ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ ಕೆಲವರು ಮನೆಯಿಂದ ಹೊರ ಬಂದು ಓಡಾಡುತ್ತಿದ್ದಾರೆ. ಇದನ್ನು ಮಟ್ಟ ಹಾಕಲು ಎಸ್‍ಪಿ ಹನುಮಂತರಾಯ ನೇತೃತ್ವದಲ್ಲಿ ಡ್ರೋಣ್ ಕ್ಯಾಮೆರಾ ಹದ್ದಿನ ಕಣ್ಣಿಡಲಿದೆ.

ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡಿ ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಮೊದಲ ಹಂತದಲ್ಲಿ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಕ್ಯಾಮೆರಾ ಹಾರಿಸಲಾಯಿತು.
ಆಜಾದ್ ನಗರ, ಬಾಷಾನಗರ, ವೆಂಕೊಬ ಕಾಲೊನಿ ಸೇರಿದಂತೆ ಠಾಣೆ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮೆರಾ ಹದ್ದಿನ ಕಣ್ಣಿಟ್ಟಿದೆ. ಇದಲ್ಲದೆ ಮನೆಯಿಂದ ಹೊರಗಡೆ ಬಂದರೆ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ನೀಡಲಾಗುತ್ತಿದೆ.

ಈ ಪ್ರದೇಶದ ಪ್ರತಿಯೊಂದು ಗಲ್ಲಿಗಲ್ಲಿಗಳಲ್ಲಿ ಡ್ರೋಣ್ ಕ್ಯಾಮೆರಾದ ಮೂಲಕ ಕಣ್ಗಾವಲು ಇರಲಿದ್ದು, ಖಾಲಿ ಜಾಗದಲ್ಲಿ ಕ್ರಿಕೆಟ್ ಆಡುವವರ, ಗುಂಪು ಸೇರುವವರ ಪತ್ತೆಗೆ ಡ್ರೋಣ್ ಕ್ಯಾಮೆರಾ ಬಳಕೆ ಆಗಲಿದೆ. ಡ್ರೋಣ್ ಕಂಡ ಕೆಲವರು ಅಚ್ಚರಿಯಿಂದ ನೋಡಿದ ದೃಶ್ಯಗಳು, ಗುಂಪು ಸೇರಿ ಮಾತನಾಡವುದು, ಕ್ರಿಕೆಟ್ ಆಡುವ ಯುವಕರ ದೃಶ್ಯಗಳು ಡ್ರೋಣ್ ನಲ್ಲಿ ಸೇರೆಯಾಗಿವೆ.

ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುವವರ ಪತ್ತೆಗೆ ಜಿಲ್ಲಾ ಪೊಲೀಸ್ ಹೊಸ ಪ್ರಯೋಗ ಮಾಡಿದೆ.ಡ್ರೋಣ್ ಕ್ಯಾಮೆರಾ ಎರಡು ಕಿಲೋಮೀಟರ್ ವ್ಯಾಪ್ತಿಯನ್ನು ಕವರ್ ಮಾಡುವ ಸಾಮರ್ಥ್ಯ ಹೊಂದಿದ್ದು, ಸುಮಾರು 700 ಮೀಟರ್ ಎತ್ತರಕ್ಕೆ ಹಾರುತ್ತದೆ.



