ಡಿವಿಜಿ ಸುದ್ದಿ, ರಾಮನಗರ: ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮತ್ತು ರೇವತಿ ವಿವಾಹ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ಕೊರೊನಾ ಭೀತಿ ನಡುವೆಯೂ ಸರಳವಾಗಿ ನಡೆಯಿತು.
ಕಲ್ಯಾಣ ಮಹೋತ್ಸವಕ್ಕಾಗಿ ಕೇತಗಾನಹಳ್ಳಿಯಲ್ಲಿನ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ಸಪ್ತಪದಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿತ್ತು. ಶುಕ್ರವಾರ ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ನಿಖಿಲ್ ಕುಮಾರಸ್ವಾಮಿ ರೇವತಿಯ ಅವರಿಗೆ ಮಾಂಗಲ್ಯಧಾರಣೆ ಮಾಡಿದರು. ಗಣ್ಯರು, ಹಿತೈಷಿಗಳು ನವ ದಂಪತಿಗಳಿಗೆ ಆಶೀರ್ವಾದ ಮಾಡಿದರು.
ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ದಂಪತಿ, ಎಚ್‍ಡಿ ಕುಮಾರಸ್ವಾಮಿ ದಂಪತಿ ಹಾಗೂ ಉದ್ಯಮಿ ಮಂಜುನಾಥ್ ದಂಪತಿ ಸಮ್ಮುಖದಲ್ಲಿ ನಿಖಿಲ್ ಮತ್ತು ರೇವತಿ ವಿವಾಹ ಕಾರ್ಯಕ್ರಮ ನೆರವೇರಿದೆ. ನಿಖಿಲ್ ಹಾಗೂ ರೇವತಿ ಮನೆಯವರು, ಆಪ್ತರಿಗಷ್ಟೇ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು.
ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಕುಟುಂಬದವರು ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.
ಈ ಹಿಂದೆ ರಾಮನಗರದ ಜನಪದ ಲೋಕದ ಬಳಿ ವಿವಾಹ ನಡೆಸಲು ನಿರ್ಧರಿಸಲಾಗಿತ್ತು.ಆದರೆ ಕೊರೊನಾ ಪರಿಣಾಮದಿಂದ ಬೆಂಗಳೂರಿನಲ್ಲಿ ಕುಮಾರಸ್ವಾಮಿ ನಿವಾಸಕ್ಕೆ ಶಿಫ್ಟ್ ಆಗಿತ್ತು. ಈಗ ಬೆಂಗಳೂರು ರೆಡ್ ಜೋನ್‍ನಲ್ಲಿ ಇರುವುದರಿಂದ ಮತ್ತೆ ರಾಮನಗರದಲ್ಲಿ ಮದುವೆ ಮಾಡಲು ನಿರ್ಧರಿಸಿದ್ದರು.