ನವದೆಹಲಿ: ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲರು ಹೆಗಲಿಗೆ ಹೆಗಲು ಕೊಟ್ಟು ಹೋರಾಡಬೇಕಿದೆ. ನಾನು ನಿಮಗಾಗಿ ದಿನದ 24 ಗಂಟೆಯೂ ಕೆಲಸ ಮಾಡಲು ಸಿದ್ಧವಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದರು. ಲಾಕ್ಡೌನ್ ವಿಸ್ತರಣೆ ಮಾಡಬೇಕಾ..? ಬೇಡವೇ ಎನ್ನುವ ವಿಚಾರವಾಗಿ ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟಲು ರಾಜ್ಯಗಳು ಏನೇನು ಕ್ರಮ ಕೈಗೊಂಡಿವೆ ಎನ್ನುವ ಬಗ್ಗೆಯೂ ಅವರು ಮಾಹಿತಿ ಪಡೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಲಾಕ್ಡೌನ್ ವಿಸ್ತರಣೆಗೆ ಮನವಿ ಮಾಡಿದ್ದಾರೆ. ದೇಶದಾದ್ಯಂತ ಏಪ್ರಿಲ್ 30ರ ವರೆಗೆ ಲಾಕ್ಡೌನ್ ವಿಸ್ತರಿಸಬೇಕು ಎಂದು ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ.ಪಂಜಾಬ್, ಒಡಿಶಾ ಸೇರಿ ಕೆಲವು ರಾಜ್ಯಗಳು ಈಗಾಗಲೇ ಏಪ್ರಿಲ್ 30ರ ವರೆಗೆ ಲಾಕ್ಡೌನ್ ವಿಸ್ತರಣೆ ನಿರ್ಧಾರ ಘೋಷಿಸಿವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಲಿದ್ದು, ಮುಂದಿನ ನಡೆಯ ಬಗ್ಗೆ ಯಡಿಯೂರಪ್ಪ ಈ ವಿಡಿಯೋ ಸಂವಾದಲ್ಲಿ ವೇಳೆ ವಿಚಾರ ವಿನಿಮಯ ಮಾಡಲಿದ್ದಾರೆ. ಮುಖ್ಯಮಂತ್ರಿ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭಾಗಿಯಾಗಲಿದ್ದಾರೆ. ವಿಡಿಯೋ ಸಂವಾದ ಆರಂಭಕ್ಕೂ ಮೊದಲು ಯಡಿಯೂರಪ್ಪ ಗೃಹ ಕಚೇರಿ ಕೃಷ್ಣದಲ್ಲಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿ ಮಾಹಿತಿ ಪಡೆದರು.



