ಡಿವಿಜಿಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ವಿಪಕ್ಷ ನಾಯಕರಾಗಿ ಕಾಂಗ್ರೆಸ್ ಹಿರಿಯ ಸದಸ್ಯ ಎ.ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಪಿಸಿಸಿ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಮುಖಂಡರ ಒಮ್ಮತದ ಮೇರೆಗೆ ಎ. ನಾಗರಾಜ್ ಅವರನ್ನು ಪಾಲಿಕೆ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಪಾಲಿಕೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದರೂ ಸಹ, ಬಿಜೆಪಿಯ ಒಳ ಸಂಚಿನಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೈ ತಪ್ಪಿದೆ. ಮುಂಬರುವದಿನದಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದು, ಇದೀಗ ನಾವು ವಿಪಕ್ಷ ಸ್ಥಾನದಲ್ಲಿ ಕುಳಿತು ಜನಪರ ಕೆಲಸ ಮಾಡುವುದಾಗಿ ತಿಳಿಸಿದರು.
ವಿಪ್ ಉಲ್ಲಂಘಿಸಿದವರಿಗೆ ಸದಸ್ಯತ್ವ ರದ್ದತಿಗೆ ಕ್ರಮ
ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ವಿಪ್ ಉಲ್ಲಂಘಸಿದ ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಅವರು ನೋಟಿಸ್ ಗೆ ಸಮರ್ಪಕವಾಗಿ ಉತ್ತರ ನೀಡದಿದ್ದರೆ, ವರಿಷ್ಠರ ಮಾರ್ಗದರ್ಶನದಂತೆ ಅವರ ಸದಸ್ಯ ರದ್ದು ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಜನರ ಬಗ್ಗೆ ಕಾಳಜಿಯೇ ಇಲ್ಲ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಭೀತಿ ಇದ್ದು, ಈ ಬಗ್ಗೆ ಮುಂಜಾಗೃತ ಸಭೆ ನಡೆಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಪತ್ತೆ ಇಲ್ಲ .ಕಳೆದ ಮೂರ್ನಾಲ್ಕು ತಿಂಗಳಿನಿಂದ ಜಿಲ್ಲಾ ಉಸ್ತುವಾರಿ ಸಚಿವರು ದಾವಣಗೆರೆ ಕಡೆ ತಿರುಗಿ ನೋಡಿಲ್ಲ.
ಎಲ್ಲಾ ಸಭೆಗಳನ್ನು ಸಿಎಂ ರಾಜಕೀಯ ಕಾರ್ಯದರ್ಶಿ, ರೇಣುಕಾಚಾರ್ಯ, ಸಂಸದ ಜಿ.ಎಂ ಸಿದ್ದೇಶ್ವರ್ ನಡೆಸುತ್ತಿದ್ದಾರೆ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೇಜಾರಾಗಿಬೇಕು. ಯಾಕೆಂದ್ರೆ, ಕಾಮಗಾರಿ ಪರ್ಸೆಂಟೇಜ್ ಇವರಿಗೆ ಹೋಗುತ್ತದೆ ಎಂದು ಬೇಜಾರು ಆಗಿ ಹಿಂದೆ ಸರಿದಿರಬೇಕು ಎಂದು ವ್ಯಂಗ್ಯವಾಡಿದರು.
ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಈಗಾಗಲೇ ಬೇಸಿಗೆ ಆರಂಭವಾಗಿದ್ದು ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಇದರಿಂದ 8 ರಿಂದ 10 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ನಗರಕ್ಕೆ ನೀರಿನ ಮೂಲವಾಗಿರುವ ಕುಂದುವಾಡ ಕೆರೆ ಮತ್ತು ಟಿವಿ ಟೆಷನ್ ಕೆರೆಗಳಲ್ಲಿ ಅಗತ್ಯವಾದಷ್ಟು ನೀರು ಸಂಗ್ರಹವಾಗಿಲ್ಲ. ಈ ಕಾಡಾ ಸಭೆ ನಡೆಸಿ ನೀರು ಹರಿಸುವಂತೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕುಂದುವಾಡ ಕೆರೆ ನವೀಕರಣಕ್ಕಾಗಿ ಹಣ ಬಿಡುಗಡೆಯಾಗಿದೆ. ಆದರೆ, ಬೇಸಿಗೆಯಲ್ಲಿ ನೀರಿನ ಅಭಾವ ಇರುವುದರಿಂದ ಕಾಮಗಾರಿಯನ್ನು ಮಳೆಗಾಲದಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆ.ಜಿ.ಶಿವಕುಮಾರ್, ಅಬ್ದುಲ್ ಲತೀಫ್, ಮಂಜುನಾಥ್, ಮುಜಾಹಿದ್ದ, ಜ.ಡಿ . ಪ್ರಕಾಶ್, ಶ್ರೀಕಾಂತ್ , ಯುವರಾಜ್, ಸುರೇಂದ್ರ ಸಿಂಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.