ಡಿವಿಜಿಸುದ್ದಿ.ಕಾಂ ದಾವಣಗೆರೆ: ಆತ್ಮಹತ್ಯೆ ಮಾಡಿಕೊಳ್ಳಿವ ವ್ಯಕ್ತಿ ದುರ್ಬಲ ಮನಸ್ಸಿನವನು ಅಂತಾ ಎಲ್ಲರು ತಿಳಿದುಕೊಂಡಿರುತ್ತಾರೆ. ಆದರೆ, ಅವನು ಶಕ್ತಿಯುತನಾಗಿರುತ್ತಾನೆ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ.ಡಿ. ರಾಘವನ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವಿದ್ಯಾರ್ಥಿ ಆಪ್ತ ಸಲಹಾ ಕೋಶ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಸಣ್ಣ ಪರಿಹಾರಕ್ಕೆ ಹಪಹಪಿಸುತ್ತಿರುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ವ್ಯಕ್ತಿಗೆ ಮನೋ ವೈದ್ಯರಿಂದ ಆಪ್ತ ಸಮಲೋಚನೆ ನಡೆಸಿದರೆ, ಅವರನ್ನು ಕಂಡಿತವಾಗಿ ಸಹಜ ಸ್ಥಿತಿಗೆ ತರಲು ಸಾಧ್ಯವಿದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಯೂ ಬೌದ್ಧಿಕ ಮಾನಸಿಕ, ಸಾಮಾಜಿಕ ಮತ್ತು ದೈಹಿಕವಾಗಿ ಆರೋಗ್ಯವಂತನಾಗಿದ್ದರೆ, ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತಗೆದುಕೊಳ್ಳುವುದಿಲ್ಲ. ಸಮಾಜ, ಪೋಷಕರು,ಸ್ನೇಹಿತರ ಒಡನಾಟದಿಂದ ಮಾನಸಿಕ ಖಿನ್ನತೆಯಿಂದ ಹೊರ ಬರಲು ಸಾಧ್ಯವಿದೆ ಎಂದರು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಮುರುಳಿಧರ ಪಿ.ಡಿ ಮಾತನಾಡಿ, ವಿಶ್ವದಲ್ಲಿ ೪೦ ನಿಮಿಷಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಒಂದು ಮಿಲಿಯನ್ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವರ ಪಟ್ಟಿಯಲ್ಲಿ ಭಾರತ ೧೩ ನೇ ಸ್ಥಾನದಲ್ಲಿದೆ. ಕಾಯಿಲೆ ಬರುವ ಮುನ್ನ ಮುಂಜಾಗೃತಿ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದರು.
`ಆತ್ಮಹತ್ಯೆ ತಡೆಗಟ್ಟುವ’ ಕುರಿತು ಜಿಲ್ಲಾ ಮನೋವೈದ್ಯ ಡಾ. ಗಂಗಂ ಸಿದ್ದಾರೆಡ್ಡಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮನೋ ಶಾಸ್ತ್ರಜ್ಞ ಎಸ್. ವಿಜಯ ಕುಮಾರ್, ಪ್ರಾಂಶುಪಾಲ ಪ್ರೊ.ಟಿ.ಕೆ. ಶಂಕರಯ್ಯ, ವಿದ್ಯಾರ್ಥಿ ಆಪ್ತ ಸಲಹ ಕೋಶದ ಸಂಚಾಲಕ ರಂಗಸ್ವಾಮಿ ಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 98444603336, 7483892205



