ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲೆಯ ಹೆಚ್ಚಳ ಕಂಡಿದ್ದು, ಒಂದು ದಿನ 1,553 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಂದೇ ದಿನ ಅತ್ಯಧಿಕ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇಶದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 17 ಸಾವಿರ ಗಡಿ ದಾಟಿದೆ.
ಕಳೆದೊಂದು ದಿನದಲ್ಲಿ ದೇಶಾದ್ಯಂತ 36 ಸಾವುಗಳು ಸಂಭವಿಸಿವೆ. ಒಟ್ಟು ಸಾವಿನ ಸಂಖ್ಯೆ 543 ಆಗಿವೆ. ಇನ್ನು ಈ ವರೆಗೆ 2859 ಮಂದಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 552 ಪ್ರಕರಣಗಳು ವರದಿಯಾಗಿವೆ. ಅಲ್ಲಿ ಸೋಂಕು ಪ್ರಕರಣಗಳು 4 ಸಾವಿರ ಗಡಿ ಮೀರಿವೆ. ದೆಹಲಿ, ಗುಜರಾತ್, ರಾಜಸ್ಥಾನ, ತಮಿಳುನಾಡು ಮತ್ತು ಮಧ್ಯಪ್ರದೇಶಗಳು ಸೋಂಕು ಪ್ರಕಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.
ಆರಂಭದಲ್ಲಿ ಸೋಂಕು ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕೇರಳದಲ್ಲಿ ಈಗ, ಹೊಸ ಪ್ರಕರಣಗಳು ಕಡಿಮೆಯಾಗಿವೆ. ಹೀಗಾಗಿ ಇಂದಿನಿಂದ ಲಾಕ್ ಡೌನ್ ತೆರವು ಮಾಡಲಾಗಿದೆ.



