ಡಿವಿಜಿ ಸುದ್ದಿ, ಬೆಂಗಳೂರು: ದೇಶದಾದ್ಯಂತ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕೂಲಿ ಕಾರ್ಮಿಕರು, ಬಡವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಘೋಷಿಸುವ ನಿರೀಕ್ಷೆ ಹುಸಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ನಂತರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರು ಇಂದು ದೇಶ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಲಾಕ್ ಡೌನ್ ವಿಸ್ತರಣೆ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ದೇಶದ ಆರ್ಥಿಕ ಪರಿಸ್ಥಿತಿ ತೀರಾ ಕೆಳ ಮಟ್ಟಕ್ಕೆ ಹೋಗಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ನೆರವು ಘೋಷಿಸದೇ ಏಳು ಸೂತ್ರಗಳನ್ನು ಹೇಳಿ ಕೈ ತೊಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಾಕ್ಡೌನ್ನಿಂದ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಕೃಷಿ, ಕಾರ್ಮಿಕರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಯವರು ಆರ್ಥಿಕತೆ ಚೇತರಿಕೆಗೆ ಕ್ರಮ ಕೈಗೊಳ್ಳಬೇಕಿತ್ತು. ಕೋಟ್ಯಂತರ ಮಂದಿ ವಲಸಿಗ ಕಾರ್ಮಿಕರು ಇಂದಿಗೂ ಬೀದಿಯಲ್ಲಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಇದುವರೆಗೂ ಅವರನ್ನು ಮುಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಜನರು ಪ್ರಧಾನಿಯವರ ಮೇಲೆ ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಮೋದಿಯವರು ದೇಶವನ್ನು ಉದ್ದೇಶಿಸಿ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ. ಇತ್ತ ರಾಜ್ಯ ಸರ್ಕಾರ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವುದರಿಂದ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅವರು ದೂರಿದರು.
ಅನಗತ್ಯ ವೆಚ್ಚದ ಮೇಲೆ ಹಿಡಿತ ಇಲ್ಲದಿರುವುದು, ಕೇಂದ್ರದಿಂದ ಬರಬೇಕಾದ ತೆರಿಗೆ ಹಾಗೂ ಜಿಎಸ್ಟಿ ತೆರಿಗೆ ಬಾರದಿರುವುದು, ಹಣಕಾಸು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸದಿರುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಾಡದಿರುವುದು ಆರ್ಥಿಕ ದಿವಾಳಿಗೆ ಕಾರಣ ಎಂದರು.
ರಾಜ್ಯ ಸರ್ಕಾರ ಖಾಲಿಯಾಗಿರುವ ತನ್ನ ಖಜಾನೆ ಭರ್ತಿ ಮಾಡಲು ಬಿಡಿಎ ಕಾರ್ನರ್ ಸೈಟ್ ಗಳ ಹರಾಜಿಗೆ ಮುಂದಾಗಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕದ ಹೊರತು ರಾಜ್ಯ ಸರ್ಕಾರ ಪಾತಾಳಕ್ಕೆ ಇಳಿದಿರುವ ಆರ್ಥಿಕ ಪರಿಸ್ಥಿತಿ ಮೇಲೆತ್ತಲು ಸಾಧ್ಯವಿಲ್ಲ. ನಿವೇಶನಗಳನ್ನು ಹರಾಜಿನಿಂದ 15 ಸಾವಿರ ಕೋಟಿ ಸಂಗ್ರಹಿಸಿ ಖಜಾನೆಗೆ ತುಂಬುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ಗಮನಿಸಿದರೆ ಸರ್ಕಾರದಲ್ಲಿ ದುಡ್ಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.