ಕೊರೊನಾ ಭೀತಿ : ಟೆಲಿಮೆಡಿಸಿನ್, ಮೊಬೈಲ್ ಮೂಲಕ ವೈದ್ಯಕೀಯ ಸೇವೆ ನೀಡಿ ; ಡಿಸಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ದಾವಣಗೆರೆ : ಕೊರೊನಾ ಭೀತಿ ಹಿನ್ನೆಲೆ ಎಲ್ಲ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ತೆರೆದು ವೈದ್ಯಕೀಯ ಸೇವೆ ನೀಡಬೇಕು. ಟೆಲಿಮೆಡಿಸಿನ್ ಮೂಲಕ, ಸಣ್ಣ ಪುಟ್ಟ ತೊಂದರೆಗಳಿಗೆ ಮೊಬೈಲ್ ಫೋನ್ ಮೂಲಕ ಸಮಸ್ಯೆ ಆಲಿಸಿ ವಾಟ್ಸಾಪ್ ಮೂಲಕ ಪ್ರಿಸ್ಕ್ರಿಪ್ಶನ್ ನೀಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ಮಾಸ್ಕ್, ಪಿಪಿಇ, ಸಾರಿಗೆ ಸೇರಿದಂತೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಜಿಲ್ಲಾಡಳಿತ ನೀಡಲಿದ್ದು, ಖಾಸಗಿ ಆಸ್ಪತ್ರೆಯವರೂ ಕೂಡ ಕೋವಿಡ್19 ವಿರುದ್ದ ಸಮರ ಸಾರಲು ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.

ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ಸಂಘ ಐಎಂಎ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿ, ಕೊರೊನಾ ಸೋಂಕು ವಿರುದ್ಧ ಹೋರಾಡಲು ಎಲ್ಲ ಖಾಸಗಿ ಆಸ್ಪತ್ರೆಗಳನ್ನು ತಮ್ಮ ಸೇವೆಯನ್ನು ನೀಡಬೇಕು. ಸರ್ಕಾರದ ಮುಂದಿನ ಆದೇಶ ಅಥವಾ ಲಾಕ್‍ಡೌನ್ ಮುಗಿಯುವತನಕ ಆಸ್ಪತ್ರೆ ಬಂದ್ ಎಂಬ ಫಲಕಗಳನ್ನು ಅನೇಕ ಆಸ್ಪತ್ರೆಗಳಲ್ಲಿ ಬಿತ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಖಾಸಗಿ ಆಸ್ಪತ್ರೆಗಳು ತೆರೆದು ಸೇವೆ ನೀಡುವಂತೆ ಆದೇಶಿಸಿದೆ.

ಜಿಲ್ಲೆಯಲ್ಲಿ ಇಂದು ಕೊರೊನಾ ವೈರಸ್ ಒಂದು ಪ್ರಕರಣ ಪಾಸಿಟಿವ್ ಎಂದು ದೃಢಪಟ್ಟಿದ್ದು, ಈ ಸೋಂಕಿನ ವಿರುದ್ದ ಹೋರಾಡಲು ಸರ್ಕಾರಿ ಆಸ್ಪತ್ರೆಗಳೊಂದಿಗೆ ಎಲ್ಲ ಖಾಸಗಿ ಆಸ್ಪತ್ರೆಗಳು ಕೈ ಜೋಡಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ಸಹಕಾರ, ಸೌಲಭ್ಯಗಳನ್ನು ಜಿಲ್ಲಾಡಳಿತ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಫ್ಲೂ ಮತ್ತು ಫಿವರ್ ಸೆಂಟರ್ :

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಮುಂಭಾಗದಲ್ಲಿ ಫ್ಲೂ ಸೆಂಟರ್‍ನ್ನು ಮತ್ತು ಒಳ ಆವರಣದಲ್ಲಿ ಫಿವರ್ ಸೆಂಟರ್ ತೆರೆಯಲಾಗಿದ್ದು, ಶೀತ, ಕೆಮ್ಮು, ಗಂಟಲುನೋವು, ತಲೆನೋವು, ಜ್ವರ ಲಕ್ಷಣ ಇರುವವರು ಇಲ್ಲಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ನಗರದಲ್ಲಿ ಚಿಗಟೇರಿ ಸೇರಿದಂತೆ ಒಟ್ಟು 4 ಕಡೆ ಮತ್ತು ಜಿಲ್ಲೆಯಾದ್ಯಂತ ಒಟ್ಟು 12 ಕಡೆ ಫ್ಲೂ ಸೆಂಟರ್ ತೆರೆಯಲು ತಯಾರಿ ನಡೆಸಲಾಗಿದೆ ಎಂದರು.

ವೈದ್ಯರು ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ರೋಗಿಯನ್ನು ಪರೀಕ್ಷಿಸಬಹುದು. ಖಾಸಗಿ ವೈದ್ಯರಿಗೆ ಪಿಪಿಇ ಒದಗಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ.

ಮೆಡಿಕಲ್ ಶಾಪ್‍ಗಳಲ್ಲಿ ವೈದ್ಯರ ಸಲಹೆ ಇಲ್ಲದೇ ಪ್ಯಾರಾಸಿಟಮೊಲ್ ಮಾತ್ರೆ ನೀಡುವಂತಿಲ್ಲ

ಜಿಲ್ಲೆಯಲ್ಲಿ ಈಗಾಗಲೇ ಒಂದು ಕೊರೊನಾ ವೈರಸ್‍ನ ಹೊಸ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಯಾರೇ ಶೀತ, ಕೆಮ್ಮು, ತಲೆನೋವು, ಜ್ವರಕ್ಕೆ ಸ್ವಂತ ಔಷಧಿ ತೆಗೆದುಕೊಳ್ಳುವಂತಿಲ್ಲ. ತಲೆನೋವು ಎಂದು ಮೆಡಿಕಲ್ ಶಾಪ್‍ಗೆ ತೆರಳಿ ಪ್ಯಾರಾಸಿಟಮೊಲ್ ಮಾತ್ರೆ ತೆಗೆದುಕೊಂಡು ಸೇವಿಸುವಂತಿಲ್ಲ. ಹೀಗೆ ಮಾಡುವುದರಿಂದ ಕೊರೊನಾ ಪತ್ತೆ ಹಚ್ಚುವುದು ನಿಧಾನವಾಗಿ ಅಪಾಯವುಂಟಾಗುವ ಸಾಧ್ಯತೆ ಇರುವುದರಿಂದ ಇನ್ನು ಮುಂದೆ ಯಾವುದೇ ಮೆಡಿಕಲ್ ಶಾಪ್‍ನವರು ವೈದ್ಯರ ಪ್ರಿಸ್‍ಕ್ರಿಪ್ಶನ್
ಪ್ಯಾರಾಸಿಟಮೊಲ್ ಅಥವಾ ಇನ್ನಾವುದೇ ಮಾತ್ರೆ, ಔಷಧಿ ನೀಡಬಾರದೆಂದು ಸೂಚನೆ ನೀಡಿದರು. ಹಾಗೂ ಯಾವುದೇ ವ್ಯಕ್ತಿ ಶೀತ, ತಲೆನೋವು, ಗಂಟಲು ನೋವು, ಕೆಮ್ಮಿನ ಲಕ್ಷಣ ಇದ್ದಲ್ಲಿ ಚಿಗಟೇರಿ ಆಸ್ಪತ್ರೆ ಅಥವಾ ತಮ್ಮ ಹತ್ತಿರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸಲಹೆ ಮತ್ತು ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು.

ಆಸ್ಪತ್ರೆ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ : ಐಎಂಎ ಪದಾಧಿಕಾರಿಗಳು ಸ್ವಂತ ವಾಹನ ಇರುವವರು ಆಸ್ಪತ್ರೆ ಕರ್ತವ್ಯಕ್ಕೆ ಬರುತ್ತಿದ್ದಾರೆ. ಆದರೆ ಲಾಕ್‍ಡೌನ್ ಹಿನ್ನೆಲೆ ಸಾರ್ವಜನಿಕ ಸಾರಿಗೆ ಬಂದ್ ಆಗಿರುವ ಕಾರಣ ಸ್ವಂತ ವಾಹನ ಇಲ್ಲದೇ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲವೆಂದರು. ಜಿಲ್ಲಾಧಿಕಾರಿಗಳು ಮತ್ತು ಎಸ್‍ಪಿ ಯವರು ಎಲ್ಲಿಂದ ಎಲ್ಲಿಗೆ ತಮ್ಮ ಸಿಬ್ಬಂದಿಗಳು ಬರಬೇಕೆಂದು ಪಟ್ಟಿ ನೀಡಿದರೆ ಆ ಕಡೆಗಳಿಗೆ ಸಾರಿಗೆ ವ್ಯವಸ್ಥೆ ಮಾಡಿಕೊಲಾಗುವುದು ಎಂದು ತಿಳಿಸಿದರು.

60 ವರ್ಷ ಮೇಲ್ಪಟ್ಟ ವೈದ್ಯರಿಗೆ ವಿನಾಯಿತಿ: ಕೊರೊನೊ ಸೋಂಕು 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚಾಗಿ ಕಾಡುವ ಸಂಭವ ಇರುವುದರಿಂದ 60 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಖಾಸಗಿ ಮತ್ತು ಸಾರ್ವಜನಿಕ ವಲಯದ ವೈದ್ಯರಿಗೆ ಸೇವೆಯಿಂದ ವಿನಾಯಿತಿ ನೀಡಲಾಗುವುದು ಎಂದು ಡಿಸಿ ತಿಳಿಸಿದರು.

ಆಸ್ಪತ್ರೆ ಗುರುತಿನ ಚೀಟಿ ಸಾಕು : ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ಆಸ್ಪತ್ರೆಯವರು ತಮ್ಮ ವೈದ್ಯರು, ಸಿಬ್ಬಂದಿ, ಆಯಾ ಇತರೆ ಕೆಲಸಗಾರರಿಗೆ ನೀಡಲಾಗಿರುವ ಗುರುತಿನ ಚೀಟಿ ಸಾಕು. ಇವರಿಗೆ ಪ್ರತ್ಯೇಕ ಜಿಲ್ಲಾಡಳಿತದ ಗುರುತಿನ ಚೀಟಿ ಅವಶ್ಯಕತೆ ಇಲ್ಲ.
ಹನುಮಂತರಾಯ, ಎಸ್.ಪಿ
ಸಭೆಯಲ್ಲಿ ಪಾಲಿಕೆ ಮಹಾಪೌರರಾದ ಬಿ.ಜೆ. ಅಜಯ್‍ಕುಮಾರ್, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಿಎಸ್ ಡಾ.ನಾಗರಾಜ್, ಇತರೆ ಅಧಿಕಾರಿಗಳು ಹಾಜರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *