ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಜಿಲ್ಲಾಡಳಿತ ಉತ್ತಮ ಕ್ರಮ ಕೈಗೊಂಡಿದೆ. ಸರ್ಕಾರದ ಮಾರ್ಗ ಸೂಚಿಯನ್ನು ನಾವೆಲ್ಲರೂ ಪಾಲಿಸುವ ಮೂಲಕ ಮತ್ತೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಮುರುಕಳಿಸದಂತೆ ಮುಂಜಾಗೃತಿ ವಹಿಸಬೇಕಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ತಹಶೀಲ್ದಾರ್ ಕಚೇರಿಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಕುರಿತು ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಹಂತದಲ್ಲಿ ತಾಲ್ಲೂಕು ಮಟ್ಟದಲ್ಲಿ ಸಭೆ ಕರೆದು ಕೊರೊನಾ ವೈರಸ್ ನಿಯಂತ್ರಣದ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶ ಇದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಇನ್ನಷ್ಟು ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ,. ಈಗಾಗಲೇ ಪ್ರತಿಯೊಬ್ಬ ಅಧಿಕಾರಿಗಳು ಕೊರೊನಾ ನಿಯಂತ್ರಣದ ಕುರಿತು ಅರಿವು ಮೂಡಿಸುತ್ತಿದ್ದಾರೆ. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದರು.
ಜಿಲ್ಲೆಯಲ್ಲಿ ಜಿಲ್ಲಾಡಳಿತ, ವೈದ್ಯಕೀಯ ಇಲಾಖೆ ಹಾಗೂ ರಕ್ಷಣಾ ಇಲಾಖೆ ಸೇರಿದಂತೆ ತಾಲ್ಲೂಕು ಅಧಿಕಾರಿಗಳು ಕೊರೊನಾ ವೈರಸ್ ನಿರ್ಮೂಲನೆಗೆ ಶ್ರಮಿಸುತ್ತಿದ್ದಾರೆ. ಸಭೆಗೆ ಬರುವ ಅಧಿಕಾರಿಗಳು ಹೆಚ್ಚಿನ ಮಾಹಿತಿಯೊಂದಿಗೆ ಬರಬೇಕು. ಯಾರೊಬ್ಬರು ಬೇಜಾವಾಬ್ದಾರಿಯಿಂದ ಮಾಹಿತಿ ಇಲ್ಲದೆ ಸಭೆಗೆ ಬರಬಾರದು.ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡುವರು. ಕೆಲ ಅಧಿಕಾರಿಗಳ ಹತ್ತಿರ ತಮಗೆ ಸಂಬಂಧಪಟ್ಟ ಕೊರೊನಾ ವೈರಸ್ ನಿಯಂತ್ರಣದ ಕುರಿತಾದ ಮಾಹಿತಿ ಇಲ್ಲ. ಕೂಡಲೇ ಮಾಹಿತಿ ಸಿದ್ದಪಡಿಸಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ದಾವಣಗೆರೆ ತಹಶೀಲ್ದಾರ್ ಬಿ.ಎನ್.ಗಿರೀಶ್ ಮಾತನಾಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು. ಕರೆ ಮಾಡಿದರೆ ಯಾವುದೇ ಕ್ಷಣದಲ್ಲಿಯೂ ಸಹ ಅಧಿಕಾರಿಗಳು ಸ್ಪಂದಿಸಬೇಕು. ಸಭೆಗೆ ಹಾಜರಾಗಲು ನಮ್ಮ ಹತ್ತಿರ ವಾಹನವಿಲ್ಲ, ಮಾಹಿತಿ ಕಳುಹಿಸಲು ಟೈಪಿಸ್ಟ್‍ಗಳಿಲ್ಲ, ಸ್ಟಾಫ್ ಇಲ್ಲ, ಫೋನ್ ಇಲ್ಲ, ವಾಟ್ಸಾಪ್ ಇಲ್ಲ, ಮೇಲ್ ಮಾಡಲು ಬರುವುದಿಲ್ಲ ಎಂಬ ಯಾವುದೇ ಕಥೆ ಹೇಳಬಾರದು ಎಂದರು.
ಕೂಡಲೇ ಪ್ರತಿಯೊಬ್ಬರು ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಕೊರೊನಾ ವೈರಸ್ ಕುರಿತಾದ ಮಾಹಿತಿ ಲಭಿಸುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಹಾಗೇ ಅಧಿಕಾರಿಗಳು ಸಹ ಈ ಆ್ಯಪ್ ಕಡ್ಡಾಯವಾಗಿ ಹೊಂದಿರಬೇಕು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ದಾವಣಗೆರೆ ಇಓ ದಾರುಕೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್, ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.