ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆಯಿಂದ ಹಣ ಬಿಡಿಸಿಕೊಳ್ಳಲು ನೂಕುನುಗ್ಗಲು ಉಂಟಾಗಿತ್ತು.
ಗ್ರಾಮದ ಸುತ್ತಮುತ್ತಲಿನ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳಿಂದ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಸಾವಿರಾರು ಗ್ರಾಹಕರು ಸರ್ಕಾರದಿಂದ ಜನಧನ್ ಖಾತೆ,ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆ,ಉಜ್ವಾಲ ಗ್ಯಾಸ್ ಯೋಜನೆಯಲ್ಲಿ ಬಂದ ಹಣ ಬಿಡಿಸಿಕೊಳ್ಳಲು ಬ್ಯಾಂಕಿಗೆ ಅಗಮಿಸಿದ್ದರು.
ಗ್ರಾಹಕರಿಗೆ ಸೇವೆಯನ್ನು ನೀಡುವಲ್ಲಿ ಬ್ಯಾಂಕ್ ಸಿಬ್ಬಂದಿಗಳು ಹರ ಸಾಹಸ ಪಡುತ್ತಿದ್ದರು. ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಊಟ ನೀರಿಲ್ಲದೆ ಬ್ಯಾಂಕ್ ಮುಂದೆ ಹಣ ಬಿಡಿಸಿಕೊಳ್ಳಲು ಖಾತೆದಾರರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಕುರಿತು ಉಚ್ಚಂಗಿದುರ್ಗದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕೊರೊನ ರೋಗವು ಎಲ್ಲೆಡೆ ಬಹುಬೇಗ ಹರಡುತ್ತಿದ್ದು ದಯವಿಟ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಎಷ್ಟೇ ವಿನಂತಿ ಮಾಡಿದರು ಖಾತೆದಾರರು ಪಾಲಿಸುತ್ತಿಲ್ಲ.
ಕೊರೊನಾ ರೋಗದ ಭೀತಿ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕು. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಬ್ಯಾಂಕಿನ ಮುಂದೆ ಕಾಯುವುದನ್ನು ತಪ್ಪಿಸುವ ಜೊತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಗಬೇಕು. ಇಲ್ಲವಾದಲ್ಲಿ ಕೊರೊನ ರೋಗ ನಿಯಂತ್ರಣಕ್ಕೆ ಸರ್ಕಾರ ಪಟ್ಟ ಕಷ್ಟವೆಲ್ಲ ವ್ಯರ್ಥವಾಗಿ ಹೋಗುತ್ತದೆ ಎಂದು ದಾವಣಗೆರೆ ಪ್ರಾದೇಶಿಕ ವ್ಯವಸ್ಥಾಪಕ ಅಧಿಕಾರಿ ಶಂಕರ್ ಕನವಲ್ಲಿ ತಿಳಿಸಿದರು.
ಸರ್ಕಾರದಿಂದ ಖಾತೆಗೆ ಬಂದಿರುವ ಹಣ ಬಿಡಿಸಿಕೊಳ್ಳಲು ಎಲ್ಲರೂ ಒಂದೇ ಸಾರಿ ಬಂದಿರುವುದರಿಂದ ತೊಂದರೆಯಾಗಿದೆ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಟೋಕನ್ ವ್ಯವಸ್ಥೆ ಮಾಡಲಾಗುತ್ತದೆ. ಬ್ಯಾಂಕ್ ವ್ಯವಸ್ಥಾಪಕ ಅಧಿಕಾರಿಗೆ ಪ್ರತಿ ದಿನ ಒಂದೊಂದು ಊರಿನಲ್ಲಿ ಹಣ ಬಿಡಿಸಿಕೊಳ್ಳುವ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದ್ದೇನೆ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಹಣ ಸಿಗುತ್ತದೆ. ಖಾತೆದಾರರು ಸಹಕರಿಸಬೇಕು ಎಂದು ತಿಳಿಸಿದರು.



