ನವದೆಹಲಿ: ಕೊರೊನಾ ಭೀತಿ ಹಿನ್ನೆಲೆ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯವಾಳಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನಿರ್ದಿಷ್ಟ ಅವಧಿಗೆ ಮುಂದೂಡಿದೆ.
ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ವಿಸ್ತರಣೆಯಾದ ಬೆನ್ನಲ್ಲೇ ಬಿಸಿಸಿಐ ಪಂದ್ಯಾವಳಿಯನ್ನು ಮುಂದೂಡಿದೆ. ಈ ವರ್ಷ ಐಪಿಎಲ್ ಪಂದ್ಯಾವಳಿ ಮಾರ್ಚ್ 29ರಿಂದ ಆರಂಭವಾಗಬೇಕಿತ್ತು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಏಪ್ರಿಲ್ 15ರ ವರೆಗೆ ಮುಂದೂಡಲಾಗಿತ್ತು. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಮೇ 3ರ ವರೆಗೆ ಲಾಕ್‌ಡೌನ್ ವಿಸ್ತರಿಸಿದ್ದರಿಂದ ಐಪಿಎಲ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಜಾಗತಿಕ ಆರೋಗ್ಯ ಕಾಳಜಿ ಮತ್ತು ಕೊರೊನಾ ತಡೆಯುವ ನಿಟ್ಟಿನಲ್ಲಿ ಮುಂದೂಡಲಾಗಿದೆ. ಈ ನಿರ್ಧಾರವನ್ನು ನಮ್ಮ ಎಲ್ಲ ಫ್ರಾಂಚೈಸಿ ಮಾಲೀಕರು, ಪ್ರಸಾರಕರು, ಪ್ರಾಯೋಜಕರು ಹಾಗೂ ಬಂಡವಾಳ ಹೂಡಿಕೆದಾರರು ಸಮ್ಮತಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.



