಮಿಷ ಕಾಲ ಧ್ಯಾನದಲ್ಲಿ ತೊಡಗಿಸುತ್ತೇನೆ. ಧ್ಯಾನ ಪೂರ್ಣವಾದ ಬಳಿಕವೇ ನಾನು ಮುಂದಿನ ಚಟುವಟಿಕೆ ನಡೆಸುತ್ತೇನೆ. ಇದು ನನ್ನ ಪ್ರತಿಜ್ಞೆ.’ ಮುಂದುವರಿದು, ದೀರ್ಘ ಮತ್ತು ಅಡೆ ತಡೆ ರಹಿತವಾಗಿ ನಾಲ್ಕು ಬಾರಿ ಸರಳ‌ ಮತ್ತು ದೀರ್ಘವಾಗಿ ಉಸಿರಾಟ ನಡೆಸಿ.

ನಿಮ್ಮ ನೆಚ್ಚಿನ ಭಗವಂತನಿಗೆ ಮನಸ್ಸಿನಲ್ಲೇ ನಮಿಸಿ ‘ಏ ಭಗವಂತನೆ ನಿನಗೆ ಭಕ್ತಿಪೂರ್ವಕ ಪ್ರಣಾಮಗಳು. ಧ್ಯಾನದಿಂದ ನನ್ನ ದೇಹದ ಆಲಸ್ಯ, ಜಡತ್ವವನ್ನು ದೂರಮಾಡಿ ಚೈತನ್ಯವನ್ನು ತುಂಬು’ ಎಂದು ಮನದಲ್ಲೇ ಪ್ರಾರ್ಥಿಸಿ.

ಧ್ಯಾನಕ್ಕೆ ಪೂರಕವಾಗಿ ಸಕಾರ ಧ್ಯಾನ ನಡೆಸುತ್ತಿದ್ದೇನೆ. ಅದಕ್ಕಾಗಿ ನಾನು ಜಾತಿ, ಮತ, ಪಂಥ, ಧರ್ಮದ ಎಲ್ಲೆಯನ್ನು ಮೀರಿದ ‘ಜ್ಯೋತಿ’ಯನ್ನು ಆಯ್ದುಕೊಂಡಿದ್ದೇನೆ. ಆ ಜ್ಯೋತಿಯ ಸ್ವರೂಪವನ್ನು ನನ್ನಲ್ಲಿಗೆ ಆಹ್ವಾನಿಸುತ್ತಿದ್ದೇನೆ.

jhoti

ಭಕ್ತಿಯಿಂದ ಆಹ್ವಾನಿಸಿರುವ ಜ್ಯೋತಿ ಮುಖಮಂಡಲದಲ್ಲಿ ಭ್ರೂಮಧ್ಯೆ (ಎರಡು ಹುಬ್ಬುಗಳ ಮಧ್ಯೆ) ಬಂದು ನೆಲೆಸಿದೆ. ಜಗಜ್ಯೋತಿಯೆ ನನ್ನ ಕೋರಿಕೆ ಮೇರೆಗೆ ನನ್ನ ದೇಹವನ್ನು ಪ್ರವೇಶಿಸಿರುವೆ. ನಿನ್ನ ಚೈತನ್ಯ ಶಕ್ತಿಯನ್ನು ತುಂಬುತ್ತಾ ನನ್ನ ಮುಖಮಂಡಲದ ತುಂಬೆಲ್ಲಾ ಚಲಿಸು. ಅಲ್ಲಿಂದ ಮುಂದೆ ಎರಡು ಭುಜ, ಕೈಗಳು, ಬೆರಳುಗಳು, ಎದೆ, ಹೊಟ್ಟೆ, ಕಿಬ್ಬೊಟ್ಟೆ, ಸೊಂಟ, ವಸ್ತಿಕುಹುರದ ಭಾಗ, ಕಾಲುಗಳು, ಕಾಲ್ಬೆರಳುಗಳಲ್ಲಿ ಸಂಚರಿಸಿದೆ. ಅಲ್ಲಿಂದ ಹಿಂದಿರುಗುತ್ತಾ, ಬೆನ್ನು ಹುರಿಯ ಮೂಲಕ ತಲೆಯ ಹಿಂಭಾಗದಿಂದ ನಡು ನೆತ್ತಿಯ ಮೇಲೆ ಬಂದು ನೆಲೆಸಿರುವೆ. ನಿನ್ನ ಪ್ರಭಾವಲಯದಿಂದ ನನ್ನ ದೇಹದಲ್ಲಿ ಆವರಿಸಿರುವ ಜಡತ್ವ, ಆಲಸ್ಯಗಳನ್ನು ಕಿತ್ತೊಗೆಯುತ್ತಾ ಸಂಚರಿಸಿರುವ ಜ್ಯೋತಿಯೆ ನನ್ನಲ್ಲಿ ‘ಜ್ಞಾನ ಜ್ಯೋತಿಯನ್ನು ಬೆಳಗಿಸು’. ನನ್ನ ಕೋರಿಕೆಯ ಮೇರೆಗೆ ನನ್ನ ದೇಹವನ್ನು ಪ್ರವೇಶಿಸಿ ಚೈತನ್ಯ ತುಂಬಿರುವ ನಿನಗೆ ಮತ್ತೊಮ್ಮೆ ಅನಂತ ಪ್ರಣಾಮಗಳು. ನಿನ್ನನ್ನು ನಿನ್ನ ಸ್ವ ಸ್ಥಾನಕ್ಕೆ ಬೀಳ್ಕೊಡುತ್ತಿದ್ದೇನೆ. ನಾನು ಮತ್ತೆ ಆಹ್ವಾನಿಸಿದಾಗ ನನ್ನ ದೇಹ ಪ್ರವೇಶಿಸಿ ಚೈತನ್ಯ ತುಂಬು. ಇದೋ ನಿನಗೆ ಬೀಳ್ಕೊಡುಗೆ… (ಇಲ್ಲಿಗೆ ಮೂರು ನಿಮಿಷ ಪೂರ್ಣಗೊಂಡಿರುತ್ತದೆ)

ಜ್ಯೋತಿಯನ್ನು ದೇಹದಿಂದ ಬೀಳ್ಕೊಟ್ಟ ಬಳಿಕ ಎರಡು ನಿಮಿಷ ಉಸಿರಾಟದ ಕಡೆ ಮಾತ್ರ ಗಮನ ಕೇಂದ್ರೀಕರಿಸಿ. ಯಾವುದೇ ಆಲೋಚನೆ ಮಾಡಬೇಡಿ. ಜ್ಯೋತಿಯಿಂದ ದೇಹದಲ್ಲಿ ಹರಡಿರುವ ಪ್ರಕಾಶಮಾನ ಬೆಳಕಿನಿಂದ ದೇಹದ ಪ್ರತಿ ಕಣ/ಅಣು(ಸೆಲ್ಸ್) ಚೈತನ್ಯಮಯವಾಗಿರುವುದನ್ನು ಗಮನಿಸಿ.
‘ನನ್ನ ಪ್ರತಿಜ್ಞೆಯಂತೆ ಐದು ನಿಮಿಷ ಧ್ಯಾನ ಪೂರ್ಣಗೊಳಿಸಿದ್ದೇನೆ. ದೇಹವನ್ನು ಮುಂದಿನ ಚಟುವಟಿಕೆಗಳಿಗೆ ಅಣಿಗೊಳಿಸುತ್ತಿದ್ದೇನೆ; ವಿಶ್ರಾಂತಿ ವಿಶ್ರಾಂತಿ ವಿಶ್ರಾಂತಿ’ ಎಂದು ಕೈ ಬೆರಳುಗಳನ್ನು ನಿಧಾನವಾಗಿ ಸಡಿಲಿಸಿ. ಎರಡೂ ಹಸ್ತಗಳನ್ನು ಚೆನ್ನಾಗಿ ಉಜ್ಜಿ ಎರಡೂ ಕಣ್ಣುಗಳಿಗೆ ಅಂಗೈಗಳನ್ನು ಹಿಡಿದುಕೊಳ್ಳಿ. ಕಣ್ಣಿನ ಗುಡ್ಡೆಗಳಿಗೆ ಒತ್ತಡ ಹಾಕಬೇಡಿ. ಅಲ್ಲಿ ನಿಧಾನವಾಗಿ ಕಣ್ಣುಗಳನ್ನು ತೆರೆಯುತ್ತಾ ಮಂದವಾದ ಬೆಳಕನ್ನು ನೋಡುತ್ತಾ ಹೊರಗಿನ ಪ್ರಕಾಶಮಾನವಾದ ಬೆಳಕನ್ನು ನೋಡಿ.

ಸೂಚನೆ: ಸಾಧನೆ ಬಳಿಕ ಧ್ಯಾನದ ಸಮಯವನ್ನು ಐದು ನಿಮಿಷದಿಂದ ಗಂಟೆಗಳ ವರೆಗೆ ವಿಸ್ತರಿಸಬಹುದು. ಲಘು ಧ್ಯಾನವನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ಮತ್ತು ಬಿಡುವಿದ್ದಾಗ ಅಭ್ಯಾಸಿಸಬಹುದು. ಇತರರೂ ಕಚೇರಿ, ಮನೆಗಳಲ್ಲೂ ಅಭ್ಯಾಸ ಮಾಡಬಹುದು. ಕಲಿಕೆ ವೇಳೆ ಗೊಂದಲ ಉಂಟಾದರೆ ಗುರುಮುಖೇನ ಅಭ್ಯಾಸ ನಡೆಸಿ.

ಪ್ರಯೋಜನಗಳು:

  •  ದೇಹ, ಮನಸ್ಸಿನ ದ್ವಂದ್ವ ದೂರವಾಗಿ, ಪ್ರಜ್ಞೆಯ ವಿಸ್ತಾರಕ್ಕೆ ಧ್ಯಾನ ಪೂರಕವಾಗುತ್ತದೆ.
  •  ಮನಸ್ಸು ಶಾಂತವಾಗಿ ಏಕಾಗ್ರ ಓದಿಗೆ ಸಹಕಾರಿಯಾಗಿ, ನೆನಪಿನ ಶಕ್ತಿ ಹೆಚ್ಚಳಕ್ಕೆ ಸಹಕಾರಿ ಮತ್ತು ಮನಸ್ಸು ಮಗುವಿನಂತೆ ವಿರಮಿಸುತ್ತದೆ.
  • ಉಸಿರಾಟ, ಹೃದಯದ ಬಡಿತ, ಶಾರೀರಿಕ ಸ್ವಾಭಾವಿಕ ಕ್ರಿಯೆ ನಿಯಂತ್ರಣ ಸಾಧ್ಯವಾಗಿ, ಆತಂಕ, ಭಾವೋದ್ವೇಗ, ವಿಕೃತ ಸ್ವಭಾವ ನಿವಾರಣೆಯಾಗುತ್ತದೆ. ದೃಢತೆ, ಆತ್ಮವಿಶ್ವಾಸ ವೃದ್ಧಿಸುತ್ತದೆ.
  • ವಿಕಸಿತ ಜ್ಞಾನ, ಹೊಸ ಪ್ರಕಾಶ(ಪ್ರಜ್ಞೆ)ವನ್ನು ಗಳಿಸುತ್ತೇವೆ. ವ್ಯಕ್ತಿ ಬಂಧನದ ಸ್ಥಿತಿಯಲ್ಲಿ ಧ್ಯಾನ ಆರಂಭಿಸಿ, ಧ್ಯಾನದ ತತ್ಪರಿಣಾಮವಾಗಿ ಬಂಧ ಮುಕ್ತನಾಗುತ್ತಾನೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Shivakumara G.N. M.A, B.Ed, YIC
YOGA Instructor, International Yoga Champion
Contact/wp: 94802 25879 Email: shivugn80@gmail.com

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *